ADVERTISEMENT

ಹೂಲಾಹುಪ್‌: ವಿಶ್ವ ದಾಖಲೆಗಳ ಪಟ್ಟಿಯಲ್ಲಿ ಹೆಸರು ದಾಖಲಿಸಿದ ಸಮೃದ್ಧಿ ಪಾಟೀಲ

ಪ್ರತಿಭೆ, ಸಾಧನೆ ಸಿದ್ಧಿಸಿಕೊಂಡ ಸಮೃದ್ಧಿ ಪಾಟೀಲ

ಕೃಷ್ಣಿ ಶಿರೂರ
Published 18 ಫೆಬ್ರುವರಿ 2025, 5:35 IST
Last Updated 18 ಫೆಬ್ರುವರಿ 2025, 5:35 IST
ವರ್ಲ್ಡ್‌ ಬುಕ್‌ ಆಫ್‌ ರೆಕಾರ್ಡ್‌ ಪ್ರಮಾಣಪತ್ರ ಸ್ವೀಕರಿಸುತ್ತಿರುವ ಸಮೃದ್ಧಿ ಪಾಟೀಲ
ವರ್ಲ್ಡ್‌ ಬುಕ್‌ ಆಫ್‌ ರೆಕಾರ್ಡ್‌ ಪ್ರಮಾಣಪತ್ರ ಸ್ವೀಕರಿಸುತ್ತಿರುವ ಸಮೃದ್ಧಿ ಪಾಟೀಲ   

ಹುಬ್ಬಳ್ಳಿ: ಈ ಬಾಲಕಿಯ ಹೆಸರು ಸಮೃದ್ಧಿ ಪಾಟೀಲ. ವಯಸ್ಸು ಒಂಬತ್ತು. ಹೂಲಾಹುಪ್‌ (ಒಂದು ಬಗೆಯ ವ್ಯಾಯಾಮ) ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿದ್ದಾಳೆ. ಒಂದು ನಿಮಿಷದಲ್ಲಿ 230 ಬಾರಿ ಹೂಲಾಹುಪ್‌ ನಡೆಸಿ, ವಿಶ್ವ ದಾಖಲೆಗಳ ಪಟ್ಟಿಯಲ್ಲಿ ಹೆಸರು ದಾಖಲಿಸಿದ್ದಾಳೆ. ಇಂಡಿಯನ್‌ ಐಡಲ್‌ ಸೀಸನ್‌ಗೆ ಪಾಲ್ಗೊಳ್ಳಲು ಆಕೆಗೆ ಆಹ್ವಾನ ಬಂದಿದೆ. 

ಸಮೃದ್ಧಿ ಪಾಟೀಲಗೆ ಗಾಂಧಾರಿ ಕಲೆ (ಥರ್ಡ್ ಐ ಸೆನ್ಸ್) ಎಂಬ ಇನ್ನೊಂದು ಕಲೆಯೂ ಸಿದ್ಧಿಸಿದೆ. ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಆಕೆ ವಸ್ತುಗಳನ್ನು ಗುರುತಿಸುತ್ತಾಳೆ. ವಸ್ತುಗಳನ್ನು ಸ್ಪರ್ಶಿಸಿ, ಅದರ ಮಹತ್ವ ಮತ್ತು ವಿಶೇಷತೆಗಳನ್ನು ವಿವರಿಸುತ್ತಾಳೆ. ಸುತ್ತಮುತ್ತಲಿನ ಚಲವಲನ, ಚಟುವಟಿಕೆಗಳ ಮೇಲೆಯೂ ಆಕೆ ನಿಗಾ ವಹಿಸುತ್ತಾಳೆ. 

