ADVERTISEMENT

ಖಾಸಗೀಕರಣ ಆದೇಶ ಹಿಂಪಡೆಯಲು ಒತ್ತಾಯ

ನೈರುತ್ಯ ರೈಲ್ವೆಯ ಮಜ್ದೂರ್‌ ಯೂನಿಯನ್‌ ವತಿಯಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2019, 13:32 IST
Last Updated 19 ಸೆಪ್ಟೆಂಬರ್ 2019, 13:32 IST
ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ನೈರುತ್ಯ ರೈಲ್ವೆಯ ಮಜ್ದೂರ್‌ ಯೂನಿಯನ್‌ ಪದಾಧಿಕಾರಿಗಳು ಹುಬ್ಬಳ್ಳಿಯಲ್ಲಿ ಗುರುವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು
ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ನೈರುತ್ಯ ರೈಲ್ವೆಯ ಮಜ್ದೂರ್‌ ಯೂನಿಯನ್‌ ಪದಾಧಿಕಾರಿಗಳು ಹುಬ್ಬಳ್ಳಿಯಲ್ಲಿ ಗುರುವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು   

ಹುಬ್ಬಳ್ಳಿ: ರೈಲ್ವೆ ಇಲಾಖೆ 100 ದಿನಗಳ ಕಾರ್ಯತಂತ್ರದಲ್ಲಿ ಪ್ರಸ್ತಾಪಿಸಿರುವ ರೈಲ್ವೆ ಉತ್ಪಾದನಾ ಘಟಕಗಳನ್ನು ಮತ್ತು ವರ್ಕ್‌ಶಾಪ್‌ಗಳನ್ನು ಖಾಸಗೀಕರಣಗೊಳಿಸುವ ಆದೇಶವನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿ ನೈರುತ್ಯ ರೈಲ್ವೆಯ ಮಜ್ದೂರ್‌ ಯೂನಿಯನ್‌ ಪದಾಧಿಕಾರಿಗಳು ಗುರುವಾರ ಪ್ರತಿಭಟನೆ ನಡೆಸಿದರು.

ಗದಗ ರಸ್ತೆ ವರ್ಕ್‌ಶಾಪ್‌ನಿಂದ ರೈಲ್‌ ಸೌಧಧ ತನಕ ಮೆರವಣಿಗೆ ನಡೆಸಿ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.

ಕಾರ್ಮಿಕರನ್ನು ಉದ್ದೇಶಿಸಿ ಯೂನಿಯನ್‌ನ ವಲಯ ಪ್ರಧಾನ ಕಾರ್ಯದರ್ಶಿ ಡಾ. ಎ.ಎಂ. ಡಿಕ್ರೂಜ್‌ ಮಾತನಾಡಿ ‘ರೈಲ್ವೆಯ ಯಾವುದೇ ಉತ್ಪಾದನಾ ಘಟಕಗಳನ್ನು ಅಥವಾ ನಿತ್ಯದ ಕೆಲಸಗಳನ್ನು ಖಾಸಗೀಕರಣ ಮಾಡಬಾರದು. ಕೆಲ ರೈಲುಗಾಡಿಗಳನ್ನು ಓಡಿಸಲು ಖಾಸಗಿ ಕಂಪನಿಗಳಿಗೆ ಅವುಗಳನ್ನು ಹಸ್ತಾಂತರಿಸುವ ಆದೇಶ ಹಿಂಪಡೆಯಬೇಕು. ಪ್ರಿಂಟಿಂಗ್‌ ಪ್ರೆಸ್‌ ಮುಚ್ಚುವ ಆದೇಶ‌ ವಾಪಸ್ ಪಡೆಯಬೇಕು’ ಎಂದು ಆಗ್ರಹಿಸಿದರು.

