ಹುಬ್ಬಳ್ಳಿ: ರೈಲಿನಲ್ಲಿ ಪ್ರಯಾಣಿಸುವ ಒಂಟಿ ಮಹಿಳೆಯರ ಸುರಕ್ಷತೆ, ಭದ್ರತೆಗಾಗಿ ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) 2020ರಲ್ಲಿ ಆರಂಭಿಸಿದ ‘ಮೇರಿ ಸಹೇಲಿ’ (ನನ್ನ ಗೆಳತಿ) ಯೋಜನೆ ಫಲಪ್ರದವಾಗಿದೆ. ಇದರಿಂದ ನೈರುತ್ಯ ರೈಲ್ವೆ ವಲಯ ವ್ಯಾಪ್ತಿಯಲ್ಲಿ 2024–25ರ ಅವಧಿಯಲ್ಲಿ 2.84 ಲಕ್ಷ ಒಂಟಿ ಮಹಿಳಾ ಪ್ರಯಾಣಿಕರಿಗೆ ಪ್ರಯೋಜನವಾಗಿದೆ.
ಬೆಂಗಳೂರು, ಮೈಸೂರು ಮತ್ತು ಹುಬ್ಬಳ್ಳಿ ರೈಲ್ವೆ ವಿಭಾಗದ ವ್ಯಾಪ್ತಿಯಲ್ಲಿ ಆರ್‌ಪಿಎಫ್ 72 ಮಹಿಳಾ ಸಿಬ್ಬಂದಿ 10 ತಂಡಗಳಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ಒಂಟಿ ಮಹಿಳೆಯರ ಪ್ರಯಾಣದ ವಿವರ ಪಡೆದು, ಅವರು ರೈಲನ್ನೇರಿ ಇಳಿಯುವವರೆಗೆ ಪ್ರಯಾಣದ ಸಂಪೂರ್ಣ ಜವಾಬ್ದಾರಿ ವಹಿಸಿಕೊಳ್ಳುತ್ತಾರೆ. ಹೀಗೆ ಒಂದು ವರ್ಷದಲ್ಲಿ 2075 ರೈಲುಗಳಲ್ಲಿ ತಂಡ ಸಂಚರಿಸಿ, ಸಮಸ್ಯೆಗೆ ಒಳಗಾದ ಐದು ಸಾವಿರಕ್ಕೂ ಹೆಚ್ಚು ಮಹಿಳೆಯರಿಗೆ ನೆರವು ನೀಡಿದೆ.
‘2020ರಲ್ಲಿ ರಾಣಿ ಚನ್ನಮ್ಮ ಎಕ್ಸ್‌ಪ್ರೆಸ್ ರೈಲಿನಲ್ಲಿ ‘ಮೇರಿ ಸಹೇಲಿ’ ಯೋಜನೆ ಆರಂಭಗೊಂಡು, ನಂತರ ಉದ್ಯಾನ ಎಕ್ಸ್‌ಪ್ರೆಸ್ ಮತ್ತು ಸಂಗಮಿತ್ರ ಎಕ್ಸ್‌ಪ್ರೆಸ್ ರೈಲಿಗೆ ವಿಸ್ತರಣೆಗೊಂಡಿತು. ಹಬ್ಬಗಳ ಸಂದರ್ಭದಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಿರುತ್ತದೆ. ಒಂಟಿ ಮಹಿಳಾ ಪ್ರಯಾಣಿಕರು ಹೆಚ್ಚಿರುತ್ತಾರೆ. ಅವರಿಗೆ ಆರ್‌ಪಿಎಫ್ ಸಿಬ್ಬಂದಿ ಆರಂಭಿಕ ಸ್ಥಳದಿಂದ, ಅಂತ್ಯದವರೆಗೆ ಸೂಕ್ತ ಭದ್ರತೆ ನೀಡುತ್ತಾರೆ’ ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಂಜುನಾಥ ಕಲಮಡಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ರೈಲು ಪ್ರಯಾಣಕ್ಕೂ ಮುನ್ನ ಮಹಿಳಾ ಪ್ರಯಾಣಿಕರು ನಿಲ್ದಾಣದಲ್ಲಿರುವ ಆರ್‌ಪಿಎಫ್ ಸಿಬ್ಬಂದಿಗೆ ಪ್ರಯಾಣದ ವಿವರ ನೀಡಿ, ಅವರು ನೀಡುವ ಸಲಹೆ–ಸೂಚನೆಗಳನ್ನು ಪಾಲಿಸಬೇಕು. ಪ್ರಯಾಣದಲ್ಲಿ ಎದುರಾಗುವ ನಿಲ್ದಾಣಗಳಲ್ಲಿನ ಆರ್‌ಪಿಎಫ್ ಸಿಬ್ಬಂದಿಯೂ, ಸಂಬಂಧ ಪಟ್ಟ ಬೋಗಿಗಳ ಮೇಲೆ ನಿಗಾ ಇಡುತ್ತಾರೆ. ಸಮಸ್ಯೆಗಳಿದ್ದರೆ, ಮಹಿಳೆಯರನ್ನು ಪ್ರಶ್ನಿಸುತ್ತಾರೆ. ಕೆಲ ರೈಲು ನಿಲ್ದಾಣಗಳಲ್ಲಿ ವಾಹನಗಳ ವ್ಯವಸ್ಥೆ ಮಾಡಿಕೊಡುವುದರ ಜೊತೆಗೆ ಸರಕುಗಳನ್ನು ಸಾಗಿಸಲು ಸಹ ನೆರವಾಗುತ್ತಾರೆ’ ಎಂದರು.
ಮಹಿಳಾ ಪ್ರಯಾಣಿಕರ ಆಸನದ ಸಂಖ್ಯೆ ಮತ್ತು ಮೊಬೈಲ್ ನಂಬರ್ ಪಡೆದು ಪ್ರಯಾಣದ ಉದ್ದಕ್ಕೂ ಅವರೊಂದಿಗೆ ಮೇರಿ ಸಹೇಲಿ ತಂಡದ ಆರ್‌ಪಿಎಫ್ ಸಿಬ್ಬಂದಿ ಸಂಪರ್ಕದಲ್ಲಿದ್ದು ಭದ್ರತೆ ಒದಗಿಸುತ್ತಾರೆ.–ಮಂಜುನಾಥ ಕಲಮಡಿ, ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ನೈರುತ್ಯ ರೈಲ್ವೆ ವಲಯ
‘32 ರೈಲಿನಲ್ಲಿ ಸಮಸ್ಯೆ’
‘ದೆಹಲಿ ಮುಂಬೈ ಹೈದರಬಾದ್ ತಿರುವನಂತಪುರ ಚೆನ್ನೈಗೆ ಚಲಿಸುವ ಕೆಲ ಎಕ್ಸ್‌ಪ್ರೆಸ್ ರೈಲು ಮತ್ತು ಕೆಲ ಪ್ಯಾಸೆಂಜರ್ ರೈಲುಗಳಲ್ಲಿ ಮಹಿಳೆಯರಿಗೆ ಸಮಸ್ಯೆ ಆಗುತ್ತಿರುವುದು ಗಮನಕ್ಕೆ ಬಂದಿದೆ. ಸಾಮಾನ್ಯ ಬೋಗಿಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಿರುತ್ತದೆ. ಮಹಿಳಾ ಪ್ರಯಾಣಿಕರು ದೌರ್ಜನಕ್ಕೆ ಒಳಗಾಗುವುದರ ಜೊತೆಗೆ ಚಿನ್ನಭರಣ ಕಳೆದುಕೊಳ್ಳುತ್ತಾರೆ. ಇಂಥ 32 ರೈಲುಗಳಲ್ಲಿ ಹೆಚ್ಚಿನ ಭದ್ರತಾ ಕ್ರಮ ಕೈಗೊಳ್ಳಲು ಯೋಜಿಸಲಾಗಿದೆ’ ಎಂದು ರೈಲ್ವೆ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.