ADVERTISEMENT

‘ಆತ್ಮಸ್ಥೈರ್ಯ’ ಮಾತ್ರೆಯೇ ಮದ್ದು

ಕೋವಿಡ್‌ ಗೆದ್ದ ಸರ್ಕಾರಿ ಮಹಿಳಾ ಅಧಿಕಾರಿಯ ಸ್ಫೂರ್ತಿಯ ಮಾತುಗಳು

ಪ್ರಮೋದ
Published 16 ಜುಲೈ 2020, 17:13 IST
Last Updated 16 ಜುಲೈ 2020, 17:13 IST

ಹುಬ್ಬಳ್ಳಿ: ’ಕೊರೊನಾ ಸೋಂಕಿತರ ಕುರಿತು ಮಾಧ್ಯಮಗಳಲ್ಲಿ ನಕಾರಾತ್ಮಕ ಸುದ್ದಿಗಳೇ ಹೆಚ್ಚು ಬರುತ್ತಿರುವ ಕಾರಣ ಜನ ಹೆದರಿದ್ದಾರೆ. ಆದ್ದರಿಂದ ಅವರಿಗೆ ಆತ್ಮಸ್ಥೈರ್ಯ ಎಂಬ ಮಾತ್ರೆ ಬೇಕಾಗಿದೆ...’

ಕೋವಿಡ್‌ 19ನಿಂದ ಚೇತರಿಸಿಕೊಂಡಿರುವ ಧಾರವಾಡದ ಮಹಿಳಾ ಸರ್ಕಾರಿ ಅಧಿಕಾರಿಯ ಮಾತುಗಳಿವು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಅಧಿಕಾರಿಯಾಗಿರುವ ಅವರು ಸೋಂಕಿಗೆ ತುತ್ತಾಗಿ ಜುಲೈ 4ರಂದು ನಗರದ ಕಿಮ್ಸ್‌ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈಗ 14 ದಿನಗಳ ಹೋಂ ಕ್ವಾರಂಟೈನ್‌ ದಿನಗಳನ್ನು ಕಳೆಯುತ್ತಿದ್ದಾರೆ.

ನನಗೆ ಸೋಂಕು ದೃಢವಾದಾಗ ಬಹಳಷ್ಟು ಹೆದರಿದ್ದೆ. ಆಸ್ಪತ್ರೆಗೆ ಹೋಗುವ ತನಕ ಪ್ರತಿ ನಿಮಿಷಕ್ಕೂ ಭಯ ಹೆಚ್ಚಾಗುತ್ತಲೇ ಇತ್ತು. ಆಸ್ಪತ್ರೆಯಲ್ಲಿ ನನ್ನಂತೆಯೇ ನೂರಾರು ಸೋಂಕಿತರನ್ನು ನೋಡಿದಾಗ; ಹೆದರುವಷ್ಟು ಇದು ಗಂಭೀರ ಕಾಯಿಲೆಯಲ್ಲ ಎನ್ನುವುದು ಮನವರಿಕೆಯಾಯಿತು. ಒತ್ತಡದ ಜೀವನದಿಂದ ಮುಕ್ತರಾಗಿ ವಿಶ್ರಾಂತಿ ಪಡೆಯಲು ಇದು ಒಳ್ಳೆಯ ಅವಕಾಶ ಎನ್ನುವ ಸಕಾರಾತ್ಮಕ ಭಾವನೆಯೂ ನನ್ನಲ್ಲಿ ಮೂಡಿತು ಎಂದು ಅವರು ಹೇಳಿದರು.

ADVERTISEMENT

ಅತಿರಂಜಿತ ವರದಿಗಳಿಂದಲೇ ಜನ ಆತಂಕಕ್ಕೆ ಒಳಗಾಗುತ್ತಿದ್ದಾರೆ. ಸೋಂಕು ತಗುಲಿದ ವ್ಯಕ್ತಿಯಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸವಾಗಬೇಕು. ಸೋಂಕಿನಿಂದ ಹೆಚ್ಚು ಜನ ಗುಣಮುಖರಾಗುತ್ತಿದ್ದಾರೆ ಎನ್ನುವುದು ಜನರಿಗೆ ಮನದಟ್ಟಾಗಬೇಕು. ರೋಗ ನಿರೋಧಕ ಶಕ್ತಿಯಿದ್ದವರಿಗೆ ಏನೂ ತೊಂದರೆಯಾಗುವುದಿಲ್ಲ. ನಿಮಗೆ ನೀವೇ ಧೈರ್ಯ ಹೇಳಿಕೊಂಡು ಆತ್ಮಸ್ಥೈರ್ಯ ಗಳಿಸಿಕೊಳ್ಳಬೇಕು ಎಂದರು.

ನನ್ನ ಕುಟುಂಬದವರನ್ನು ಆತಂಕದಿಂದ ಹೊರತರಲು ಬೇರೆ ಸೋಂಕಿತರು ಹುಮಸ್ಸಿನಿಂದ ಇರುವ ರೀತಿಯನ್ನು ಮನವರಿಕೆ ಮಾಡಿಕೊಟ್ಟೆ. ಆಗ ಮನೆಯವರೂ ಭಯದಿಂದ ಹೊರಬಂದರು. ಕಿಮ್ಸ್‌ನಲ್ಲಿ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡುತ್ತಿದ್ದರು. ಮಾತ್ರೆಗಳು, ಇಂಜಿಕ್ಷನ್‌ ನೀಡಿ ರಕ್ತಪರೀಕ್ಷೆಗೆ ಒಳಪಡಿಸುತ್ತಿದ್ದರು. ಎಕ್ಸರೆ ಪರೀಕ್ಷೆ ಕೂಡ ಮಾಡಿದರು. ಸೋಂಕಿತರು ನಕಾರಾತ್ಮಕ ವರದಿಗಳು ಮತ್ತು ಭಯದಿಂದ ಹೊರಬಂದು ಪರಿಸ್ಥಿತಿ ಎದುರಿಸುವುದನ್ನು ಕಲಿತುಕೊಳ್ಳಬೇಕು ಎಂದು ಸ್ಫೂರ್ತಿ ತುಂಬಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.