ADVERTISEMENT

ಹುಬ್ಬಳ್ಳಿ | ಪಕ್ಷಿ ರಕ್ಷಣೆಗಿಲ್ಲ ಸೂಕ್ತ ವ್ಯವಸ್ಥೆ

ಸಕಾಲಕ್ಕೆ ಚಿಕಿತ್ಸೆ ಸಿಗದೆ ಸಾವು: ಆಡಳಿತದ ವಿರುದ್ಧ ಪಕ್ಷಿಪ್ರಿಯರ ಆಕ್ರೋಶ

ಗೋವರ್ಧನ ಎಸ್‌.ಎನ್‌.
Published 18 ಜನವರಿ 2025, 6:00 IST
Last Updated 18 ಜನವರಿ 2025, 6:00 IST
ಪಕ್ಷಿ ರಕ್ಷಕ ವಿಕಾಸ್‌ ಕೆ. ಲುಂಕರ್‌ ಅವರು ರಕ್ಷಿಸಿದ ಪಾರಿವಾಳ
ಪಕ್ಷಿ ರಕ್ಷಕ ವಿಕಾಸ್‌ ಕೆ. ಲುಂಕರ್‌ ಅವರು ರಕ್ಷಿಸಿದ ಪಾರಿವಾಳ   

ಹುಬ್ಬಳ್ಳಿ: ತೊಂದರೆಗೀಡಾದ ಪಕ್ಷಿಗಳನ್ನು ಸಕಾಲಕ್ಕೆ ರಕ್ಷಿಸಲು ಸ್ಥಳೀಯ ಆಡಳಿತದಲ್ಲಿ ಸರಿಯಾದ ವ್ಯವಸ್ಥೆ ಇಲ್ಲದಿರುವುದು ಪಕ್ಷಿಪ್ರಿಯರ ಅಸಮಾಧಾನಕ್ಕೆ ಕಾರಣವಾಗಿದೆ.

ಪ್ರಾಣಿ, ಬೃಹತ್‌ ಪಕ್ಷಿಗಳ ದಾಳಿ, ವಿದ್ಯುದಾಘಾತ, ಬಲೆಗಳಲ್ಲಿ ಸಿಲುಕಿಕೊಳ್ಳುವುದು ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ಪಕ್ಷಿಗಳು ಗಾಯಗೊಂಡಾಗ, ಆಘಾತಕ್ಕೊಳಗಾದಾಗ, ಅವುಗಳ ರಕ್ಷಣೆಗೆ ಯಾರಿಗೆ ಕರೆ ಮಾಡಬೇಕೆಂದು ಬಹುತೇಕ ಜನರಿಗೆ ತಿಳಿದಿಲ್ಲ. ಸ್ಥಳೀಯ ಆಡಳಿತದಿಂದ ಇಂತಹ ಯಾವುದೇ ವ್ಯವಸ್ಥೆ ಇಲ್ಲದಿರುವುದು, ಪಕ್ಷಿ ರಕ್ಷಕರೂ ಒಮ್ಮೊಮ್ಮೆ ಲಭ್ಯವಾಗದ ಕಾರಣ ಎಷ್ಟೋ ಪಕ್ಷಿಗಳು ಸಾವಿಗೀಡಾಗುತ್ತಿವೆ. ಪಕ್ಷಿಗಳ ನರಳಾಟ, ಸಾವು ಕಂಡರೂ ಏನೂ ಮಾಡಲಾಗದ ಅಸಹಾಯಕ ಸ್ಥಿತಿ ಜನರದ್ದಾಗಿದೆ.  

