ADVERTISEMENT

ಆರ್ಥಿಕವಾಗಿ ಭಾರತ ಸದೃಢ ದೇಶ: ಜೋಶಿ

ಪ್ರಧಾನಿ ನರೇಂದ್ರ ಮೋದಿ ಜನ್ಮದಿನ; ಆರೋಗ್ಯ ತಪಾಸಣಾ ಶಿಬಿರ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2022, 11:26 IST
Last Updated 18 ಸೆಪ್ಟೆಂಬರ್ 2022, 11:26 IST
ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನ ಅಂಗವಾಗಿ ಹುಬ್ಬಳ್ಳಿ ಮೂರುಸಾವಿರ ಮಠದ ಶಾಲಾ ಆವರಣದಲ್ಲಿ ಭಾನುವಾರ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪಾಲ್ಗೊಂಡಿದ್ದರು. ಶಾಸಕ ಜಗದೀಶ ಶೆಟ್ಟರ್‌ ಇದ್ದಾರೆ
ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನ ಅಂಗವಾಗಿ ಹುಬ್ಬಳ್ಳಿ ಮೂರುಸಾವಿರ ಮಠದ ಶಾಲಾ ಆವರಣದಲ್ಲಿ ಭಾನುವಾರ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪಾಲ್ಗೊಂಡಿದ್ದರು. ಶಾಸಕ ಜಗದೀಶ ಶೆಟ್ಟರ್‌ ಇದ್ದಾರೆ   

ಹುಬ್ಬಳ್ಳಿ: ‘ಕೋವಿಡ್ ನಂತರ ಭಾರತ ಆರ್ಥಿಕವಾಗಿ ಸದೃಢವಾಗುತ್ತಿದ್ದು, 2030ರ ಒಳಗೆ ಭಾರತ ಆರ್ಥಿಕವಾಗಿ ಪ್ರಗತಿ ಹೊಂದಿದ ವಿಶ್ವದ ಎರಡು ಅಥವಾ ಮೂರನೇ ರಾಷ್ಟ್ರವಾಗಿ ಹೊರಹೊಮ್ಮಲಿದೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ವತಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಭಾನುವಾರ ನಗರದ ಮೂರುಸಾವಿರ ಮಠದ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಉಚಿತ ವೈದ್ಯಕೀಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ‘ವರ್ಷದಿಂದ ವರ್ಷಕ್ಕೆ ಭಾರತ ಎಲ್ಲ ಕ್ಷೇತ್ರದಲ್ಲೂ ಪ್ರಗತಿಯಾಗುತ್ತಿದೆ. ಕೇಂದ್ರ ಸರ್ಕಾರದ ಅಭಿವೃದ್ಧಿಪರ ಯೋಜನೆಗಳಿಂದ ಹಾಗೂ ಕೋವಿಡ್‌ ನಂತರ ಕೈಗೊಂಡ ಸುಧಾರಣಾ ಕ್ರಮದಿಂದಾಗಿ ಆರ್ಥಿಕವಾಗಿ ಬಲಿಷ್ಠರಾಗುತ್ತಿದ್ದೇವೆ. ಈಗಾಗಲೇ ಆರ್ಥಿಕವಾಗಿ ಬಲಿಷ್ಠವಾಗಿರುವ ಬ್ರಿಟನ್‌ ರಾಷ್ಟ್ರವನ್ನು ಹಿಂದಿಕ್ಕಿ ಮುನ್ನುಗ್ಗುತ್ತಿದ್ದೇವೆ’ ಎಂದರು.

