
ಹುಬ್ಬಳ್ಳಿ: ಕೈಗಾರಿಕೋದ್ಯಮಿ, ಬಿಡಿಕೆ ಗ್ರೂಪ್ ಮತ್ತು ಬಿಡಿಕೆ ಸ್ಪೋರ್ಟ್ಸ್ ಫೌಂಡೇಷನ್ ಸ್ಥಾಪಕ ಭರತ್ ಖಿಮ್ಜಿ (84) ಗುರುವಾರ ನಿಧನರಾದರು. ನಗರದ ಸುಂದರ ಟೌನ್ ನಿವಾಸಿಯಾಗಿದ್ದ ಅವರಿಗೆ ಪತ್ನಿ ಮತ್ತು ಇಬ್ಬರು ಪುತ್ರರು ಇದ್ದಾರೆ. ಕೇಶ್ವಾಪುರದ ಮುಕ್ತಿಧಾಮದಲ್ಲಿ ಅಂತ್ಯಕ್ರಿಯೆ ನಡೆಯಿತು.
1942ರ ಅಕ್ಟೋಬರ್ 16ರಂದು ಮುಂಬೈನಲ್ಲಿ ಜನಿಸಿದ ಭರತ್ ಖಿಮ್ಜಿ, 60ರ ದಶಕದಲ್ಲಿ ಹುಬ್ಬಳ್ಳಿಗೆ ಬಂದರು. ಎಕೆ ಇಂಡಸ್ಟ್ರೀಸ್‌ನ ವ್ಯವಸ್ಥಾಪಕ ನಿರ್ದೇಶಕ, ಜೈಂಟ್ಸ್ ಕ್ಲಬ್, ಹುಬ್ಬಳ್ಳಿ ಜಿಮ್ಖಾನಾ ಕ್ಲಬ್ ಸೇರಿ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಗುಜರಾತ್‌ನ ಕಚ್ಚಿ ದಾಸ್ ಓಸ್ವಾಲ್ ಸಮುದಾಯದ ಅಧ್ಯಕ್ಷ ಸಹ ಆಗಿದ್ದರು.
1982ರಲ್ಲಿ ಬಿಡಿಕೆ ಗ್ರೂಪ್ ಸ್ಥಾಪಿಸಿದ ಅವರು, ಕೈಗಾರಿಕಾ ವಾಲ್ವ್‌ಗಳ ತಯಾರಿಕೆಯಲ್ಲಿ ಹುಬ್ಬಳ್ಳಿಯನ್ನು ದೇಶದ ‘ವಾಲ್ವ್‌ಗಳ ರಾಜಧಾನಿ’ ಎಂದು ಗುರುತಿಸುವಂತೆ ಮಾಡಿದರು. 2009ರಲ್ಲಿ ಅವರು 'ವಾಣಿಜ್ಯ ರತ್ನ' ಪ್ರಶಸ್ತಿಗೆ ಪಾತ್ರರಾಗಿದ್ದರು.
1992ರಲ್ಲಿ ಬಿಡಿಕೆ ಸ್ಪೋರ್ಟ್ಸ್ ಫೌಂಡೇಷನ್ ಸ್ಥಾಪಿಸಿದ ಅವರು, ಹುಬ್ಬಳ್ಳಿಯಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ಕ್ರಿಕೆಟ್ ಮೈದಾನ ನಿರ್ಮಿಸಿದ್ದರು. ಉತ್ತರ ಕರ್ನಾಟಕ ಭಾಗದಲ್ಲಿ ಕ್ರಿಕೆಟ್ ಬೆಳವಣಿಗೆಗೆ ಕೊಡುಗೆ ನೀಡಿದ್ದರು. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಆಜೀವ ಸದಸ್ಯತ್ವ ಹೊಂದಿದ್ದರು. ಉದ್ದಿಮೆ, ಕ್ರೀಡೆ ಅಲ್ಲದೆ ಆರೋಗ್ಯ, ಶಿಕ್ಷಣ, ಸಮಾಜಸೇವಾ ಕ್ಷೇತ್ರದಲ್ಲೂ ಪ್ರಮುಖ ಪಾತ್ರ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.