ADVERTISEMENT

ಪ್ಲಾಸ್ಟಿಕ್‌: ಪರ್ಯಾಯ ಬಳಕೆಗೆ ಒತ್ತು ನೀಡಿ

ಮಹಾನಗರ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ಸಲಹೆ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2019, 11:11 IST
Last Updated 29 ನವೆಂಬರ್ 2019, 11:11 IST

ಹುಬ್ಬಳ್ಳಿ: ‘ವ್ಯಾಪಾರಿಗಳು ಪ್ಲಾಸ್ಟಿಕ್‌ಗೆ ಪರ್ಯಾಯವಾದ ವಸ್ತುಗಳ ಬಳಕೆಗೆ ಒತ್ತು ನೀಡಬೇಕು’ ಎಂದು ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ವ್ಯಾಪಾರಿಗಳಿಗೆ ಸಲಹೆ ನೀಡಿದರು.

ಪಾಲಿಕೆಯಲ್ಲಿ ಬುಧವಾರ ವ್ಯಾಪಾರಿಗಳು ಹಾಗೂ ವಾಣಿಜ್ಯ ಮಳಿಗೆಗಳ ಮಾಲೀಕರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ‘ಪ್ಲಾಸ್ಟಿಕ್ ಬಳಕೆ ತಡೆಗಾಗಿ, ವ್ಯಾಪಾರಿಗಳು ಗ್ರಾಹಕರಿಂದ ಮರು ಖರೀದಿಸುವ (ಬೈ-ಬ್ಯಾಕ್) ಪದ್ಧತಿಯನ್ನು ಅಳವಡಿಸಿಕೊಂಡರೆ ಹೆಚ್ಚು ಉಪಯುಕ್ತವಾಗಲಿದೆ’ ಎಂದರು.

‘ಹೋಟೆಲ್‌ನವರು, ಬೇಕರಿಯವರು, ವ್ಯಾಪಾರಿಗಳು, ಹಾಲು ಒಕ್ಕೂಟದವರು ಪ್ಯಾಕಿಂಗ್‌ಗೆ ಪ್ಲಾಸ್ಟಿಕ್ ಬದಲು, ಪರಿಸರ ಸ್ನೇಹಿ ಉತ್ಪನ್ನಗಳ ಬಳಕೆಗೆ ಮುಂದಾಗಬೇಕು. ಜತೆಗೆ, ಅವುಗಳ ಮರು ಸಂಗ್ರಹಣೆ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕು’ ಎಂದು ಹೇಳಿದರು.

ADVERTISEMENT

ಸಭೆಯಲ್ಲಿ ಭಾಗವಹಿಸಿದ್ದ ಹಾಲು ಒಕ್ಕೂಟದ ಅಧಿಕಾರಿಗಳು, ಹುಬ್ಬಳ್ಳಿ ಮತ್ತು ಧಾರವಾಡದ ಕೆಲವೆಡೆ ಹಾಲು ವಿತರಣಾ ಬೂತ್‌ಗಳಲ್ಲಿ ಯಂತ್ರಗಳನ್ನು ಅಳವಡಿಸುವ ಬಗ್ಗೆ ಚಿಂತನೆ ನಡೆದಿದೆ. ಬೆಂಗಳೂರು ಮತ್ತು ಬೆಳಗಾವಿ ಮಾದರಿಯ ಅಂಶಗಳನ್ನೂ ಪರಿಗಣಿಸಲಾಗುತ್ತಿದೆ ಎಂದು ಸಭೆಯ ಗಮನಕ್ಕೆ ತಂದರು.

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ವಿಜಯಕುಮಾರ ಖಡಕಬಾವಿ, ಪ್ಲಾಸ್ಟಿಕ್‌ಗೆ ಪರ್ಯಾಯ ವಸ್ತುಗಳು ಹಾಗೂ ಮರುಬಳಕೆ (ರಿಸೈಕ್ಲಿಂಗ್) ಮಾಡುವ ಘಟಕಗಳ ಬಗ್ಗೆ ಮಾಹಿತಿ ನೀಡಿದರು. ಮೈ ಗ್ರೀನ್ ಬಿನ್ ಸಂಸ್ಥೆಯ ಸುರೇಶ ನಾಯರ್, ಪರಿಸರ ಎಂಜಿನಿಯರ್‌ಗಳಾದ ಅಧಿಕಾರಿ ಶೋಭಾ ಪೋಳ ಹಾಗೂ ನಯನಾ ಕೆ.ಎಸ್. ಇದ್ದರು.

ಸಿದ್ಧ ಆಹಾರ ತಯಾರಿಸುವ ಅಂಗಡಿಗಳ ಮಾಲೀಕರು, ಎಲೆಕ್ಟ್ರಾನಿಕ್ ಉಪಕರಣಗಳ ಮಾರಾಟಗಾರರು ಹಾಗೂ ರಿಟೇಲ್ ವ್ಯಾಪಾರಿಗಳು ಸಭೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.