ADVERTISEMENT

ಧಾರವಾಡ: ಡಿಕೆಶಿ ಆಪ್ತ, ಉದ್ಯಮಿ ಯು.ಬಿ.ಶೆಟ್ಟಿ ಮನೆ ಮೇಲೆ ಐಟಿ ಅಧಿಕಾರಿಗಳ ದಾಳಿ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2021, 23:23 IST
Last Updated 28 ಅಕ್ಟೋಬರ್ 2021, 23:23 IST
ಉದ್ಯಮಿ ಯು.ಬಿ.ಶೆಟ್ಟಿ ಮನೆ
ಉದ್ಯಮಿ ಯು.ಬಿ.ಶೆಟ್ಟಿ ಮನೆ   

ಧಾರವಾಡ: ಗುತ್ತಿಗೆದಾರ ಸಹೋದರರಾದ ಕಾಂಗ್ರೆಸ್‌ ಮುಖಂಡ ಯು.ಬಿ.ಶೆಟ್ಟಿ ಹಾಗೂ ಅವರಅಣ್ಣ ಸೀತಾರಾಮ ಶೆಟ್ಟಿ ಅವರ ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಗುರುವಾರ ಏಕಕಾಲಕ್ಕೆ ದಾಳಿ ನಡೆಸಿದರು.

ಕೇಂದ್ರ ಸರ್ಕಾರದ ಲೋಕೋಪಯೋಗಿ ಇಲಾಖೆ ಕಾಮಗಾರಿಗಳ ಗುತ್ತಿಗೆದಾರ ಸೀತಾರಾಮ ಶೆಟ್ಟಿ ಅವರ ವಿನಾಯಕ ನಗರದಲ್ಲಿರುವ ಮನೆ ಮೇಲೆ ಹಾಗೂ ರಾಜ್ಯದ ಲೋಕೋಪಯೋಗಿ ಇಲಾಖೆ ಗುತ್ತಿಗೆದಾರ ಯು.ಬಿ.ಶೆಟ್ಟಿ ಅವರಿಗೆ ಸೇರಿದ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದರು.

ಯು.ಬಿ.ಶೆಟ್ಟಿ

ಗೋವಾ, ಬೆಂಗಳೂರು, ಬೆಳಗಾವಿಯಿಂದ 15ಕ್ಕೂ ಹೆಚ್ಚು ಕಾರುಗಳಲ್ಲಿ ಬಂದ ಅಧಿಕಾರಿಗಳು ಶೆಟ್ಟಿ ಸಹೋದರರ ಮನೆಯಲ್ಲಿ ಶೋಧ ಆರಂಭಿಸಿದರು.

ADVERTISEMENT

ಉಡುಪಿ ಜಿಲ್ಲೆಯ ಬೈಂದೂರು ತಾಲ್ಲೂಕಿನ ಉಕ್ಕುಂದದವರಾದ ಯು.ಬಿ.ಶೆಟ್ಟಿ ಅವರು ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿದ್ದಾರೆ. ಉಡುಪಿ ಮತ್ತು ಮಂಗಳೂರು ಸ್ಥಳೀಯ ಸಂಸ್ಥೆಗಳ ವಿಧಾನಪರಿಷತ್ ಕ್ಷೇತ್ರಕ್ಕೆ ಕಾಂಗ್ರೆಸ್‌ ಟಿಕೆಟ್ ಆಕಾಂಕ್ಷಿ. ಬೆಂಗಳೂರಿಗೆ ಹೋಗಿದ್ದ ಯು.ಬಿ.ಶೆಟ್ಟಿಗುರುವಾರ ಬೆಳಿಗ್ಗೆ ಧಾರವಾಡಕ್ಕೆ ಮರಳಿದ್ದರು. ಬಂದ ಕೆಲವೇ ಕ್ಷಣಗಳಲ್ಲಿ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದರು.

ಭಯ ಸೃಷ್ಟಿಸುವ ಕೆಲಸ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಪ್ತರಾಗಿರುವ ಉದ್ಯಮಿ ಯು.ಬಿ. ಶೆಟ್ಟಿ ಅವರ ಮನೆ ಮೇಲೆ ನಡೆದಿರುವ ಐ.ಟಿ ದಾಳಿ ಕುರಿತು ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ, ‘ಐ.ಟಿ ದಾಳಿ ನಡೆಸಿ ಕಾರ್ಯಕರ್ತರಲ್ಲಿ ಭಯ ಸೃಷ್ಟಿಸುವ ರಾಜಕಾರಣವನ್ನು ಬಿಜೆಪಿ ಸರ್ಕಾರ ಮಾಡುತ್ತಿದೆ' ಎಂದರು.

’ಕರ್ನಾಟಕದಲ್ಲಷ್ಟೇ ಅಲ್ಲ, ಎಲ್ಲಾ ರಾಜ್ಯಗಳಲ್ಲೂ ಈ ರೀತಿ ನಡೆಯುತ್ತಿದೆ. ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯಕ್ಕೆ ನಾವು ಹೆದರುವುದಿಲ್ಲ. ಇಂತಹ ದಾಳಿಗಳು ಉಪ ಚುನಾವಣೆ ಫಲಿತಾಂಶದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ’ ಎಂದರು.

‘ದಾಳಿ ರಾಜಕೀಯ ಪ್ರೇರಿತ. ಈ ಸಂದರ್ಭದಲ್ಲಿ ಮನೆಯಲ್ಲಿರುವವರ ಮೊಬೈಲ್ ಕಸಿದುಕೊಂಡ ಅಧಿಕಾರಿಗಳು ಭೀತಿ ಸೃಷ್ಟಿಸಿದ್ದಾರೆ. ಅವರ ಭೇಟಿಗೆ ಹೋಗಿದ್ದವರ ಮೊಬೈಲ್ ಫೋನ್‌ಗಳನ್ನೂ ಕಸಿದುಕೊಂಡಿದ್ದಾರೆ. ಯಾರನ್ನೂ ಸಂಪರ್ಕಿಸಲು ಅವರಿಗೆ ಅವಕಾಶ ನೀಡಿಲ್ಲ’ ಎಂದು ಕೆಪಿಸಿಸಿ ಸದಸ್ಯ ರಾಬರ್ಟ್ ದದ್ದಾಪುರಿ ಆರೋಪಿಸಿದರು.

ಉಡುಪಿಯಲ್ಲೂ ಐಟಿ ದಾಳಿ: ಉದ್ಯಮಿ ಯು.ಬಿ.ಶೆಟ್ಟಿ ಅವರ ಬೈಂದೂರು ತಾಲ್ಲೂಕು ಉಪ್ಪುಂದದ ನಿವಾಸದಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಗುರುವಾರ ಪರಿಶೀಲನೆ ನಡೆಸಿದ್ದಾರೆ.

ಗೋವಾದಿಂದ ಬಂದಿದ್ದ 9 ಅಧಿಕಾರಿಗಳ ತಂಡ ಹಲವು ತಾಸು ದಾಖಲೆಗಳನ್ನು ಪರಿಶೀಲಿಸಿ ವಶಕ್ಕೆ ಪಡೆದಿದೆ ಎಂದು ಮೂಲಗಳು ತಿಳಿಸಿವೆ. ಉಪ್ಪುಂದ ಮೂಲದ ಯು.ಬಿ.ಶೆಟ್ಟಿ ಧಾರವಾಡ ಜಿಲ್ಲೆಯಲ್ಲಿ ನೆಲೆಸಿದ್ದು, ಗುತ್ತಿಗೆ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.