ಹುಬ್ಬಳ್ಳಿ: ‘ಬಲಾಢ್ಯ ಸಮುದಾಯದವರನ್ನು ಕಡಿಮೆ ತೋರಿಸುವುದು, ಕಡಿಮೆ ಇದ್ದ ಸಮುದಾಯದವರನ್ನು ಜಾಸ್ತಿ ತೋರಿಸಿ ವ್ಯತಿರಿಕ್ತ ವರದಿ ಘೋಷಿಸುವ ಷಡ್ಯಂತ್ರ ಈ ಸಮೀಕ್ಷೆಯಲ್ಲಿ ಅಡಗಿದೆ’ ಎಂದು ಸಂಸದ ಜಗದೀಶ ಶೆಟ್ಟರ್ ಆಕ್ರೋಶ ವ್ಯಕ್ತಪಡಿಸಿದರು.
ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಧರ್ಮದ ಕಾಲಂನಲ್ಲಿ ನಾಸ್ತಿಕ, ಗೊತ್ತೇ ಇಲ್ಲ, ತಿಳಿಸಲು ನಿರಾಕರಣೆ, ಇತರೆ ಎಂದೆಲ್ಲ ನಮೂದಿಸಲಾಗಿದೆ. ಹಿಂದೂ ಧರ್ಮದವರನ್ನು ಕಡಿಮೆ ಸಂಖ್ಯೆಯಲ್ಲಿ ತೋರಿಸಬೇಕೆನ್ನುವುದೇ ಸಮೀಕ್ಷೆಯ ಉದ್ದೇಶವಾಗಿದೆ’ ಎಂದು ಆರೋಪಿಸಿದರು.
ಕೇಂದ್ರ ಸರ್ಕಾರಕ್ಕೆ ಮಾತ್ರ ಜನಗಣತಿ, ಜಾತಿಗಣತಿ ಅಥವಾ ಇನ್ಯಾವುದೇ ಗಣತಿ ನಡೆಸಲು ಅಧಿಕಾರವಿದೆ. ಆದರೆ, ಸಿದ್ದರಾಮಯ್ಯ ತಮ್ಮ ರಾಜಕೀಯಕ್ಕೋಸ್ಕರ, ತಮ್ಮ ಸಚಿವ ಸಂಪುಟದ ಸದಸ್ಯರ ವಿರೋಧದ ನಡುವೆಯೂ, ಹಿಂದುಳಿದ ಆಯೋಗದ ಮುಖಾಂತರ ಸಮೀಕ್ಷೆ ನಡೆಸುತ್ತಿದ್ದಾರೆ. ಸಾಮಾಜಿಕ ಮತ್ತು ಶೈಕ್ಷಣಿಕ ಹೆಸರಲ್ಲಿ ಜಾತಿ ಸಮೀಕ್ಷೆ ನಡೆಸುತ್ತಿದ್ದು, ಸಂವಿಧಾನ ವಿರೋಧಿ ನಡೆಯಾಗಿದೆ’ ಎಂದರು.
‘ಈವರೆಗೆ ಕೇಳದ ಸುಮಾರು ನಾಲ್ಕು ನೂರಕ್ಕೂ ಹೆಚ್ಚು ಜಾತಿ ಹೆಸರನ್ನು ಹೆಸರಿಸಿ ಗೊಂದಲ ಸೃಷ್ಟಿಸಿದ್ದಾರೆ. ಹಿಂದೂ, ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯವನ್ನು ವ್ಯವಸ್ಥಿತವಾಗಿ ಒಡೆಯಲು ಸಂಚು ರೂಪಿಸಿದ್ದಾರೆ.
‘ಬಸವ ಸಂಸ್ಕೃತಿ ಅಭಿಯಾನದ ಹೆಸರಲ್ಲಿ ಲಿಂಗಾಯತ ವೀರಶೈವ ಸಮಾಜ ಒಡೆಯಲು ಯತ್ನಿಸಲಾಗುತ್ತಿದೆ. ಅಭಿಯಾನದ ನೇತೃತ್ವ ವಹಿಸಿದವರು, ಮುಂದಿನ ತಿಂಗಳು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸನ್ಮಾನಿಸುವ ಕಾರ್ಯಕ್ರಮ ಇಟ್ಟುಕೊಂಡಿದ್ದಾರೆ. ವೀರಶೈವ ಮತ್ತು ಲಿಂಗಾಯತ ಒಂದೇ ಧರ್ಮ ಎಂದು ಹೋರಾಟ ನಡೆದಾಗ ಮಾತ್ರ ಸೌಲಭ್ಯ ಸಿಗುತ್ತದೆ. ಬೇರೆ ಎಂದು ಹೋದರೆ ಸಿಗುವ ಸೌಲಭ್ಯವೂ ತಪ್ಪಲಿದೆ’ ಎಂದು ಶೆಟ್ಟರ್ ಆತಂಕ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.