ಹುಬ್ಬಳ್ಳಿ: ಹೊರ ನೋಟಕ್ಕೆ ಎಲ್ಲ ಸೌಲಭ್ಯಗಳನ್ನು ಒಳಗೊಂಡ ಮಾದರಿ ಬಡಾವಣೆ. ಕಾಂಕ್ರೀಟ್ ರಸ್ತೆ, ಗಟಾರ, ಒಳಚರಂಡಿ, ಕುಡಿಯುವ ನೀರಿನ ಸೌಕರ್ಯ, ಬೀದಿದೀಪ ಹೀಗೆ ಎಲ್ಲ ಮೂಲಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಆದರೆ, ಸ್ಥಳೀಯರನ್ನು ವಿಚಾರಿಸಿದರೆ ಒಂದೊಂದೇ ಹುಳುಕು ತೆರೆದುಕೊಳ್ಳುತ್ತದೆ!
ಬೀದಿದೀಪವಿದೆ, ರಾತ್ರಿ ಸರಿಯಾಗಿ ಬೆಳಗುವುದಿಲ್ಲ. ಕಾಂಕ್ರೀಟ್ ರಸ್ತೆಗೆ ಗಟಾರ ನಿರ್ಮಿಸಲಾಗಿದೆ. ಮಳೆ ಬಂತೆಂದರೆ ಮನೆಗಳಿಗೆ ನೀರು ನುಗ್ಗುತ್ತದೆ. ಕುಡಿಯುವ ನೀರಿನ ಸೌಲಭ್ಯವಿದೆ, ವಾರಕ್ಕೊಮ್ಮೆ ಎರಡು ಗಂಟೆ ದೊರೆತರೆ ಹೆಚ್ಚು. ಸುತ್ತೆಲ್ಲ ಸ್ವಚ್ಛತೆಯಿದೆ, ಗಟಾರದಲ್ಲಿ ನೀರು ಮಡುಗಟ್ಟಿ ವಾತಾವರಣ ಹೊಲಸಾಗಿದೆ. ಸಂಜೆಯಾಯಿತೆಂದರೆ ಸೊಳ್ಳೆಗಳ ಹಾವಳಿ, ನೆಮ್ಮದಿಯ ನಿದ್ರೆಯೂ ದೂರವಾಗಿದೆ...
ಇದು, ವಾರ್ಡ್ ನಂ. 61ರ ಪಾಂಡುರಂಗ ಕಾಲೊನಿ, ನಾರಾಯಣಸೋಫಾ, ಸದರಸೋಫಾ, ಔರಾದ್ ಓಣಿ, ವಿಠಲ ಪೇಟೆ, ಗುಡಿ ಓಣಿ, ಹಣಗಿ ಓಣಿ ಸುತ್ತಮುತ್ತಲಿನ ಬಡಾವಣೆಯ ವಾಸ್ತವ ಸ್ಥಿತಿ. ಅರ್ಧಗಂಟೆ ಮಳೆ ಸುರಿದರೂ, ಹಣಗಿ ಓಣಿಯ ವೃತ್ತದಲ್ಲಿ ಮೊಣಕಾಲಿನವರೆಗೆ ನೀರು ನಿಲ್ಲುತ್ತದೆ. ಅಕ್ಕಪಕ್ಕದ ಮನೆಗಳಿಗೂ ನೀರು ನುಗ್ಗಿ ಸಮಸ್ಯೆ ಸೃಷ್ಟಿಯಾಗುತ್ತದೆ. ಮಳೆಗಾಲದ ಮೂರು–ನಾಲ್ಕು ತಿಂಗಳು ಐದು–ಆರು ಬಾರಿ ಈ ಸಮಸ್ಯೆ ಎದುರಿಸುವುದು ಸ್ಥಳೀಯರಿಗೆ ಅನಿವಾರ್ಯವಾಗಿದೆ.
