ADVERTISEMENT

₹30 ಸಾವಿರ ಕೋಟಿ ಬಂಡವಾಳ ಹೂಡಿಕೆಗೆ ಒಪ್ಪಿಗೆ: ಜಗದೀಶ ಶೆಟ್ಟರ್‌

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2020, 8:01 IST
Last Updated 12 ಆಗಸ್ಟ್ 2020, 8:01 IST
   

ಹುಬ್ಬಳ್ಳಿ: ಹಿಂದಿನ ಎಂಟು ತಿಂಗಳ ಅವಧಿಯಲ್ಲಿ ರಾಜ್ಯದ ವಿವಿಧೆಡೆ ₹30 ಸಾವಿರ ಕೋಟಿ ಹೂಡಿಕೆಗೆ ಉದ್ಯಮಿಗಳು ಮುಂದೆ ಬಂದಿದ್ದು, ಅವರಿಗೆ ಇಲಾಖೆ ಒಪ್ಪಿಗೆ ನೀಡಿದೆ ಎಂದು ಬೃಹತ್‌ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ತಿಳಿಸಿದರು.

ಬುಧವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಹೂಡಿಕೆಗೆ ಆಸಕ್ತಿ ಹೊಂದಿರುವ ಉದ್ಯಮಿಗಳ ಜೊತೆ ನಮ್ಮ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿದ್ದಾರೆ. ಇದರಿಂದ 45ರಿಂದ 50 ಸಾವಿರ ಜನರಿಗೆ ಉದ್ಯೋಗ ಸಿಗುತ್ತದೆ. ಪ್ರಗತಿಯ ಕುರಿತು ಚರ್ಚಿಸಲು ಒಂದೆರೆಡು ವಾರಗಳಲ್ಲಿ ಅಧಿಕಾರಿಗಳ ಸಭೆ ನಡೆಸುತ್ತೇನೆ’ ಎಂದರು.

ಚೀನಾದಲ್ಲಿರುವ ಅಮೆರಿಕ, ಜಪಾನ್‌ನ ಬಹುರಾಷ್ಟ್ರೀಯ ಕಂಪನಿಗಳು ಅಲ್ಲಿಂದ ಹೊರಬರುತ್ತಿದ್ದು, ಆ ರಾಷ್ಟ್ರಗಳು ಕರ್ನಾಟಕದತ್ತ ದೃಷ್ಟಿ ಹಾಯಿಸಿವೆ. ಚೀನಾ ಕಂಪನಿಗಳು ಭಾರತದಲ್ಲಿ ಯಾರ ಮೂಲಕ ವಹಿವಾಟು ನಡೆಸುತ್ತವೆ ಎನ್ನುವುದನ್ನು ನೋಡಿಕೊಂಡು ಒಪ್ಪಿಗೆ ಬಗ್ಗೆ ತೀರ್ಮಾನಿಸಲಾಗುವುದು. ಸ್ವದೇಶಿ ಉತ್ಪನ್ನ ಹೆಚ್ಚಿಸಲು ಹಾಗೂ ಸ್ವಯಂ ಉದ್ಯೋಗಕ್ಕೆ ನಮ್ಮನ್ನು ಅಣಿಗೊಳಿಸಿಕೊಳ್ಳಲು ಲಾಕ್‌ಡೌನ್‌ ಹಾಗೂ ಕೋವಿಡ್‌ ನೆರವಾಗಿದೆ ಎಂದು ಅಭಿಪ್ರಾಯಪಟ್ಟರು.

ADVERTISEMENT

ಕೈಗಾರಿಕೆ ಮತ್ತು ವಾಣಿಜ್ಯೋದ್ಯಮದ ಮೇಲೆ ಕೋವಿಡ್‌ನಿಂದ ಆಗಿದ್ದ ತಾತ್ಕಾಲಿಕ ಹಿನ್ನಡೆ ಈಗ ಕಡಿಮೆಯಾಗುತ್ತಿದೆ. ತಮ್ಮ ರಾಜ್ಯಗಳಿಗೆ ಹೋಗಿದ್ದ ಕಾರ್ಮಿಕರು ದುಡಿಯಲು ಮರಳಿ ಬರುತ್ತಿದ್ದಾರೆ. ಆಟೊ ಮೊಬೈಲ್ಸ್‌, ದ್ವಿಚಕ್ರ ವಾಹನಗಳು ಮತ್ತು ಕಾರುಗಳ ಉತ್ಪಾದನೆ ಆರಂಭವಾಗಿವೆ ಎಂದರು.

ಪೊಲೀಸ್ ವೈಫಲ್ಯವಲ್ಲ: ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ರೌಡಿ ಶೀಟರ್‌ ಪ್ರೂಟ್‌ ಇರ್ಫಾನ್‌ ಮೇಲೆ ನಡೆದ ಗುಂಡಿನ ದಾಳಿ ಕುರಿತು ಪ್ರತಿಕ್ರಿಯಿಸಿದ ಶೆಟ್ಟರ್‌ ‘ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ. ವೈಯಕ್ತಿಕ ಹಾಗೂ ದ್ವೇಷದ ಕಾರಣಕ್ಕೆ ಗುಂಡಿನ ದಾಳಿ ನಡೆದಿದೆ. ಇದು ಪೊಲೀಸ್‌ ವೈಫಲ್ಯ ಎನ್ನಲಾಗದು’ ಎಂದರು.

ಬೆಂಗಳೂರಿನ ಘಟನೆ ಬಗ್ಗೆ ಪ್ರತಿಕ್ರಿಯಿಸಿ ‘ಯಾರೂ ಕಾನೂನು ಕೈಗೆ ತೆಗೆದುಕೊಳ್ಳಬಾರದು. ಕಾನೂನಿನ ಚೌಕಟ್ಟಿನಲ್ಲಿಯೇ ಹೋರಾಡಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.