ADVERTISEMENT

ಹುಬ್ಬಳ್ಳಿ: ಉರುಳಿದ ಶಿವಾಜಿ ಮೂರ್ತಿ; ಅಧಿಕಾರಿಗಳ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2021, 12:51 IST
Last Updated 23 ಮಾರ್ಚ್ 2021, 12:51 IST
   

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಪಕ್ಕದ ಚಿಟಗುಪ್ಪಿ ಉದ್ಯಾನದಲ್ಲಿ ಪ್ರತಿಷ್ಠಾಪಿಸಿರುವ ಛತ್ರಪತಿ ಶಿವಾಜಿ ಮಹಾರಾಜರ ಕಂಚಿನ ಮೂರ್ತಿ ಮಂಗಳವಾರ ಉರುಳಿ ಬಿದ್ದಿದೆ.

ಕುದುರೆ ಮೇಲೆ ಕುಳಿತು ಖಡ್ಗ ಹಿಡಿದು ಯುದ್ದೋತ್ಸಾಹ ತೋರುತ್ತಿದ್ದ ಶಿವಾಜಿ ಬೃಹತ್ ಮೂರ್ತಿ ಮಧ್ಯಾಹ್ನದ ವೇಳೆ ಏಕಾಏಕಿ ಉರುಳಿದೆ. ಅಲ್ಲಿಯೇ ಅಕ್ಕಪಕ್ಕ ಮರದ ನೆರಳಿನಲ್ಲಿ ವಿಶ್ರಾಂತಿ ಪಡೆಯುತ್ತಿದ ಸಾರ್ವಜನಿಕರು ಮೂರ್ತಿ ಬೀಳುತ್ತಿದ್ದಂತೆ ಒಮ್ಮೆಲೆ ಹೌಹಾರಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಶಿವಾಜಿ ಮೂರ್ತಿ ಪ್ರತಿಷ್ಠಾಪನಾ ಸಮಿತಿ ಸದಸ್ಯರು, ಮರಾಠ ಸಮಾಜದವರು ಪಾಲಿಕೆ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು. ಕಳಪೆ ಕಾಮಗಾರಿಯಿಂದಾಗಿ ಮೂರ್ತಿ ಉರುಳಿ ಬಿದ್ದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದಾರವಾಡದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ್, ವಿಷಯ ತಿಳಿಯುತ್ತಿದ್ದಂತೆ ಹುಬ್ಬಳ್ಳಿಗೆ ಬಂದು ಘಟನಾ ಸ್ಥಳಕ್ಕೆ ತೆರಳಿದರು. ಅಧಿಕಾರಿಗಳೊಂದಿಗೆ ಮಾಹಿತಿ ಪಡೆದು, ಮರಾಠ ಸಮಾಜದ ಮುಖಂಡರ ಜೊತೆ ಚರ್ಚಿಸಿದರು.

ADVERTISEMENT

ಮೂರ್ತಿ ತಯಾರಾಗುವವರೆಗೆ ಇದೇ ಸ್ಥಳದಲ್ಲಿ ಬೇರೊಂದು ಚಿಕ್ಕ ಮೂರ್ತಿ ಪ್ರತಿಷ್ಠಾಪಿಸಬೇಕು. ಮೂರ್ತಿ ತಯಾರಿಸಲು ಗುತ್ತಿಗೆ ಪಡೆದವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಮರಾಠ ಸಮಾಜದವರು ಆಯುಕ್ತರಲ್ಲಿ ಆಗ್ರಹಿಸಿದರು.