‘ಹೊಸದಾಗಿ ಕಾಂಕ್ರೀಟ್ ರಸ್ತೆ ಮಾಡಲಾಗಿದೆ. ಅದಕ್ಕೆ ಹೊಂದಿಕೊಂಡು ನಿರ್ಮಿಸಿರುವ ಗಟಾರ ತೀರಾ ಚಿಕ್ಕದಾಗಿದೆ. ಸುತ್ತಲಿನ ಎತ್ತರದ ಬಡಾವಣೆಯ ನೀರು ಇದೇ ಗಟಾರದಲ್ಲಿ ಹರಿದು ಬರುವುದರಿಂದ, ಸಣ್ಣ ಮಳೆಯಾದರೂ ಮನೆಗಳಿಗೆ ನೀರು ನುಗ್ಗುತ್ತದೆ. ಕೆಲವು ಮನೆಗಳ ಮುಂದೆಯೇ ಗಟಾರಗಳಿದ್ದು, ಹೂಳು ತುಂಬಿದೆ. ಅದನ್ನು ತೆಗೆಯದ ಹಾಗೆ, ಗಟಾರದ ಮೇಲ್ಭಾಗ ಸ್ಲ್ಯಾಬ್ ಹಾಕಿದ್ದಾರೆ. ಅಲ್ಲಲ್ಲಿ ಬಿಟ್ಟಿರುವ ಚಿಕ್ಕ ಮ್ಯಾನ್‌ಹೋಲ್‌ಗಳನ್ನು ಸಹ ಸಿಮೆಂಟ್‌ನಿಂದ ಪ್ಲಾಸ್ಟರ್ ಮಾಡಿ ಮುಚ್ಚಿದ್ದಾರೆ. ಅವೈಜ್ಞಾನಿಕ ಕಾಮಗಾರಿಯಿಂದ ಈ ಸಮಸ್ಯೆ ಎದುರಾಗಿದೆ’ ಎಂದು ಹಣಗಿ ಓಣಿಯ ಅನಿಲ ಮಿಸ್ಕಿನ್ ಅಸಮಾಧಾನ ವ್ಯಕ್ತಪಡಿಸುತ್ತಾರೆ.
‘ಗಟಾರದಲ್ಲಿ ಮಡುಗಟ್ಟಿದ ನೀರಿಗೆ ವಾತಾವರಣವೆಲ್ಲ ಗಬ್ಬೆದ್ದು ಸೊಳ್ಳೆಗಳ ಆವಾಸಸ್ಥಾನವಾಗಿದೆ. ರಾತ್ರಿಪೂರ್ತಿ ಸೊಳ್ಳೆ ಕಡಿತದಿಂದ ಸಾಂಕ್ರಾಮಿಕ ರೋಗ ಹೆಚ್ಚಾಗಿದೆ. ಪ್ರತಿದಿನ, ಪ್ರತಿಮನೆಯಿಂದ ಒಬ್ಬರು–ಇಬ್ಬರು ಆಸ್ಪತ್ರೆಗೆ ಅಲೆದಾಡುತ್ತಿದ್ದಾರೆ. ಕುಡಿಯುವ ನೀರಿಗೂ ಪರದಾಡುವ ಸ್ಥಿತಿ ಎದುರಾಗಿದೆ. ಬೀದಿ ದೀಪ ಉರಿದರೆ ಪುಣ್ಯ. ಜನಪ್ರತಿನಿಧಿಗಳನ್ನು, ಅಧಿಕಾರಿಗಳನ್ನು ಪ್ರಶ್ನಿಸಿದರೆ ಮೂಲಸೌಕರ್ಯ ಕಲ್ಪಿಸಿಕೊಟ್ಟಿದ್ದೇವೆ ಎನ್ನುವ ಹಾರಿಕೆ ಉತ್ತರ ನೀಡುತ್ತಾರೆ’ ಎಂದು ಔರಾದ್ ಓಣಿಯ ಶಾಂತಮ್ಮ ತೊಗರಸಿ ಅಳಲು ತೋಡಿಕೊಂಡರು.