ನಾಯಿ, ದನ, ಹಂದಿ, ಕೋತಿಯಂತಹ ಪ್ರಾಣಿಗಳನ್ನು ರಕ್ಷಿಸಲು ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯಡಿ ಪ್ರತ್ಯೇಕ ತಂಡಗಳು ಕಾರ್ಯನಿರ್ವಹಿಸುತ್ತಿವೆ. ಆದರೆ, ಪಕ್ಷಿಗಳ ರಕ್ಷಣೆಗೆ ಯಾವುದೇ ವ್ಯವಸ್ಥೆ ಇಲ್ಲ ಎನ್ನುವ ಪಾಲಿಕೆ ಸಿಬ್ಬಂದಿ, ಪಕ್ಷಿಗಳನ್ನು ರಕ್ಷಿಸುವ ಖಾಸಗಿಯವರ ಸಂಪರ್ಕ ಸಂಖ್ಯೆ ನೀಡುತ್ತಾರೆ. 

ADVERTISEMENT

‘ನಮ್ಮ ಮನೆ ಬಳಿ ಈಚೆಗೆ ಪಾರಿವಾಳವೊಂದು ಹಾರಲಾಗದೆ ನಿತ್ರಾಣಗೊಂಡಿತ್ತು. ಮುಟ್ಟಿದರೂ ಸ್ಪಂದಿಸುತ್ತಿರಲಿಲ್ಲ. ಗೊತ್ತಿದ್ದವರನ್ನೆಲ್ಲ ವಿಚಾರಿಸಿದ್ದಾಯ್ತು. ಪಾಲಿಕೆ ಸಹಾಯವಾಣಿಗೆ ಕರೆ ಮಾಡಿದರೆ, ಅವರು ತುರ್ತು ಸೇವಾ ಸಹಾಯವಾಣಿ 1962ಗೆ ಕರೆ ಮಾಡಲು ತಿಳಿಸಿದರು. ಸಾಕಷ್ಟು ಬಾರಿ ಪ್ರಯತ್ನಿಸಿದ ನಂತರ ಕರೆ ಸ್ವೀಕರಿಸಿದ ಪ್ರತಿನಿಧಿ, ದೊಡ್ಡ ಪ್ರಾಣಿಗಳಿಗಷ್ಟೇ ತುರ್ತು ಸೌಲಭ್ಯ ಸಿಗುವುದಾಗಿ ಹೇಳಿದರು’ ಎಂದು ಹುಬ್ಬಳ್ಳಿಯ ನಿವಾಸಿಯೊಬ್ಬರು ತಿಳಿಸಿದರು.

‘ಮರುದಿನ ಪಾಲಿಕೆ ಸಹಾಯವಾಣಿಗೆ ಮತ್ತೆ ಕರೆ ಮಾಡಿ, ಈ ವಿಚಾರ ಹೇಳಿದಾಗ ಖಾಸಗಿ ವ್ಯಕ್ತಿಯೊಬ್ಬರ ಸಂಪರ್ಕ ಸಂಖ್ಯೆ ನೀಡಿದರು. ಇಷ್ಟೆಲ್ಲ ಮುಗಿಯುವಷ್ಟರಲ್ಲಿ ಅದು ಸತ್ತು ಹೋಯಿತು. ಪರಿವಾಳ ಉಳಿಸುವ ಎಲ್ಲ ಪ್ರಯತ್ನಗಳು ವ್ಯರ್ಥವಾದವು’ ಎಂದು ಬೇಸರದಿಂದ ನುಡಿದರು. 

