
ಹುಬ್ಬಳ್ಳಿ: ಮೊದಲ ಬಾರಿಗೆ ರಣಜಿ ಟ್ರೋಫಿ ಗೆದ್ದ ಜಮ್ಮು ಕಾಶ್ಮೀರ ತಂಡದ ಆಟಗಾರರು ಇಲ್ಲಿನ ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಶನಿವಾರ ಡೋಲ್ ತಾಷಾ ಸದ್ದಿಗೆ ಕುಣಿದು ಸಂಭ್ರಮಿಸಿದರು. ಪಂದ್ಯ ಡ್ರಾ ಆಗುತ್ತಿದ್ದಂತೆ ಮೈದಾನಕ್ಕೆ ನುಗ್ಗಿದ ಆಟಗಾರರು, ಅಜೇಯ ಆಟವಾಡಿದ ಕಮ್ರನ್ ಇಕ್ಬಾಲ್ ಹಾಗೂ ಸಾಹಿಲ್ ಲೋತ್ರಾ ಅವರನ್ನು ಅಭಿನಂದಿಸಿದರು.
ಫೈನಲ್ ಪಂದ್ಯದ ಐದನೇ ದಿನದಾಟ ವೀಕ್ಷಣೆಗೆ ಜಮ್ಮು ಕಾಶ್ಮೀರದಿಂದಲೂ ಅಭಿಮಾನಿಗಳು, ಆಟಗಾರರ ಸ್ನೇಹಿತರು, ಸಂಬಂಧಿಕರು ಬಂದಿದ್ದರು. ‘ನಮ್ಮ ರಾಜ್ಯದ ತಂಡ ಟ್ರೋಫಿ ಗೆಲ್ಲುವುದು ಶುಕ್ರವಾರವೇ ಖಚಿತವಾಗಿತ್ತು. ಹೀಗಾಗಿ ಶನಿವಾರ ಬೆಳಿಗ್ಗೆಯೇ ಬಂದು ಅಂತಿಮ ದಿನದಾಟ ವೀಕ್ಷಿಸಿದೆವು’ ಎಂದು ಜಮ್ಮು ಕಾಶ್ಮೀರದ ಅಭಿಮಾನಿಗಳು ಹೇಳಿದರು.
ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಮಿಥುನ್ ಮನ್ಹಾಸ್ ಅವರನ್ನು ಕೆಲ ಆಟಗಾರರು ಹೆಗಲ ಮೇಲೆ ಹೊತ್ತು ಕುಣಿದಾಡಿದರು. ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಪಂದ್ಯ ವೀಕ್ಷಿಸಿದರು. ಸಂಭ್ರಮಾಚರಣೆಯಲ್ಲಿ ಭಾಗಿಯಾದರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಂಸದ ಜಗದೀಶ ಶೆಟ್ಟರ್, ಶಾಸಕ ಮಹೇಶ ಟೆಂಗಿನಕಾಯಿ ಪಂದ್ಯ ವೀಕ್ಷಿಸಿದರು.
ಪಂದ್ಯ ಯಶಸ್ವಿ: ಪಂದ್ಯ ನಿರ್ವಹಣೆ ಮತ್ತು ಯಶಸ್ಸಿಗೆ ಕೆಎಸ್‌ಸಿಎ ವ್ಯವಸ್ಥಾಪನಾ ಸಮಿತಿ ಸದಸ್ಯ ಅವಿನಾಶ ವೈದ್ಯ ಮತ್ತು ಕೆಎಸ್‌ಸಿಎ ಹುಬ್ಬಳ್ಳಿಯ ಸಿಬ್ಬಂದಿ, ಎಲ್ಲ ಕ್ಲಬ್‌ಗಳ ಆಟಗಾರರು, ಸ್ವಯಂಸೇವಕರು ಶ್ರಮಿಸಿದರು. 20 ಸಾವಿರ ಪ್ರೇಕ್ಷಕರು ಪಂದ್ಯ ವೀಕ್ಷಿಸಿದರು ಎಂದು ಕೆಎಸ್‌ಸಿಎ ಧಾರವಾಡ ವಲಯದ ನಿಮಂತ್ರಕ ವೀರಣ್ಣ ಸವಡಿ ತಿಳಿಸಿದರು.
ಪ್ರತಿ ದಿನ 40ಕ್ಕೂ ಹೆಚ್ಚು ಮಕ್ಕಳು ಬಾಲ್ ಬಾಯ್, ಬಾಲ್ ಕಲೆಕ್ಟರ್‌ಗಳಾಗಿ ಕಾರ್ಯನಿರ್ವಹಿಸಿದ್ದಾರೆ. ಅವರೆಲ್ಲ ಭವಿಷ್ಯದ ತಾರೆಯರು. ಈ ಪಂದ್ಯದಿಂದ ಯುವ ಕ್ರಿಕೆಟಿಗರಿಗೆ ಪ್ರೇರಣೆ ಸಿಗಲಿದೆ ಎಂದರು.