ಅಂಗನವಾಡಿ ಕೇಂದ್ರಕ್ಕೆ ಕಾಲುವೆ ನೀರು: ನಾರಾಯಣ ಸೋಫಾದ ರಾಜಕಾಲುವೆ ಪಕ್ಕವೇ ಅಂಗನವಾಡಿ ಕೇಂದ್ರ ನಿರ್ಮಿಸಲಾಗಿದೆ. ಅಲ್ಲಿ 20ಕ್ಕೂ ಹೆಚ್ಚು ಮಕ್ಕಳು ಬರುತ್ತಿದ್ದು, ಹೊಸಲು ವಾತಾವರಣದಲ್ಲಿಯೇ ಅಕ್ಷರಭ್ಯಾಸ ಮಾಡುತ್ತ, ಉಪಾಹಾರ ಸೇವಿಸುತ್ತಾರೆ. ಮಳೆಗಾಲದಲ್ಲಿ ಕಾಲುವೆ ತುಂಬಿ, ಅಂಗನವಾಡಿ ಕೇಂದ್ರದ ಒಳಗೂ ನೀರು ನುಗ್ಗುತ್ತದೆ. ಮಕ್ಕಳಿಗೆ ವಿತರಿಸುವ ಆಹಾರ ಪದಾರ್ಥಗಳು ಆ ನೀರಿನಲ್ಲಿ ತೇಲುತ್ತವೆ. ಇದು ಪ್ರತಿ ವರ್ಷದ ಸಮಸ್ಯೆಯಾಗಿದೆ. ಅಂಗನವಾಡಿ ಕೇಂದ್ರ ಸ್ಥಳಾಂತರಿಸುವಂತೆ ಸ್ಥಳೀಯರು ಸಾಕಷ್ಟು ಬಾರಿ ಸ್ಥಳೀಯರು ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದಾರೆ. ಆದರೂ, ಪರಿಹಾರ ಸಿಕ್ಕಿಲ್ಲ ಎನ್ನುವುದು ಸ್ಥಳೀಯರ ಆರೋಪ.
ರಾಜಕಾಲುವೆ ಒತ್ತುವರಿ ಮಾಡಿಕೊಂಡವರಿಗೆ ನೋಟಿಸ್ ನೀಡಿ ತೆರವುಗೊಳಿಸಲಾಗುವುದು. ಪಾಂಡುರಂಗ ಕಾಲೊನಿ ಧೋಬಿಘಾಟ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ.–ರುದ್ರೇಶ ಘಾಳಿ, ಆಯುಕ್ತ ಮಹಾನಗರ ಪಾಲಿಕೆ ಆಯುಕ್ತ
ಪ್ರತಿ ಮಳೆಗಾಲದಲ್ಲೂ ರಾಜಕಾಲುವೆ ತುಂಬಿ ಮನೆಯೊಳಗೆ ಹೊಲಸು ನೀರು ನುಗ್ಗುತ್ತದೆ. ಈ ಬಾರಿಯಂತೂ ಅಕಾಲಿಕ ಮಳೆಗೇ ನೀರು ನುಗ್ಗಿತ್ತು.– ಮುಸ್ತಾಕ್ ಅಹ್ಮದ್, ಪಾಂಡುರಂಗ ಕಾಲೊನಿ
ಗಟಾರ ಚಿಕ್ಕದಾಗಿರುವುದರಿಂದ ನೀರು ಸರಿಯಾಗಿ ಹರಿಯದೆ ಮನೆಯೊಳಗೆ ನುಗ್ಗುತ್ತದೆ. ಅಧಿಕಾರಿಗಳು ಜನಪ್ರತಿನಿಧಿಗಳು ಪರಿಹಾರ ನೀಡಬೇಕು.–ರೇಣುಕಾ ಮೆಹರವಾಡೆ, ಹಣಗಿ ಓಣಿ
ರಾಜಕಾಲುವೆ; ಮುಳುಗದಿರಲಿ ಬದುಕು
ಸುತಗಟ್ಟಿ ಗಾಮನಗಟ್ಟಿ ಉಣಕಲ್ ಪ್ರದೇಶಗಳಲ್ಲಿ ನಿರಂತರ ಮಳೆಯಾದರೆ ಉಣಕಲ್ ಕೆರೆ ತುಂಬಿ ಹರಿಯುತ್ತದೆ. ಇದರಿಂದ ರಾಜಕಾಲುವೆಯೂ ತುಂಬಿ ಪಾಂಡುರಂಗ ಕಾಲೊನಿ ಬಳಿಯಿರುವ ಸುಮಾರು 20ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗುತ್ತದೆ. ದಿನಸಿ ಪದಾರ್ಥ ಸೇರಿದಂತೆ ಬಟ್ಟೆಗಳು ಹಾಗೂ ಗೃಹೋಪಯೋಗಿ ವಸ್ತುಗಳು ಸಹ ನೀರು ಪಾಲಾಗುತ್ತವೆ. ಪ್ರತಿ ಮಳೆಗಾಲದಲ್ಲಿ ಈ ಭಾಗದ ನಿವಾಸಿಗಳು ಈ ಸಮಸ್ಯೆ ಎದುರಿಸುತ್ತಾರೆ.