ADVERTISEMENT

‘2016ರ ಏಪ್ರಿಲ್‌ನಿಂದ ಈಚೆಗೆ ನೇಮಕವಾದ ರೈಲ್ವೆ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸಬೇಕು. ಅವರಿಗೆ ಹಳೇ ಪಿಂಚಣಿ ಪದ್ಧತಿ ಮುಂದುವರಿಸಬೇಕು. ನೇರ ನೇಮಕಾತಿಯ ಶೇ 10ರಷ್ಟು ಹುದ್ದೆಗಳನ್ನು ಟ್ರ್ಯಾಕ್‌ ನಿರ್ವಹಣೆ ಮಾಡುವವರಿಗೆ ಮೀಸಲಿಡಬೇಕು. 55 ವರ್ಷ ವಯಸ್ಸಾದ ಅಥವಾ 33 ವರ್ಷ ಸೇವೆ ಸಲ್ಲಿಸಿದ ಕಾರ್ಮಿಕರು ಕಡ್ಡಾಯ ನಿವೃತ್ತಿ ಹೊಂದಬೇಕು ಎನ್ನುವ ಆದೇಶ ಹಿಂಪಡೆಯಬೇಕು’ ಎಂದು ಒತ್ತಾಯಿಸಿದರು.

ಯೂನಿಯನ್‌ನ ವಲಯ ಅಧ್ಯಕ್ಷ ಆರ್‌.ಆರ್‌. ನಾಯಕ್ ಹಾಗೂ ವಲಯ ಖಜಾಂಚಿ ಈ. ಚಾರಖಾನಿ ಮಾತನಾಡಿ ‘ಮೆಕಾನಿಕಲ್‌, ಎಲೆಕ್ಟ್ರಿಕಲ್‌, ಸಿವಿಲ್‌ ಎಂಜಿನಿಯರಿಂಗ್‌ ಹೀಗೆ ಬೇರೆ ಬೇರೆ ವಿಭಾಗದ ತಾಂತ್ರಿಕ ಸಿಬ್ಬಂದಿಗೆ ಪಾಳೆ ಭತ್ಯೆ ನೀಡಬೇಕು. ಎಲ್ಲ ಸಿಬ್ಬಂದಿಗೆ ಕಾಲಕಾಲಕ್ಕೆ ಬಡ್ತಿ ಕೊಡಬೇಕು. ಸಮವಸ್ತ್ರಕ್ಕೆ ನೀಡುವ ಹಣವನ್ನು ಎಲ್ಲ ವರ್ಗಗಳ ಸಿಬ್ಬಂದಿಗೆ ವಿಸ್ತರಿಸಬೇಕು. ರೈಲ್ವೆಯ ಲಾಭ ಹೆಚ್ಚಾದಂತೆ ಉತ್ಪಾದನಾ ಆಧಾರಿತ ಬೋನಸ್‌ ಕೊಡಬೇಕು. ಎಲ್ಲ ಕಾರ್ಮಿಕರ ಪೋಷಕರಿಗೆ ವೈದ್ಯಕೀಯ ಹಾಗೂ ಪಾಸ್‌ ಸೌಲಭ್ಯ ಕಲ್ಪಿಸಬೇಕು’ ಎಂದರು.

ಯೂನಿಯನ್‌ನ ಸಹಾಯಕ ಪ್ರಧಾನ ಕಾರ್ಯದರ್ಶಿ ಕೆ. ವೆಂಕಟೇಶ, ಜಯಲಕ್ಷ್ಮಿ, ಎಸ್‌.ಎಫ್‌. ಮಲ್ಲಾಡ, ವಿಭಾಗೀಯ ಕಾರ್ಯದರ್ಶಿಗಳಾದ ಅಲ್ಬರ್ಟ್‌ ಡಿಕ್ರೂಜ್‌, ಪ್ರವೀಣ ಪಾಟೀಲ, ಪದಾಧಿಕಾರಿಗಳಾದ ಜಾಕೀರ್‌ ಸನದಿ, ವೈ. ಜಾಕೋಬ್‌, ಮಲ್ಲಿಕಾರ್ಜುನ ಸಿಂದಗಿ, ಶಾಹೀನ್‌ ಆದೋನಿ ಮತ್ತು ಮುರುಗನ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.