Quote - ಹುಬ್ಬಳ್ಳಿಯಂತಹ ಎರಡನೇ ಹಂತದ ನಗರದಲ್ಲಿ ಅತ್ಯಂತ ಕಡಿಮೆ ಅವಧಿಯಲ್ಲಿ ರಣಜಿ ಟ್ರೋಫಿಯ ಫೈನಲ್ ಪಂದ್ಯವನ್ನು ಆಯೋಜಿಸಲು ಅವಕಾಶ ಸಿಕ್ಕಿತು. ಯಶಸ್ವಿಯಾಗಿ ಪಂದ್ಯ ನಡೆದಿದ್ದಕ್ಕೆ ಖುಷಿಯಾಗಿದೆ ವೀರರಣ ಸವಡಿ ನಿಮಂತ್ರಕ ಕೆಎಸ್‌ಸಿಎ ಧಾರವಾಡ ವಲಯ
Cut-off box - ‘ಹಲವು ದಶಕಗಳ ಕನಸು ನನಸು’ ‘ಮೊದಲ ಬಾರಿ ರಣಜಿ ಟ್ರೋಫಿ ಜಯಿಸಿರುವುದು ತಂಡಕ್ಕೆ ಮತ್ತು ಜಮ್ಮು –ಕಾಶ್ಮೀರಕ್ಕೆ ಹೆಮ್ಮೆಯ ಕ್ಷಣ. ಈ ಗೆಲುವಿನೊಂದಿಗೆ ಹಲವು ದಶಕಗಳ ಕನಸು ನನಸಾಗಿದೆ’ ಎಂದು ಜಮ್ಮು ಮತ್ತು ಕಾಶ್ಮೀರ ತಂಡದ ಕೋಚ್ ಅಜಯ್ ಶರ್ಮಾ ಹೇಳಿದರು. ‘ಕಳೆದ ಋತುವಿನಲ್ಲಿ ಕ್ವಾರ್ಟರ್ ಫೈನಲ್‌ನಲ್ಲಿ ಕೇರಳ ವಿರುದ್ಧ ಒಂದು ರನ್‌ನಿಂದ ನಮ್ಮ ತಂಡ ಸೋಲನುಭವಿಸಿತ್ತು. ಈ ಗೆಲುವು ಜಮ್ಮು–ಕಾಶ್ಮೀರದ ಹಲವು ಯುವ ಕ್ರಿಕೆಟಿಗರಿಗೆ ಪ್ರೇರಣೆಯಾಗಲಿದೆ’ ಎಂದು ಅವರು ಶನಿವಾರ ಸುದ್ದಿಗಾರರಿಗೆ ತಿಳಿಸಿದರು. ‘ಮುಂಬೈ ದೆಹಲಿ ರಾಜಸ್ಥಾನ ಪಶ್ಚಿಮ ಬಂಗಾಳ ಹೈದರಾಬಾದ್ ಮಧ್ಯಪ್ರದೇಶ ತಂಡಗಳಲ್ಲಿ ಸಾಕಷ್ಟು ಅನುಭವಿ ಆಟಗಾರರಿದ್ದಾರೆ. ಅಂತಹ ತಂಡಗಳ ವಿರುದ್ಧ ಆಡುವುದು ಸುಲಭವಲ್ಲ. ನಮ್ಮ ತಂಡದಲ್ಲಿ ಹೀರೋಗಳು ಇರಲಿಲ್ಲ. ಆದರೆ ಈ ಗೆಲುವಿನೊಂದಿಗೆ ಎಲ್ಲರೂ ಹಿರೋಗಳಾಗಿದ್ದಾರೆ’ ಎಂದು ಹೇಳಿದರು. ‘ಈಗ ಬಿಸಿಸಿಐ ಅಧ್ಯಕ್ಷರಾಗಿರುವ ಮಿಥುನ್ ಮನ್ಹಾಸ್ ಅವರು ಜಮ್ಮು–ಕಾಶ್ಮೀರ ಕ್ರಿಕೆಟ್ ಸಂಸ್ಥೆ (ಜೆಕೆಸಿಎ) ಆಡಳಿತ ಸುಧಾರಣೆಗಾಗಿ ನೇಮಕ ಮಾಡಲಾಗಿದ್ದ ಅಡ್‌ಹಾಕ್ ಸಮಿತಿಯ ನಿರ್ದೇಶಕರಾಗಿದ್ದರು. ಟ್ರೋಫಿ ಗೆಲ್ಲುವುದು ಅವರ ಕನಸಾಗಿತ್ತು. ಅವರು ಜೆಕೆಸಿಎಗೆ ಎಲ್ಲ ಮೂಲಸೌಕರ್ಯ ಕಲ್ಪಿಸಿದರು. ಅವರು ನಮ್ಮ ತಂಡದ ಮೇಲೆ ನಂಬಿಕೆ ಇಟ್ಟಿದ್ದರು. ಎಲ್ಲರೂ ಒಟ್ಟಾಗಿ ಕೆಲಸ ಮಾಡಿದ್ದರಿಂದ ಈಗ ಪ್ರತಿಫಲ ಸಿಕ್ಕಿದೆ’ ಎಂದು ಹೇಳಿದರು. ‘ನಾನು ಆಟಗಾರನಾಗಿದ್ದಾಗ ನಮ್ಮ ತಂಡ ರಣಜಿ ಟ್ರೋಫಿ ಗೆದ್ದಿತ್ತು. ಆದರೆ ಕೋಚ್ ಆಗಿ ಇದು ನನಗೆ ಮೊದಲ ಟ್ರೋಫಿ. ಇದು ಒಂದರ್ಥದಲ್ಲಿ ನನಗೆ ಪುನರ್ಜನ್ಮ ನೀಡಿದೆ’ ಎಂದರು.
Cut-off box - null
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.