ADVERTISEMENT

ರೆಡ್ಡಿಗೆ ಒಳ್ಳೆಯದಾಗಲೆಂದು ಬಯಸುವೆ: ಶ್ರೀರಾಮುಲು

​ಪ್ರಜಾವಾಣಿ ವಾರ್ತೆ
Published 21 ಮೇ 2025, 14:04 IST
Last Updated 21 ಮೇ 2025, 14:04 IST
ಬಿ. ಶ್ರೀರಾಮುಲು 
ಬಿ. ಶ್ರೀರಾಮುಲು    

ಹುಬ್ಬಳ್ಳಿ: ‘ಯಾರೇ ಕಷ್ಟದಲ್ಲಿದ್ದರೂ ಅವರಿಗೆ ಒಳ್ಳೆಯದಾಗಬೇಕೆಂದು ಬಯಸುವುದು ಮಾನವೀಯತೆ. ಅದೇ ರೀತಿ ಜನಾರ್ದನ ರೆಡ್ಡಿ ಅವರಿಗೂ ಒಳ್ಳೆಯದಾಗಲೆಂದು ಬಯಸುತ್ತೇನೆ’ ಎಂದು ಬಿಜೆಪಿ ಮುಖಂಡ ಬಿ.ಶ್ರೀರಾಮುಲು ಹೇಳಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಹಿಂದೆ ಆಗಿನ ಸಂದರ್ಭದಲ್ಲಿ ಅವರ ವಿರುದ್ಧ ಮಾತನಾಡಿದ್ದೆ. ಈಗ ಅವರಿಗೆ ಒಳ್ಳೆಯದಾಗಬೇಕು ಎಂದು ಬಯಸುತ್ತೇನೆ. ಸಿಬಿಐ ಕೋರ್ಟ್‌ನಲ್ಲಿ ತೀರ್ಪು ನೀಡಿದ ತಕ್ಷಣ ಅವರು ಅಪರಾಧಿಯಾಗುವುದಿಲ್ಲ. ಸುಪ್ರೀಂ ಕೋರ್ಟ್‌ಗೆ ಹೋಗಲು, ಕಾನೂನು ಹೋರಾಟ ಮಾಡಲು ಅವಕಾಶ ಇದೆ’ ಎಂದರು.

‘ಗಂಗಾವತಿ ಕ್ಷೇತ್ರಕ್ಕೆ ಉಪ ಚುನಾವಣೆ ನಡೆದರೆ ರೆಡ್ಡಿ ಅವರ ಪತ್ನಿ ಅರುಣಾ ಲಕ್ಷ್ಮೀ ಅವರಿಗೆ ಟಿಕೆಟ್‌ ನೀಡಲಾಗುತ್ತದೆಯೇ’ ಎಂಬ ಪ್ರಶ್ನೆಗೆ ‍ಪ್ರತಿಕ್ರಿಯಿಸಿ, ‘ಈ ವಿಷಯದಲ್ಲಿ ವಿನಾಃಕಾರಣ ವಿವಾದ ಮಾಡಬಾರದು. ಇದು ಅಪ್ರಸ್ತುತ. ಈ ಹಿಂದೆ ಸತೀಶ್‌ ಸೈಲ್‌ ಅವರಿಗೂ ಶಿಕ್ಷೆಯಾಗಿತ್ತು. ಆದರೆ, ಅವರ ಶಿಕ್ಷೆಗೆ ತಡೆ ಸಿಕ್ಕಿದೆ’ ಎಂದರು.

ADVERTISEMENT

‘ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಅಲುಗಾಡುತ್ತಿದೆ. ಹೊಸಪೇಟೆಯಲ್ಲಿ ನಡೆದ ‘ಸಮರ್ಪಣೆ ಸಂಕಲ್ಪ’ ಸಮಾವೇಶದಲ್ಲಿ ಹಳೇ ರೇಡಿಯೊ ರೀತಿ ಹೇಳಿದ್ದನ್ನೇ ಹೇಳಿದ್ದಾರೆ. ರಾಜ್ಯದ ಜನ ಸಂಕಷ್ಟದಲ್ಲಿದ್ದರೆ, ಸರ್ಕಾರ ಕೋಮಾ ಸ್ಥಿತಿಯಲ್ಲಿದೆ’ ಎಂದು ಹೇಳಿದರು.

‘ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಲೂಟಿ ಮಾಡಿ ಜೈಲಿಗೆ ಹೋಗಿ ಬಂದ ನಾಗೇಂದ್ರ ಅವರನ್ನು ಪಕ್ಕದಲ್ಲಿ ಕೂರಿಸಿಕೊಂಡು, ನಾವು ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳು, ಹಿಂದುಳಿದವರ ಪರವಾಗಿದ್ದೇವೆ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ. ಈ ರೀತಿ ಹೇಳುವ ಮೂಲಕ ಯಾರ ಕಿವಿಯಲ್ಲಿ ಹೂವು ಇಡುತ್ತಿದ್ದೀರಿ’ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.