ADVERTISEMENT

ಜೈಲಿನಲ್ಲಿ ಜಾಮರ್‌; ಸುತ್ತಲಿನವರಿಗೆ ತೊಂದರೆ– ಪರಿಹಾರಕ್ಕೆ ಯತ್ನ; ಅಲೋಕ್‌ಕುಮಾರ್‌

ಕಾರಾಗೃಹ ಮತ್ತು ಸುಧಾರಣೆ ಸೇವೆಗಳ ಡಿಜಿಪಿ ಅಲೋಕ್‌ಕುಮಾರ್‌

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2026, 5:55 IST
Last Updated 19 ಫೆಬ್ರುವರಿ 2026, 5:55 IST
ಕಾರಾಗೃಹ ಮತ್ತು ಸುಧಾರಣೆ ಸೇವೆಗಳ ಡಿಜಿಪಿ ಅಲೋಕ್‌ಕುಮಾರ್‌ ಅವರು ಧಾರವಾಡ ಕೇಂದ್ರ ಕಾರಾಗೃಹದಲ್ಲಿನ ಸಂದರ್ಶನ ವಿಭಾಗದಲ್ಲಿ ವ್ಯವಸ್ಥೆಗಳನ್ನು ವೀಕ್ಷಿಸಿದರು
ಕಾರಾಗೃಹ ಮತ್ತು ಸುಧಾರಣೆ ಸೇವೆಗಳ ಡಿಜಿಪಿ ಅಲೋಕ್‌ಕುಮಾರ್‌ ಅವರು ಧಾರವಾಡ ಕೇಂದ್ರ ಕಾರಾಗೃಹದಲ್ಲಿನ ಸಂದರ್ಶನ ವಿಭಾಗದಲ್ಲಿ ವ್ಯವಸ್ಥೆಗಳನ್ನು ವೀಕ್ಷಿಸಿದರು   

ಧಾರವಾಡ: ಜೈಲಿನಲ್ಲಿ ಜಾಮರ್‌ ಅಳವಡಿಸಿರುವುದರಿಂದ ಈ ಭಾಗದಲ್ಲಿ ಜನರಿಗೆ ತೊಂದರೆ ಕಡಿಮೆ ಮಾಡಲು ಪ್ರಯತ್ನಿಸಲಾಗುವುದು ಎಂದು ಕಾರಾಗೃಹ ಮತ್ತು ಸುಧಾರಣೆ ಸೇವೆಗಳ ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಅಲೋಕ್‌ ಕುಮಾರ್‌ ತಿಳಿಸಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾಮ‌ರ್ ಸಮಸ್ಯೆಯನ್ನು ಟಿಸಿಎಲ್‌ ಸಂಸ್ಥೆ ಗಮನಕ್ಕೆ ತರಲಾಗಿದೆ. ಬೆಳಗಾವಿಯ ಜೈಲು ಭಾಗದಲ್ಲೂ ಜಾಮರ್‌ ಸಮಸ್ಯೆ ಇದೆ. ಸಮಸ್ಯೆ ಪರಿಹಾರಕ್ಕೆ ಬಹಳಷ್ಟು ಪ್ರಯತ್ನ ಮಾಡಬೇಕಿದೆ’ ಎಂದರು

‘ಸ್ಥಾಪನೆಯಾದಾಗ ಕಾರಾಗೃಹ ಊರ ಹೊರಗೆ ಇತ್ತು. ಈ ಊರು ಬೆಳೆದು ಕಾರಾಗೃಹ ಸುತ್ತಮುತ್ತ ನಗರಗಳಾಗಿವೆ. ಕಾರಾಗೃಹದಲ್ಲಿ ನೆಟ್‌ವರ್ಕ್‌ ಸಿಗದಂತೆ ನೋಡಿಕೊಳ್ಳುವುದೂ ಅನಿವಾರ್ಯ’ ಎಂದರು.

ADVERTISEMENT

'ಧಾರವಾಡದ ಕೇಂದ್ರ ಕಾರಾಗೃಹದಲ್ಲಿ ಕಾಯಂ ವೈದ್ಯರು ಇಲ್ಲ. ದೈನಂದಿನ ಸಂಬಳದ ವೈದ್ಯರೊಬ್ಬರು ಭೇಟಿ ನೀಡುತ್ತಾರೆ. ಕೈದಿಗಳಿಗೆ ಮಾನಸಿಕ ಖಿನ್ನತೆ ಜಾಸ್ತಿ ಇರುತ್ತದೆ. ಈಚೆಗೆ ಈ ಜೈಲಿನಲ್ಲಿ ಕೈದಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೈದಿಗಳ ಖಿನ್ನತೆ ನಿವಾರಣೆಗೆ ಪ್ರಯತ್ನಿಸಲಾಗುವುದು’ ಎಂದು ತಿಳಿಸಿದರು.

‘ಮೊದಲ ಬಾರಿಗೆ ಅಪರಾಧ ಎಸಗಿದವರು, ಯುವ ಕೈದಿಗಳನ್ನು ಪ್ರತ್ಯೇಕವಾಗಿ ಇಡಲು ವ್ಯವಸ್ಥೆ ಮಾಡಲಾಗಿದೆ. ಧಾರವಾಡ ಮತ್ತು ಬೆಳಗಾವಿ ಜೈಲುಗಳಲ್ಲಿ ಸಾಮರ್ಥ್ಯಕ್ಕಿಂತ ಕಡಿಮೆ ಕೈದಿಗಳು ಇದ್ದಾರೆ. ಬೆಂಗಳೂರು, ಮಂಗಳೂರು, ಗದಗ, ಕೋಲಾರ ಇತರೆಡೆಗಳ ಜೈಲುಗಳಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ಕೈದಿಗಳು ಇದ್ದಾರೆ ಎಂದು ತಿಳಿಸಿದರು.

‘ಜೈಲು ಸಿಬ್ಬಂದಿ ಮೇಲೆ ಹಲ್ಲೆ ಮಾಡಿರುವ ಘಟನೆ ಈ ಜೈಲಿನಲ್ಲಿ ಈಚೆಗೆ ನಡೆದಿದೆ. ಈ ಕುರಿತು ಪ್ರಕರಣ ದಾಖಲಾಗಿದೆ’ ಎಂದರು.

‘ಮಾದಕ ಪದಾರ್ಥ; ತೀವ್ರ ನಿಗಾ’

ಜೈಲಿನಲ್ಲಿ ಮಾದಕ ಪದಾರ್ಥಗಳಿಗೆ ಸಂಬಂಧಿಸಿ ತೀವ್ರ ನಿಗಾ ಇಟ್ಟಿದ್ಧೇವೆ. ಹೊಸ ಕೈದಿಗಳನ್ನು ಬರುವಾಗ ತಪಾಸಣೆ ಮಾಡಿಸುತ್ತೇವೆ. ಸಂಶಯ ಇರುವವರನ್ನು ಪರೀಕ್ಷೆ ಮಾಡಿಸುತ್ತೇವೆ. ಜೈಲಿನಿಂದ ಹೋಗುವಾಗ ಪರೀಕ್ಷೆ ಮಾಡಿಸುತ್ತೇವೆ. ಸೇವನೆ ಮಾಡಿರುವುದು ದೃಢಪಟ್ಟರೆ ಪ್ರಕರಣ ದಾಖಲಿಸುತ್ತೇವೆ’ ಎಂದು ಅಲೋಕ್‌ ಕುಮಾರ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.