ಕಣ್ಣು ಕಟ್ಟಿಕೊಂಡು ಚದುರಂಗ ಕೂಡ ಆಡುವ ಸಮೃದ್ಧಿ, ಯಾವ ಚೌಕ್‌ದಲ್ಲಿ ಯಾವ ಆಟದ ಕಾಯಿ ಇಡಲಾಗಿದೆ ಎಂಬುದನ್ನು ಗುರುತಿಸುತ್ತಾಳೆ. ಸೈಕಲ್ ಕೂಡ ಓಡಿಸುತ್ತಾಳೆ.

ADVERTISEMENT

‘ಗಾಂಧಾರಿ ಕಲೆಗೆ ಸಂಬಂಧಿಸಿದಂತೆ ಸಮೃದ್ಧಿ ತರಬೇತಿ ಪಡೆದಿದ್ದಾಳೆ. 500 ಮೀಟರ್ ವ್ಯಾಪ್ತಿಯಲ್ಲಿ ನಡೆಯುವ ಚಟುವಟಿಕೆ, ಚಲನವಲನಗಳ ಬಗ್ಗೆ ಆಕೆ ನಿಗಾ ವಹಿಸುತ್ತಾಳೆ. ಇದಕ್ಕಾಗಿ ಸಾಕಷ್ಟು ಏಕಾಗ್ರತೆ ಮತ್ತು ಧ್ಯಾನ ಮಾಡಬೇಕು. ಆತ್ಮವಿಶ್ವಾಸ ಇರಬೇಕು. ಹೂಲಾಹುಪ್‌ನಲ್ಲೂ ಸಮೃದ್ಧಿ ಪರಿಣತಿ ಗಳಿಸಿದ್ದಾಳೆ. ಸಾಮಾನ್ಯಾಜ್ಞಾನವೂ ಇದೆ. ಪ್ರಚಲಿತ ವಿದ್ಯಮಾನದ ಪ್ರಶ್ನೆಗಳಿಗೆ ಆಕೆ ಉತ್ತರಿಸುತ್ತಾಳೆ’ ಎಂದು ಸಮೃದ್ಧಿಯ ತಾಯಿ ಸುಜಾತಾ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

ಹನುಮಸಾಗರದ ಪಕೀರಗೌಡ ಪಾಟೀಲ ಹಾಗೂ ಸುಜಾತಾ ದಂಪತಿಯ ಪುತ್ರಿ ಸಮೃದ್ಧಿಗೆ ಹಲವು ಪ್ರಶಸ್ತಿ, ಬಹುಮಾನಗಳು ಲಭಿಸಿವೆ. ಸದ್ಯ ಆಕೆ ಆನ್‌ಲೈನ್‌ನಲ್ಲಿ ಮೂಲಕ ಕುಂಗ್‌ಫು ತರಬೇತಿ ಪಡೆಯುತ್ತಿದ್ದಾಳೆ. ಭವಿಷ್ಯದಲ್ಲಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಗುರಿ ಹೊಂದಿದ್ದಾಳೆ.

ಒಂದು ನಿಮಿಷದಲ್ಲಿ ಹೆಚ್ಚು ಚಿತ್ರಗಳನ್ನು ಗುರುತಿಸುವಲ್ಲಿ ವರ್ಲ್ಡ್‌ ಬುಕ್‌ ಆಫ್‌ ರೆಕಾರ್ಡ್‌ ಮಾಡಿದ ಸಮೃದ್ಧಿ ಪಾಟೀಲ

Highlights - ಕಣ್ಣುಕಟ್ಟಿ ಕರೆನ್ಸಿ ಕ್ರಮಾಂಕ ಹೇಳುವ ಬಾಲೆ ಕಣ್ಣುಕಟ್ಟಿಕೊಂಡು ಸೈಕಲ್‌ ತುಳಿಯುತ್ತಾಳೆ, ಚೆಸ್‌ ಆಡುತ್ತಾಳೆ ಏಷ್ಯನ್‌ ಗೇಮ್‌ನಲ್ಲಿ ಪಾಲ್ಗೊಳ್ಳುವ ಹಂಬಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.