‘ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವಾದ ಶನಿವಾರ ದೇಶದಾದ್ಯಂತ ರಕ್ತದಾನ ಶಿಬಿರ ನಡೆಸಿ, ಅತಿ ದೊಡ್ಡ ಪ್ರಮಾಣದಲ್ಲಿ ರಕ್ತ ಸಂಗ್ರಹಿಸಿ ಗಿನ್ನಿಸ್‌ ದಾಖಲೆ ಬರೆಯಲಾಗಿದೆ. ಜನರು ಸ್ವಯಂಪ್ರೇರಿತರಾಗಿ ಬಂದು ರಕ್ತದಾನ ಮಾಡಿದ್ದಾರೆ. ಇಂದಿನ ಆರೋಗ್ಯ ಶಿಬಿರದಲ್ಲಿ ಧಾರವಾಡ ಜಿಲ್ಲೆಯ ಎಲ್ಲ ತಜ್ಞ ವೈದ್ಯರು ಪಾಲ್ಗೊಂಡಿದ್ದಾರೆ. ಕೊಲ್ಲಾಪುರ ಕ್ಯಾನ್ಸರ್‌ ಸೆಂಟರ್‌ನಿಂದ ಬಂದಿರುವ ಹೋಪ್‌ ಎಕ್ಸ್‌ಪ್ರೆಸ್‌ ಬಸ್‌ನಲ್ಲಿ ಕ್ಯಾನ್ಸರ್ ಪರೀಕ್ಷೆ ಸಹ ನಡೆಸಲಾಗುತ್ತಿದೆ’ ಎಂದರು.

ADVERTISEMENT

‘ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮ ದಿನವನ್ನು ಜನರು ತಮ್ಮದೇ ಜನ್ಮ ದಿನ ಎನ್ನುವಂತೆ ಆಚರಿಸಿಕೊಂಡಿದ್ದಾರೆ. ಆರ್ಥಿಕವಾಗಿ ಹಿಂದುಳಿದವರಿಗೆ ಆರೋಗ್ಯ ಭಾಗ್ಯ ದೊರೆಯಲಿ ಎನ್ನುವ ಉದ್ದೇಶದಿಂದ ಮೋದಿ ಅವರು ಹಲವಾರು ಯೋಜನೆಗಳು ಜಾರಿಗೆ ತಂದಿದ್ದಾರೆ. ದೇಶದ ಜನರ ವಿಶ್ವಾಸಕ್ಕೆ ಪಾತ್ರರಾಗಿರುವ ಅವರೇ ಮುಂದಿನ ಎರಡು ಅವಧಿಗೂ ಪ್ರಧಾನಿ ಆಗುತ್ತಾರೆ’ ಎಂದು ಶಾಸಕ ಜಗದೀಶ ಶೆಟ್ಟರ್‌ ಹೇಳಿದರು.

ಹುಧಾ ಮಹಾನಗರ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಸಂಜಯ ಕಪಟಕರ, ಡಾ. ಮಹೇಶ ನಾಲವಾಡ, ಡಾ. ಕ್ರಾಂತಿಕಿರಣ, ನಾಗೇಶ ಕಲಬುರ್ಗಿ, ಮಲ್ಲಿಕಾರ್ಜುನ ಸಾವಕಾರ, ಅಶೋಕ ಕಾಟವೆ, ವೀರಭದ್ರಪ್ಪ ಹಾಲಹರವಿ, ವಿಜಯಾನಂದ ಶೆಟ್ಟಿ, ಉಮಾ ಮುಕುಂದ, ಬಸವರಾಜ ಕೇಲಗಾರ, ಪ್ರಭು ನವಲಗುಂದಮಠ ಇದ್ದರು. ರಕ್ತದೊತ್ತಡ, ರಕ್ತ ಪರೀಕ್ಷೆ, ಹೃದ್ರೋಗ ಸಮಸ್ಯೆ, ಮೂಳೆ ಸಮಸ್ಯೆ, ನೇತ್ರ ಪರೀಕ್ಷೆ, ಚರ್ಮರೋಗ ಸೇರಿದಂತೆ ವಿವಿಧ ಕಾಯಿಲೆಗಳ ಕುರಿತು ತಪಾಸಣೆ ನಡೆಸಿ, ಔಷಧ ವಿತರಿಸಲಾಯಿತು. ಸಾವಿರಕ್ಕೂ ಹೆಚ್ಚು ಮಂದಿ ಶಿಬಿರದಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.