ADVERTISEMENT

25ರೊಳಗೆ ಕಾಮಗಾರಿ ಮುಗಿಸಲು ಸೂಚನೆ

ಎಂಟು ದಿನಗಳಲ್ಲಿ ಈಜುಕೊಳದ ಕೆಲಸ ಮುಗಿಸುವ ಸವಾಲು, 2ರಂದು ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2019, 10:00 IST
Last Updated 19 ಸೆಪ್ಟೆಂಬರ್ 2019, 10:00 IST
ಹುಬ್ಬಳ್ಳಿಯಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ನವೀಕರಣಗೊಳ್ಳುತ್ತಿರುವ ಈಜುಕೊಳದ ನೋಟ
ಹುಬ್ಬಳ್ಳಿಯಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ನವೀಕರಣಗೊಳ್ಳುತ್ತಿರುವ ಈಜುಕೊಳದ ನೋಟ   

ಹುಬ್ಬಳ್ಳಿ: ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ನಡೆಯುತ್ತಿರುವ ನಗರದ ಈಜುಕೊಳದ ನವೀಕರಣ ಕಾರ್ಯ ಸೆ. 25ರ ಒಳಗೆ ಮುಗಿಸಲು ಗುತ್ತಿಗೆದಾರರಿಗೆ ಅಧಿಕಾರಿಗಳು ಸೂಚಿಸಿದ್ದಾರೆ.

ಕಳೆದ ಜನವರಿಯಲ್ಲಿ ನೀರಿನ ಸಮಸ್ಯೆ ಎದುರಾದ ಕಾರಣ ಮಹಾನಗರ ಪಾಲಿಕೆಯ ಈಜುಕೊಳವನ್ನು ಮುಚ್ಚಲಾಗಿತ್ತು. ಆಗಿನಿಂದ ನಿರಂತರ ನೀರಿನ ಅಭಾವ ಕಾಡಿತ್ತು. ಇದನ್ನು ಅಂತರರಾಷ್ಟ್ರೀಯ ಗುಣಮಟ್ಟಕ್ಕೆ ತಕ್ಕಂತೆ ರೂಪಿಸಲು ಸ್ಮಾರ್ಟ್‌ ಸಿಟಿ ಯೋಜನೆಯಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು.

ಈ ಈಜುಕೊಳ ಅಂದಾಜು ಆರು ಲಕ್ಷ ಗ್ಯಾಲನ್‌ (27.2 ಲಕ್ಷ ಲೀಟರ್‌) ನೀರಿನ ಸಾಮರ್ಥ್ಯ ಹೊಂದಿದೆ. ಉತ್ತರ ಕರ್ನಾಟಕದಲ್ಲಿ ಡೈವಿಂಗ್ ಸೌಲಭ್ಯ ಹೊಂದಿರುವ ಏಕೈಕ ಈಜುಕೊಳ ಎನ್ನುವ ಕೀರ್ತಿಯೂ ಇದಕ್ಕಿದೆ. ಕೊಳದ ನೆಲಕ್ಕೆ ಹೊಸ ಟೈಲ್ಸ್‌ಗಳನ್ನು ಹಾಕಲಾಗಿದ್ದು, ಒಟ್ಟು 16 ಅಡಿ ಆಳ ಹೊಂದಿದೆ. ಎಂಟು ಲೇನ್‌ಗಳಿವೆ.

ADVERTISEMENT

ಇನ್ನೂ ಬಾಕಿಯಿವೆ ಕೆಲಸ:

ಈಜುಕೊಳ ಮಣ್ಣು, ದೂಳಿನಿಂದ ಹೊಲಸಾಗಿದೆ. ಕೊಳದ ಸುತ್ತಲೂ ಸಮತಟ್ಟಾದ ಬಂಡೆಗಳನ್ನು ಹಾಕುವ ಕೆಲಸ ಬಾಕಿಯಿದೆ. ನೀರನ್ನು ಕೂಡ ತುಂಬಬೇಕಿದೆ. ಆದರೂ, ಅ. 2ರಂದು ಉದ್ಘಾಟನೆ ಮಾಡಲು ಸ್ಮಾರ್ಟ್‌ ಸಿಟಿ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.

‘ಈಜುಕೊಳದಿಂದ ಮೊದಲು ನೀರು ಸೋರಿಕೆಯಾಗುತ್ತಿತ್ತು. ಪೂರ್ಣ ಶುದ್ಧೀಕರಣ ಆಗುತ್ತಿರಲಿಲ್ಲ. ಈ ಎಲ್ಲ ಸಮಸ್ಯೆಗಳನ್ನು ಪತ್ತೆ ಹಚ್ಚಿ ಹಂತ, ಹಂತವಾಗಿ ಅಂತರರಾಷ್ಟ್ರೀಯ ಗುಣಮಟ್ಟಕ್ಕೆ ತಕ್ಕಂತೆ ಅಭಿವೃದ್ಧಿ ಪಡಿಸಲಾಗಿದೆ. ಮಹಾತ್ಮ ಗಾಂಧೀಜಿ ಅವರ ಜನ್ಮ ದಿನದಂದು ಸ್ಮಾರ್ಟ್‌ ಸಿಟಿಯ ಒಂದು ಯೋಜನೆ ಉದ್ಘಾಟಿಸಲು ಉದ್ದೇಶಿಸಲಾಗಿದೆ’ ಎಂದು ಸ್ಮಾರ್ಟ್ ಸಿಟಿ ಯೋಜನೆಯ ವಿಶೇಷ ಅಧಿಕಾರಿ ಎಸ್‌.ಎಚ್‌. ನರೇಗಲ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಗುತ್ತಿಗೆದಾರರಿಗೆ ಫೆಬ್ರುವರಿಯಲ್ಲಿ ಕಾಮಗಾರಿ ಆದೇಶ ನೀಡಲಾಗಿತ್ತು. ಆದರೆ, ಗುತ್ತಿಗೆದಾರ ಮೇ ನಲ್ಲಿ ಕೆಲಸ ಆರಂಭಿಸಿದ್ದರು. ನವೀಕರಣ ಕಾರ್ಯಕ್ಕೆ ಒಟ್ಟು ₹3.2ಕೋಟಿ ವೆಚ್ಚವಾಗುತ್ತಿದೆ’ ಎಂದರು.

‘ಶೇ 80ರಷ್ಟು ಕೆಲಸ ಪೂರ್ಣಗೊಂಡಿದ್ದು, ಒಂದು ವಾರದಲ್ಲಿ ಹಗಲಿರುಳು ಕೆಲಸ ಮಾಡಲು ಸೂಚಿಸಿದ್ದೇನೆ. ಗುರುವಾರದಿಂದ 15 ಸದಸ್ಯರ ಇನ್ನೊಂದು ತಂಡ ಬರಲಿದ್ದು, ಕಾಮಗಾರಿಯ ವೇಗ ಹೆಚ್ಚಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.