ನಗರದಲ್ಲಿ 8.5 ಕಿ.ಮೀ. ರಾಜಕಾಲುವೆ ಮಾರ್ಗವಿದ್ದು ಚನ್ನಪೇಟೆಯ ಧೋಬಿಘಾಟ್ ಮತ್ತು ಪಾಂಡುರಂಗ ಕಾಲೊನಿಯಲ್ಲಿ ಶೇ 80ರಷ್ಟು ಒತ್ತುವರಿಯಾಗಿದೆ ಎಂದು ಪಾಲಿಕೆ ನಡೆಸಿದ ಸಮೀಕ್ಷೆಯಲ್ಲಿ ಪತ್ತೆಯಾಗಿದೆ. ಇದೇ ರಾಜಕಾಲುವೆಯನ್ನು ಸ್ಮಾರ್ಟ್‌ಸಿಟಿ ಯೋಜನೆಯಡಿ ಗ್ರೀನ್ ಮೊಬಿಲಿಟಿ ಕಾರಿಡಾರ್(ಹಸಿರು ಪಥ) ಮಾಡಲಾಗುತ್ತಿದೆ. ಎರಡು ಹಂತದ ಕಾಮಗಾರಿ ಪೂರ್ಣಗೊಂಡಿದ್ದು ಮೂರನೇ ಹಂತದದಲ್ಲಿ 300 ಮೀಟರ್ ಕಾಮಗಾರಿ ನಡೆಯಬೇಕಿದೆ. ಈ ಭಾಗದಲ್ಲಿ ಕಾಲುವೆ ಒತ್ತುವರಿ ಮಾಡಿಕೊಂಡಿದ್ದರಿಂದ ಕಾಮಗಾರಿ ಅರ್ಧಕ್ಕೆ ನಿಂತಿದೆ.
‘ಕಾಲುವೆ ಅಭಿವೃದ್ಧಿ ನೆಪದಲ್ಲಿ ಕಾಟಾಚಾರಕ್ಕೆ ಹೂಳು ಎತ್ತಿದ್ದಾರೆ. ಕೆಲವು ಕಡೆ ಕಾಲುವೆ ಮಧ್ಯೆ ಮಣ್ಣು ತೆಗೆದು ಹಾಗೆಯೇ ಬಿಡಲಾಗಿದೆ. ಮಳೆಗಾಲದಲ್ಲಿ ಕಾಲುವೆ ಉಕ್ಕಿ ಹರಿಯುವಾಗ ಅಕ್ಕಪಕ್ಕದ ಮನೆಗಳಿಗೂ ನುಗ್ಗುತ್ತವೆ. ಆದಷ್ಟು ಬೇಗ ಕಾಮಗಾರಿ ಮುಕ್ತಾಯಗೊಳಿಸಬೇಕು’ ಎಂದು ರಸೀದಾ ಬಾನು ಆಗ್ರಹಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.