
ಹುಬ್ಬಳ್ಳಿ: ‘ಭಾರತದಲ್ಲಿ ಎಂಜಿನಿಯರಿಂಗ್ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವ ನೀಡಿ, ವಿಜ್ಞಾನ ಕ್ಷೇತ್ರವನ್ನು ನಿರ್ಲಕ್ಷಿಸಲಾಗುತ್ತಿದೆ. ದೇಶ ಪ್ರಗತಿ ಸಾಧಿಸಬೇಕಾದರೆ ವಿನೂತನವಾದ ವಿಜ್ಞಾನದ ಅವಶ್ಯಕತೆ ಇದೆ’ ಎಂದು ಧಾರವಾಡ ಐಐಟಿ ಪ್ರಾಧ್ಯಾಪಕ ಎಸ್.ಎಂ. ಶಿವಪ್ರಸಾದ್ ಹೇಳಿದರು.
ನಗರದ ಲ್ಯಾಮಿಂಗ್ಟನ್ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಜ್ಞಾನ ಕಾರ್ಯಾಗಾರ ಹಾಗೂ ವಿಜ್ಞಾನ ಮೇಳ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ವಿಜ್ಞಾನಿ, ತಂತ್ರಜ್ಞಾನಿ ಹಾಗೂ ಎಂಜಿನಿಯರ್ ನಡುವೆ ವ್ಯತ್ಯಾಸವಿದೆ. ಪ್ರಕೃತಿಯ ಕೌತುಕದ ಕುರಿತು ವಿಚಾರ ಮಾಡುವವರು ವಿಜ್ಞಾನಿ. ಅವರು ಹೇಳಿದ್ದನ್ನು ಅಧ್ಯಯನ ಮಾಡಿ, ಏನೆಲ್ಲ ಮಾಡಬಹುದೆಂದು ಯೋಚಿಸುವವರು ತಂತ್ರಜ್ಞಾನಿ. ಇದನ್ನು ಕಾರ್ಯರೂಪಕ್ಕೆ ತರುವವರು ಎಂಜಿನಿಯರ್‌ಗಳು. ವಿಜ್ಞಾನದ ವಿದ್ಯಾರ್ಥಿಗಳಿಗೆ ಈ ಅರಿವು ಅಗತ್ಯ. ತಾವು ಏನಾಗಬೇಕೆಂಬ ಸ್ಪಷ್ಟತೆ ಇರಬೇಕು’ ಎಂದು ತಿಳಿಸಿದರು.
‘100 ವರ್ಷಗಳಲ್ಲಿ ವಿಜ್ಞಾನವು ತಂತ್ರಜ್ಞಾನವಾಗಿ ಪರಿವರ್ತನೆಯಾಗಿದೆ. ವಾಹನ ಚಾಲನೆ, ಬ್ಯಾಂಕಿಂಗ್, ನಿರ್ಮಾಣ ವಲಯ, ವೈದ್ಯಕೀಯ, ಸಾಫ್ಟ್‌ವೇರ್, ನ್ಯಾಯಾಲಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಮುಂದಿನ 10–15 ವರ್ಷಗಳಲ್ಲಿ ಮಹತ್ತರ ಬದಲಾವಣೆ ಆಗಲಿದೆ. ಮಾನವನೇ ಇಲ್ಲದೆ, ಎಲ್ಲ ಕೆಲಸಗಳನ್ನು ಯಂತ್ರಗಳೇ ಮಾಡಲಿವೆ’ ಎಂದರು.
‘ಮನೆ ಮನೆಗೆ ರೊಬೊಟ್ ಬರುವ ಕಾಲ ದೂರವಿಲ್ಲ. ಮನುಷ್ಯನಿಗೆ ಉದ್ಯೋಗವೇ ಇರದ ಆ ಸಂದರ್ಭವನ್ನು ಎದುರಿಸಲು ವಿದ್ಯಾರ್ಥಿಗಳು ಈಗಿನಿಂದಲೇ ಚಿಂತನೆ ನಡೆಸಬೇಕು. ಮಹತ್ತರವಾದ ಸಾಧನೆಯ ಕನಸು ಕಂಡು, ಅದರ ಬೆನ್ನತ್ತಿ ಯಶಸ್ವಿಯಾಗಬೇಕು. ಅಂಕಗಳಿಗೆ ಬೆಲೆ ಇಲ್ಲ ಎಂಬುದನ್ನು ಮನಗಂಡು, ತಮ್ಮ ಆಸಕ್ತಿ ನಿಗದಿಪಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಶಿಕ್ಷಕರು, ಮಕ್ಕಳನ್ನು ಸಜ್ಜುಗೊಳಿಸಿಬೇಕು’ ಎಂದು ಸಲಹೆ ನೀಡಿದರು.
ಮೇಳದ ಸಂಯೋಜಕಿ ಎಸ್.ಎಸ್. ಮುಲ್ಕಿಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಥಮಿಕ ಶಾಲೆ, ಬಾಲಕರ ಪ್ರೌಢಶಾಲೆ ಹಾಗೂ ಬಾಲಕಿಯರ ಪ್ರೌಢಶಾಲೆ ವಿಭಾಗದಲ್ಲಿ ಉತ್ತಮ ಮಾದರಿ ತಯಾರಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕ್ಷೇತ್ರ ಸಂಪನ್ಮೂಲ ಅಧಿಕಾರಿ ಅನುರಾಧ, ಲ್ಯಾಮಿಂಗ್ಟನ್ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಕೆ.ಎಂ. ಪೈಕೋಟಿ, ಕಾರ್ಯಾಧ್ಯಕ್ಷ ಸುರೇಶ ಕಿಣಿ, ಆಡಳಿತ ಮಂಡಳಿ ಕಾರ್ಯದರ್ಶಿ ಶಶಿ ಸಾಲಿ, ಸದಸ್ಯ ಮುರುಳೀಧರ ಕರ್ಜಗಿ, ಪ್ರಾಥಮಿಕ ಶಾಲೆಯ ಪ್ರಾಚಾರ್ಯೆ ಸೌಮ್ಯಪ್ರಭು ಇದ್ದರು.
ದೇಶದಲ್ಲಿ ಇನ್ನೂ ನಕಲು ಮಾಡಲಾಗುತ್ತಿದೆ. ಶಿಕ್ಷಣದಲ್ಲಿ ಹೊಸ ಚಿಂತೆನೆ ಮೂಡಿ ಎಲ್ಲ ಕ್ಷೇತ್ರಗಳಲ್ಲಿ ಬದಲಾವಣೆ ತಂದಲ್ಲಿ ಭಾರತ ವಿಶ್ವಗುರು ಆಗುತ್ತದೆಎಸ್.ಎಂ. ಶಿವಪ್ರಸಾದ್ ಧಾರವಾಡ ಐಐಟಿ ಪ್ರಾಧ್ಯಾಪಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.