ಹುಬ್ಬಳ್ಳಿ: ಜನರ ಆಹಾರ ಪದ್ಧತಿಯಿಂದ ಬಹುತೇಕ ದೂರ ಉಳಿದ ಗೆಡ್ಡೆ–ಗೆಣಸುಗಳನ್ನು ಉಳಿಸಿ, ಅಭಿವೃದ್ಧಿಪಡಿಸಲು ಶ್ರಮಿಸುತ್ತಿರುವ ಧಾರವಾಡದ ಅಖಿಲ ಭಾರತ ಗೆಡ್ಡೆಗೆಣಸು ಸಂಶೋಧನಾ ಕೇಂದ್ರವು, ಉತ್ತಮ ಮಾರುಕಟ್ಟೆ ಸೃಷ್ಟಿಸುವತ್ತ ಹೆಜ್ಜೆ ಇಟ್ಟಿದೆ.
ಕೇಂದ್ರದಲ್ಲಿ ಈಗಾಗಲೇ ಹೆಚ್ಚು ವಿಟಮಿನ್ ಇರುವ ಗೆಡ್ಡೆ–ಗೆಣಸುಗಳನ್ನು ಅಭಿವೃದ್ಧಿಪಡಿಸಲಾಗಿದೆ. ವಿಟಮಿನ್ ಎ ಹಾಗೂ ಸಿ, ಜಿಂಕ್, ಕಬ್ಬಿಣದ ಅಂಶಗಳು ಯಥೇಚ್ಛವಾಗಿರುವ ‘ಭೂಸೋನ’, ‘ಭೂ ಕೃಷ್ಣ’, ‘ಟಿಎಸ್‌ಪಿ 16–7’, ‘ಶ್ರೀಭದ್ರ’ ಸಿಹಿಗೆಣಸು, ‘ಶ್ರೀಕಾರ್ತಿ’ ಗೆಡ್ಡೆಯು ಕೇಂದ್ರದ ಸುಧಾರಿತ ತಳಿಗಳಾಗಿವೆ.
ಬಾಗಲಕೋಟೆ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದಡಿ ಕಾರ್ಯನಿರ್ವಹಿಸುತ್ತಿರುವ ಕೇಂದ್ರವು ಗೆಡ್ಡೆ–ಗೆಣಸಿನ ಹಾಗೂ ಸಿರಿಧಾನ್ಯಗಳ ಪುಡಿಯನ್ನು ಪೌಷ್ಟಿಕ ಆಹಾರವಾಗಿ ಮಾರುಕಟ್ಟೆಗೆ ತರಲು ಉದ್ದೇಶಿಸಿದೆ. ಇದಕ್ಕಾಗಿ ಹಾವೇರಿ ಜಿಲ್ಲೆಯ ದೇವಿಹೊಸೂರಿನ ಚೆಫ್ಟ್ ಕಾಲೇಜು ಜೊತೆ ಒಪ್ಪಂದವಾಗಿದೆ. ಮೂರು ವರ್ಷಗಳ ಸಂಶೋಧನಾ ಪ್ರಕ್ರಿಯೆ ಬಳಿಕ ಉತ್ಪನ್ನ ಮಾರುಕಟ್ಟೆಗೆ ಬರಲಿದೆ.
‘ಅಪೌಷ್ಟಿಕ ಸಮಸ್ಯೆ ಅಲ್ಲದೇ ಕೋವಿಡ್ ನಂತರ ಉಂಟಾಗಿರುವ ರೋಗನಿರೋಧಕ ಶಕ್ತಿ ಕ್ಷೀಣದಂತಹ ಸಮಸ್ಯೆ ನಿವಾರಣೆಗೆ ಅತಿಹೆಚ್ಚು ಪೌಷ್ಟಿಕಾಂಶವುಳ್ಳ ಗೆಡ್ಡೆ–ಗೆಣಸು ಪರಿಣಾಮಕಾರಿಯಾಗಿದೆ. ಇದರ ಮಾರುಕಟ್ಟೆಯನ್ನು ವಿಸ್ತರಿಸಲು ಕೇಂದ್ರವು ರೈತರಿಗೆ ತಾಂತ್ರಿಕ ಅರಿವು, ಉತ್ಪಾದನಾ ಕ್ಷೇತ್ರ ವಿಸ್ತರಣೆಯಂತಹ ಚಟುವಟಿಕೆಗಳನ್ನು ನಡೆಸುತ್ತಿದೆ’ ಎಂದು ಕೇಂದ್ರದ ಮುಖ್ಯಸ್ಥ ಇಮಾಮ್ ಸಾಹೇಬ್ ಜತ್ತ ತಿಳಿಸಿದರು.
‘ಆರೋಗ್ಯ ಜಾಗೃತಿ ಮೂಡಿದರೆ, ಗೆಡ್ಡೆ–ಗೆಣಸಿನ ಬೇಡಿಕೆ ಹೆಚ್ಚುತ್ತದೆ. ವ್ಯಾಪಕ ಪ್ರಚಾರಕ್ಕೆ ಮಹಿಳಾ ಸ್ವಸಹಾಯ ಗುಂಪುಗಳ ನೆರವು ಪಡೆಯಲಾಗುತ್ತಿದೆ. ಪ್ರಧಾನ ಕಚೇರಿ ಕೇರಳದಲ್ಲಿದ್ದು, ಕರ್ನಾಟಕದಲ್ಲಿ ನಮ್ಮದು ಏಕೈಕ ಕೇಂದ್ರವಾಗಿದೆ. 2014ರಿಂದ ಕೇಂದ್ರವು ಕಾರ್ಯಾರಂಭ ಮಾಡಿದ ಬಳಿಕ ಗೆಡ್ಡೆ–ಗೆಣಸು ಬೆಳೆಯುವ ಕ್ಷೇತ್ರ ಸುಮಾರು 10 ಸಾವಿರ ಹೆಕ್ಟೇರ್‌ಗೆ ವಿಸ್ತರಣೆ ಆಗಿದೆ. ದೇಶದಲ್ಲೇ ಅತಿಹೆಚ್ಚು ಗೆಡ್ಡೆ–ಗೆಣಸು ಬೆಳೆಯುವ ರಾಜ್ಯಗಳಲ್ಲಿ ಒಡಿಶಾ, ಛತ್ತೀಸಗಢದ ನಂತರದ ಸ್ಥಾನದಲ್ಲಿ ಕರ್ನಾಟಕವಿದೆ’ ಎಂದರು.
ಖಾನಾಪುರದಲ್ಲಿ ಹೆಚ್ಚು ಗೆಡ್ಡೆ–ಗೆಣಸು ಬೆಳೆಯುವುದರಿಂದ ಅದು ಕೇಂದ್ರದ ಪ್ರಯೋಗಶಾಲೆ ಆಗಿದೆ. ದಕ್ಷಿಣದ ಜಿಲ್ಲೆಗಳಲ್ಲೂ ಗೆಡ್ಡೆ–ಗೆಣಸು ಬೆಳೆಯುವಂತೆ ಉತ್ತೇಜಿಸಲಾಗುತ್ತಿದೆಇಮಾಮ್ ಸಾಹೇಬ್ ಜತ್ತ ಮುಖ್ಯಸ್ಥ ಅಖಿಲ ಭಾರತ ಗೆಡ್ಡೆಗೆಣಸು ಸಂಶೋಧನಾ ಕೇಂದ್ರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.