ಮರಾಠ ಸಮಾಜದ ಅಧ್ಯಕ್ಷ ಅರುಣ ಜಾಧವ, 'ಮೂರು ವರ್ಷದ ಹಿಂದೆ ಇಂದೊರನಿಂದ ತರಲಾಗಿದ್ದ ಮೂರ್ತಿಯನ್ನು ಕಳೆದ ವರ್ಷ ಪ್ರತಿಷ್ಠಾಪನೆ ಮಾಡಲಾಗಿತ್ತು. ಮೂರ್ತಿ ತಯಾರಿಸುವಾಗ ಗುಣಮಟ್ಟ ಕಾಯ್ದುಕೊಂಡಿಲ್ಲ ಎಂದು ಆಗಲೇ ಆಕ್ಷೇಪ ವ್ಯಕ್ತಪಡಿಸಿ, ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಅವರ ನಿರ್ಲಕ್ಷ್ಯದಿಂದಲೇ ಮೂರ್ತಿ ಉರುಳಿ ಬಿದ್ದಿದೆ' ಎಂದು ಆರೋಪಿಸಿದರು.

'ಮೂರು ವರ್ಷದ ಹಿಂದೆ ಮೂರ್ತಿ ಬಂದಾಗಲೇ, ಅದು ಬಿರುಕು ಬಿಟ್ಟಿದ್ದು, ಮೂರ್ತಿ ತಯಾರಿಕೆಯ ಗುತ್ತಿಗೆ ಪಡೆದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಮಾಜದವರು ಒತ್ತಾಯಿಸಿದ್ದಾರೆ. ಯಾವ ಕಾರಣಕ್ಕೆ ಮೂರ್ತಿ ಉರುಳಿ ಬಿದ್ದಿದೆ ಎಂದು ಪರಿಶೀಲಿಸಲಾಗುವುದು. ಹೊಸ ಮೂರ್ತಿ ತಯಾರಿಕೆಗೆ ಗುತ್ತಿಗೆ ನೀಡುವ ಪೂರ್ವ, ಸಮಾಜದ ಮುಖಂಡರ ಜೊತೆ ಚರ್ಚಿಸಲಾಗುವುದು' ಎಂದು ಪಾಲಿಕೆ ಆಯುಕ್ತ ಸುರೇಶ ಇಟ್ನಾಳ್ ಹೇಳಿದರು.

₹ 12.50 ಲಕ್ಷದ ಕಂಚಿನ‌ ಮೂರ್ತಿ
₹ 12.50 ಲಕ್ಷ ವೆಚ್ಚದಲ್ಲಿ 12 ಅಡಿ ಎತ್ತರದ ಛತ್ರಪತಿ ಶಿವಾಜಿ ಮಹಾರಾಜರ ಕಂಚಿನ ಮೂರ್ತಿಯನ್ನು‌ ಇಂದೋರ ಕಲಾವಿದರಿಂದ ತಯಾರಿಸಲಾಗಿತ್ತು. ಅಲ್ಲಿಂದ 2018ರಲ್ಲಿ ಹುಬ್ಬಳ್ಳಿಗೆ ತರಲಾಗಿತ್ತು. ಎರಡು ವರ್ಷ ಬಿಟ್ಟು, 2020ರ ಜನವರಿಯಲ್ಲಿ ಮೂರ್ತಿಯನ್ನು ಚಿಟಗುಪ್ಪಿ ಉದ್ಯಾನದಲ್ಲಿ ಪ್ರತಿಷ್ಠಾಪಿಸಲಾಗಿತ್ತು. ಆ ವೇಳೆ ಮೂರ್ತಿ ಗುಣಮಟ್ಟದ ಬಗ್ಗೆ ಆಕ್ಷೇಪ ಸಹ ವ್ಯಕ್ತವಾಗಿತ್ತು. ಮೂರ್ತಿ ಪ್ರತಿಷ್ಠಾಪಿಸಿದ ತಳಭಾಗದ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ.‌ ಅಷ್ಟರಲ್ಲೇ ಮೂರ್ತಿ ಬಿದ್ದು, ಶಿವಾಜಿ ತಲೆ ಭಾಗ, ಖಡ್ಗ ಮುರಿದಿರುವುದು ಮರಾಠ ಸಮುದಾಯದವರ ಆಕ್ರೋಶಕ್ಕೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.