ಪ್ರಾಣಿಗಳಿಗೆ ಸಮಸ್ಯೆಯಾದರೆ ವಲಯ ಆಯುಕ್ತರು ಆರೋಗ್ಯ ನಿರೀಕ್ಷಕ ಪೌರಕಾರ್ಮಿಕರ ಮೂಲಕ ನೆರವು ನೀಡಲಾಗುತ್ತಿದೆ. ಪಕ್ಷಿಗಳ ರಕ್ಷಣೆಗೂ ಆದ್ಯತೆ ನೀಡಲಾಗುವುದು
ಈಶ್ವರ ಉಳ್ಳಾಗಡ್ಡಿ ಆಯುಕ್ತ ಹು–ಧಾ ಮಹಾನಗರ ಪಾಲಿಕೆ 
ತೊಂದರೆಗೆ ಸಿಲುಕಿದ ಪ್ರಾಣಿ–ಪಕ್ಷಿಗಳನ್ನು ರಕ್ಷಿಸಬೇಕಾದ್ದು ಸ್ಥಳೀಯ ಆಡಳಿತದ ಜವಾಬ್ದಾರಿ. ಪಶು ಆಸ್ಪತ್ರೆಗೆ ತಂದರೆ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ
ಡಾ.ರವಿ ಸಾಲಿಗೌಡರ ಪಶುಪಾಲನಾ ಇಲಾಖೆ ಉಪನಿರ್ದೇಶಕ
ಪಕ್ಷಿಗಳ ರಕ್ಷಣೆಗೆ ಮೊ.ಸಂ 9844258892 ಸಂಪರ್ಕಿಸಿದರೆ ಅವುಗಳನ್ನು ರಕ್ಷಣೆ ಮಾಡಲಾಗುತ್ತದೆ. ಈವರೆಗೆ ಹಲವಾರು ಪಕ್ಷಿಗಳನ್ನು ರಕ್ಷಿಸಲಾಗಿದೆ
ವಿಕಾಸ್‌ ಕೆ. ಲುಂಕರ್‌ ಪಕ್ಷಿ ರಕ್ಷಕ

‘ನೆರವು ನೀಡದ ಸರ್ಕಾರ’ ‘ಪುಟ್ಟ ಪಕ್ಷಿಗಳಿರಲಿ ದೊಡ್ಡ ಪ್ರಾಣಿಗಳಿಗೆ ಏನಾದರು ಸಮಸ್ಯೆಯಾದರೂ ಸ್ಥಳೀಯ ಆಡಳಿತ ಸರಿಯಾಗಿ ಸ್ಪಂದಿಸುವುದಿಲ್ಲ. ಅವು ಬದುಕಿದ್ದರೆ ಮಾತ್ರ ನಮ್ಮಂಥ ಸರ್ಕಾರೇತರ ಸಂಸ್ಥೆಗೆ ತಿಳಿಸಲು ಹೇಳುತ್ತಾರೆ; ಸತ್ತರೆ ಕಳೇಬರ ಹೊತ್ತೊಯ್ಯುತ್ತಾರೆ. ಈ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ತರಲಾಗಿದೆ’ ಎನ್ನುತ್ತಾರೆ ಪೀಪಲ್ ಫಾರ್‌ ಅನಿಮಲ್ಸ್‌ ಸಂಸ್ಥೆಯ ತೇಜರಾಜ್‌ ಜೈನ್‌. ‘ನಮ್ಮ ಸಂಸ್ಥೆಯಿಂದ ರಕ್ಷಣೆ ಮಾಡಿದ ಸುಮಾರು 70 ಪ್ರಾಣಿಗಳಿಗೆ ನಿತ್ಯ ಮೂರು ಹೊತ್ತು ಆಹಾರ ಅಗತ್ಯ ಚಿಕಿತ್ಸೆಯ ವ್ಯವಸ್ಥೆ ಮಾಡಲಾಗಿದೆ. ಆಂಬುಲೆನ್ಸ್ ಸಿಬ್ಬಂದಿಗಾಗಿ ಪ್ರತಿ ತಿಂಗಳು ₹2 ಲಕ್ಷದವರೆಗೆ ಖರ್ಚು ಬರುತ್ತದೆ. ಇಂತಹ ಕೆಲಸವನ್ನು ಸರ್ಕಾರ ಮಾಡುತ್ತಿಲ್ಲ. ಕನಿಷ್ಠ ಪಕ್ಷ ನಮ್ಮಂಥ ಸಂಸ್ಥೆಗೂ ಹಣಕಾಸಿನ ನೆರವು ನೀಡುತ್ತಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.