ADVERTISEMENT

ಅಂತರರಾಜ್ಯ ವಂಚಕರ ಬಂಧನ

ನಕಲಿ ನೋಟು ಕೊಡುವುದಾಗಿ ನಂಬಿಸಿ ಮೋಸ ಮಾಡಲು ಯತ್ನ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2020, 10:52 IST
Last Updated 22 ಫೆಬ್ರುವರಿ 2020, 10:52 IST
ಮೋಸ ಮಾಡಲು ಪ್ರಯತ್ನಿಸುತ್ತಿದ್ದ ಅಂತರರಾಜ್ಯ ತಂಡವನ್ನು ಡಿಸಿಬಿ ಪೊಲೀಸರು ಬಂಧಿಸಿದ್ದಾರೆ
ಮೋಸ ಮಾಡಲು ಪ್ರಯತ್ನಿಸುತ್ತಿದ್ದ ಅಂತರರಾಜ್ಯ ತಂಡವನ್ನು ಡಿಸಿಬಿ ಪೊಲೀಸರು ಬಂಧಿಸಿದ್ದಾರೆ   

ಬೆಳಗಾವಿ: ಲಕ್ಷ ಕೊಟ್ಟರೆ ಮೂರು ಪಟ್ಟು ನಕಲಿ ನೋಟು ಕೊಡುವುದಾಗಿ ನಂಬಿಸಿ ಮೋಸ ಮಾಡಲು ಪ್ರಯತ್ನಿಸುತ್ತಿದ್ದ ಅಂತರರಾಜ್ಯ ತಂಡವನ್ನು ಡಿಸಿಬಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಮಹಾರಾಷ್ಟ್ರದ ‌ಕೊಲ್ಹಾಪುರದ ರೋಹಿಕರ ಕಾಲೊನಿಯ ಅಮರ ಅಂಬೇಕರ (27), ಕಾಗಲ ಜಿಲ್ಲೆ ಬೆಲ್ಲೋಳಿ ಬಾಚಲಿಯ ಧೈರ್ಯವಂತ ಪಾಟೀಲ (42), ಬಾಬಸೋ ಪಾಟೀಲ (31), ಚಿಕ್ಕೋಡಿ ತಾಲ್ಲೂಕು ಕಲ್ಲೋಳಿಯ ಅಶೋಕ ತೇಲಿ (50) ಮತ್ತು ನಿಪ್ಪಾಣಿಯ ಗಟ್ಟಿಗಲ್ಲಿಯ ರಾಜೇಶ ಮೋಹಿತೆ (48) ಬಂಧಿತರು. ಅವರನ್ನು ಹುಕ್ಕೇರಿ ತಾಲ್ಲೂಕಿನ ಕಮತನೂರು ಕ್ರಾಸ್ ಬಳಿ ಬಂಧಿಸಲಾಗಿದೆ. ದಾಳಿ ಕಾಲಕ್ಕೆ ಒಬ್ಬ ಆರೋಪಿ ಓಡಿ ಹೋಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರಿಂದ ₹ 12ಸಾವಿರ ಅಸಲಿ ನೋಟುಗಳು, 12 ಬಂಡಲ್ ನಕಲಿ ನೋಟುಗಳು (₹ 23.88 ಲಕ್ಷ), ಜೀಪ್, ಕಾರು ಹಾಗೂ 5 ಮೊಬೈಲ್ ಫೋನುಗಳನ್ನು ವಶಕ್ಕೆ ಪಡೆಯಲಾಗಿದೆ.

ADVERTISEMENT

ನೋಟಿನ ಬಂಡಲ್ ಮೇಲೆ ಹಾಗೂ ಕೆಳಗೆ ₹ 500 ಮುಖಬೆಲೆಯ ಅಸಲಿ ನೋಟುಗಳನ್ನು ಇಟ್ಟು ಮಧ್ಯದಲ್ಲಿ ಬಿಳಿ ಕಾಗದದ ಪೇಪರ್‌ಗಳ ಎರಡೂ ಬದಿಯ ಕೊನೆಯಲ್ಲಿ ನೋಟಿನಂತೆ ಕಾಣುವಂತೆ ಬಣ್ಣದಿಂದ ಸಿದ್ಧಪಡಿಸಿರುವ ನಕಲಿ ನೋಟುಗಳು ಇವಾಗಿವೆ. ಪ್ಲಾಸ್ಟಿಕ್ ನಿಂದ ಸುತ್ತಿದ 12 ಬಂಡಲ್ ಗಳನ್ನು ತಯಾರಿಸಿದ್ದಾರೆ. ಪ್ರತಿ ಬಂಡಲಿನಲ್ಲಿ ₹ 2 ಲಕ್ಷವಿದೆ ಎಂದು ನಂಬುವಂತೆ ಸಿದ್ಧಪಡಿಸಿದ್ದಾರೆ. ₹ 1 ಲಕ್ಷ ಕೊಟ್ಟರೆ ಅದಕ್ಕೆ ₹ 3 ಲಕ್ಷ ನಕಲಿ ನೋಟುಗಳನ್ನು ನೀಡುವುದಾಗಿ ನಂಬಿಸಿ ಮೋಸ ಮಾಡಲು ಈ ತಂಡ ಪ್ರಯತ್ನ ಮಾಡುತ್ತಿದ್ದಾಗ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಲಾಗಿದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

ಡಿಸಿಬಿ ಇನ್ ಸ್ಪೆಕ್ಟರ್ ವೀರೇಶ ದೊಡ್ಡಮನಿ ಹಾಗೂ ಡಿಸಿಐಬಿ ಇನ್‌ಸ್ಪೆಕ್ಟರ್ ನಿಂಗನಗೌಡ ಪಾಟೀಲ ಹಾಗೂ ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.