ADVERTISEMENT

ಹುಬ್ಬಳ್ಳಿ: ಆಟೊ ಚಾಲಕರಿಗೆ ಇನ್‌ಸ್ಪೆಕ್ಟರ್‌ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2022, 5:21 IST
Last Updated 26 ನವೆಂಬರ್ 2022, 5:21 IST
ಹುಬ್ಬಳ್ಳಿಯ ಇಂದಿರಾಗಾಜಿನ ಮನೆ ಎದುರು ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಪೂರ್ವ ಸಂಚಾರ ಠಾಣೆ ಇನ್‌ಸ್ಪೆಕ್ಟರ್‌ ಸಿ.ಎನ್‌. ಕಾಡದೇವರಮಠ ಮಾತನಾಡಿದರು
ಹುಬ್ಬಳ್ಳಿಯ ಇಂದಿರಾಗಾಜಿನ ಮನೆ ಎದುರು ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಪೂರ್ವ ಸಂಚಾರ ಠಾಣೆ ಇನ್‌ಸ್ಪೆಕ್ಟರ್‌ ಸಿ.ಎನ್‌. ಕಾಡದೇವರಮಠ ಮಾತನಾಡಿದರು   

ಹುಬ್ಬಳ್ಳಿ: ‘ಪರವಾನಗಿ ಇಲ್ಲದೆ, ದಾಖಲೆಗಳಿಲ್ಲದೆ ಹಾಗೂ ಸಂಚಾರ ನಿಯಮಗಳನ್ನು ಉಲ್ಲಂಘಿಸಿ ಸಂಚರಿಸುವ ಆಟೊಗಳ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಲು ನಿರ್ಧರಿಸಿದ್ದು, ಆಟೊ ಚಾಲಕರು ಎಚ್ಚೆತ್ತುಕೊಳ್ಳಬೇಕು’ ಎಂದು ಪೂರ್ವ ಸಂಚಾರ ಠಾಣೆ ಇನ್‌ಸ್ಪೆಕ್ಟರ್‌ ಸಿ.ಎನ್‌. ಕಾಡದೇವರಮಠ ಹೇಳಿದರು.

ನಗರದ ಇಂದಿರಾಗಾಜಿನ ಮನೆ ಎದುರು ಶುಕ್ರವಾರ ಸಾರಿಗೆ ಇಲಾಖೆಯಿಂದ ಹಮ್ಮಿಕೊಂಡಿದ್ದ ವಾಯುಮಾಲಿನ್ಯ ನಿಯಂತ್ರಣ ಮಾಸಾಚರಣೆಯಲ್ಲಿ ಅವರು ಮಾತನಾಡಿದರು. ‘ಕೆಲವು ಚಾಲಕರು ಬಸ್‌ ತಂಗುದಾಣ, ಪ್ರಮುಖ ವೃತ್ತ ಸೇರಿದಂತೆ ಎಲ್ಲೆಂದರಲ್ಲಿ ಆಟೊಗಳನ್ನು ನಿಲ್ಲಿಸಿ ವಾಹನಗಳ ಸಂಚಾರ ದಟ್ಟಣೆಗೆ ಕಾರಣರಾಗುತ್ತಿದ್ದಾರೆ. ಸಂಚಾರ ನಿಯಮ ಉಲ್ಲಂಘಿಸಿ ಒಡಾಡುವ ಆಟೊಗಳನ್ನು ವಶಪಡಿಸಿಕೊಳ್ಳಲಾಗುವುದು. ಆಟೊಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಇಟ್ಟುಕೊಂಡಿರಬೇಕು’ ಎಂದು ಎಚ್ಚರಿಸಿದರು.

‘ಕೆಲವು ಆಟೊಗಳು ಏಳು–ಎಂಟು ಮಂದಿಗೆ ಹಸ್ತಾಂತರವಾಗಿದೆ. ಅದರ ಮೂಲ ಮಾಲೀಕರು ಯಾರು ಎನ್ನುವುದೇ ಗೊತ್ತಾಗುತ್ತಿಲ್ಲ. ಸದ್ಯ ಆಟೊ ಒಡಿಸುವವರ ಹೆಸರಲ್ಲೂ ಅದು ಇರುವುದಿಲ್ಲ. ಮಾರಾಟ ಮಾಡಿದ ವ್ಯಕ್ತಿ ಊರು ಬಿಟ್ಟಿರಬಹುದು, ಮೃತಪಟ್ಟಿರಬಹುದು. ಏನಾದರೂ ಅವಘಡ ಸಂಭವಿಸಿದರೆ ಅದಕ್ಕೆ ಜವಾಬ್ದಾರರು ಯಾರು? ಆಟೊ ಖರೀದಿಸಿದ ತಕ್ಷಣ ಅದನ್ನು ಹೆಸರಿಗೆ ಮಾಡಿಕೊಳ್ಳಬೇಕು. ವಿಮೆ ಮಾಡಿಸದ ಹಾಗೂ ಮೀಟರ್‌ ಅಳವಡಿಸಿಕೊಳ್ಳದ ಆಟೊಗಳನ್ನು ಸಂಚರಿಸಲು ಬಿಡುವುದಿಲ್ಲ. ಅನಗತ್ಯವಾಗಿ ಪ್ರಕರಣಗಳನ್ನು ದಾಖಲಿಸಿಕೊಳ್ಳಲು ಹೋಗಬೇಡಿ’ ಎಂದು ಹೇಳಿದರು.

ADVERTISEMENT

ಆಟೊ ಚಾಲಕರ ಸಮಘದ ಅಧ್ಯಕ್ಷ ಶೇಖರಯ್ಯ ಮಠಪತಿ, ಮುರಳಿ ಇಂಗಳಹಳ್ಳಿ, ಹನುಮಂತ ಪವಾಡಿ, ಪ್ರಕಾಶ ಉಳ್ಳಾಗಡ್ಡಿ, ದಾವಲ್‌ಸಾಬ್‌ ಕುರಹಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.