ADVERTISEMENT

ವಿಮಾ ಮೊತ್ತ ಲಪಟಾಯಿಸಿದವರಿಗೆ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2019, 14:27 IST
Last Updated 13 ಏಪ್ರಿಲ್ 2019, 14:27 IST

ಧಾರವಾಡ: ಎಂಟು ವಿವಿಧ ಪ್ರಕರಣಗಳಲ್ಲಿ ಮೋಟಾರು ವಿಮೆ ಪಡೆಯಲುನಕಲಿ ದಾಖಲೆ ಸೃಷ್ಟಿಸಿ ವಿಮಾ ಕಂಪನಿಗೆ ₹68.74ಲಕ್ಷ ಹಣ ವಂಚಿಸಿದ್ದ ಆರೋಪವು ಸಾಭೀತಾದ ಹಿನ್ನೆಲೆಯಲ್ಲಿ ಬ್ಯಾಂಕ್ ವ್ಯವಸ್ಥಾಪಕ, ಇನ್‌ಸ್ಪೆಕ್ಟರ್ ಹಾಗೂ ವಕೀಲ ಸೇರಿ ಎಂಟು ಜನರಿಗೆ ಜೈಲು ಶಿಕ್ಷೆ ಮತ್ತು ₹1.80ಲಕ್ಷ ದಂಡ ವಿಧಿಸಿ ಧಾರವಾಡ ಸಿಬಿಐ ನ್ಯಾಯಾಲಯ ಆದೇಶಿಸಿದೆ.

ಎಂಟು ವಿವಿಧ ಅಪಘಾತ ಪ್ರಕರಣಗಳಲ್ಲಿ ನ್ಯೂ ಇಂಡಿಯಾ ಅಶೂರೆನ್ಸ್‌ ಕಂಪೆನಿಯನ್ನು ವಂಚಿಸಿದ್ದ ವಕೀಲರಾದ ಬೆಳಗಾವಿ ಜಿಲ್ಲೆಯ ಹುಕ್ಕೇರಿಯ ಎಚ್.ಎನ್.ಶೆಟ್ಟಿ, ನಕಲಿ ವೈದ್ಯಕೀಯ ವರದಿ ನೀಡಿದ ಶಾಂತಾ ನರ್ಸಿಂಗ್ ಹೋಂನ ಮುಖ್ಯಸ್ಥ ಡಾ. ರಾಜಕುಮಾರ ಬಿ. ಕೊಪ್ಪ, ಇದಕ್ಕೆ ಸಹಕಾರಿಸಿದ್ದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ನ ಶಾಖಾ ವ್ಯವಸ್ಥಾಪಕ ಎಸ್‌.ಡಿ. ದೇಶಪಾಂಡೆ, ಪೊಲೀಸ್ ಇನ್‌ಸ್ಪೆಕ್ಟರ್‌ ಎಸ್‌.ಎಂ. ತಹಶೀಲ್ದಾರ್‌ ಇವರ ವಿರುದ್ಧ ಸಿಬಿಐ ನ್ಯಾಯಾಲಯದಲ್ಲಿ ದೂರು ದಾಖಲಾಗಿತ್ತು.

ಈ ಪ್ರಕರಣದಲ್ಲಿ ಅಪಘಾತ ನಡೆದ ಸ್ಥಳ ಪರಿಶೀಲನೆ ನಡೆಸಿರಲಿಲ್ಲ. ವಿಮಾ ಮೊತ್ತ ಪಡೆಯಲು ಸಲ್ಲಿಸಿದ್ದ ದಾಖಲೆಗಳು ನಕಲಿ ಎಂಬುದು ಸಾಭೀತಾಗಿತ್ತು. ಹೀಗಾಗಿ ಈ ನಾಲ್ವರಿಗೆ ಮೂರು ವರ್ಷ ಕಠಿಣ ಸಜೆಯನ್ನು ನ್ಯಾಯಾಲಯ ವಿಧಿಸಿದೆ. ಇದೇ ಪ್ರಕರಣದಲ್ಲಿ ಅಪರಾಧಿಗಳಿಗೆ ಸಹಕರಿಸಿದ ಆರೋಪದ ಮೇಲೆ ಬಾಳಪ್ಪ ಪೂಜೇರಿ, ಲಕ್ಕಪ್ಪ ಪೂಜೇರಿ ಮತ್ತು ಮುದುಕಪ್ಪ ಪೂಜೇರಿ ಅವರಿಗೆ ಒಂದು ವರ್ಷ ಸಾದಾ ಶಿಕ್ಷೆಯನ್ನು ನ್ಯಾಯಾಲಯ ವಿಧಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.