ADVERTISEMENT

‘ವಿದ್ಯಾಕಾಶಿ’ಯಲ್ಲಿ ಜಪಾನ್‌ ಪೇರಲ

ವಿಶೇಷ ತಳಿ ಬೆಳೆದು ಉತ್ತಮ ಇಳುವರಿ ಪಡೆಯುತ್ತಿರುವ ನಿವೃತ್ತ ಬ್ಯಾಂಕ್‌ ವ್ಯವಸ್ಥಾಪಕ

ಗೋವರ್ಧನ ಎಸ್‌.ಎನ್‌.
Published 16 ಜನವರಿ 2026, 5:58 IST
Last Updated 16 ಜನವರಿ 2026, 5:58 IST
ಧಾರವಾಡ ತಾಲ್ಲೂಕಿನ ಸಲಕಿನಕೊಪ್ಪದ ತೋಟದಲ್ಲಿ ‘ಜಪಾನ್‌ ರೆಡ್‌ ಡೈಮೆಂಡ್‌’ ಪೇರಲದೊಂದಿಗೆ ಸಿ.ಕೆ. ರಾಜೂರ 
ಧಾರವಾಡ ತಾಲ್ಲೂಕಿನ ಸಲಕಿನಕೊಪ್ಪದ ತೋಟದಲ್ಲಿ ‘ಜಪಾನ್‌ ರೆಡ್‌ ಡೈಮೆಂಡ್‌’ ಪೇರಲದೊಂದಿಗೆ ಸಿ.ಕೆ. ರಾಜೂರ    

ಹುಬ್ಬಳ್ಳಿ: ನಿವೃತ್ತಿ ನಂತರ ವಿಶ್ರಾಂತಿಯಲ್ಲೇ ಕಾಲಕಳೆಯುವುದು ಬಹುತೇಕರ ಯೋಜನೆ. ಆದರೆ, ಇಲ್ಲೊಬ್ಬರು ಅಪರೂಪದ ‘ಜಪಾನ್‌ ರೆಡ್‌ ಡೈಮೆಂಡ್‌’ ಪೇರಲ ಬೆಳೆದು, ವೈಜ್ಞಾನಿಕ ವಿಧಾನದ ಕೃಷಿಯ ಹೊಸ ಸಾಧ್ಯತೆಯನ್ನು ಪರಿಚಯಿಸಿದ್ದಾರೆ.

ನಿವೃತ್ತ ಬ್ಯಾಂಕ್‌ ವ್ಯವಸ್ಥಾಪಕ ಸಿ.ಕೆ.ರಾಜೂರ ಅವರು ಧಾರವಾಡ ತಾಲ್ಲೂಕಿನ ಸಲಕಿನಕೊಪ್ಪದ ಒಂದೂವರೆ ಎಕರೆ ಭೂಮಿಯಲ್ಲಿ ವಿಶೇಷ ತಳಿಯ ಪೇರಲ ಬೆಳೆದಿದ್ದಾರೆ. ಎರಡು ವರ್ಷದಲ್ಲಿ ಸುಮಾರು ಒಂದೂವರೆ ಟನ್‌ಗಳಷ್ಟು ಇಳುವರಿ ದೊರೆತಿದ್ದು, ಪ್ರಸಕ್ತ ವರ್ಷದ ಫೆಬ್ರುವರಿ–ಮಾರ್ಚ್‌ನಲ್ಲಿ ಸುಮಾರು 10 ಟನ್‌ ಇಳುವರಿ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.

ವಿಶೇಷ ತಳಿಯ ಈ ಪೇರಲವೊಂದು 300–400 ಗ್ರಾಂ ತೂಕವಿರುತ್ತದೆ. ನವದೆಹಲಿ, ಮುಂಬೈನಲ್ಲಿ ಕೆ.ಜಿ.ಗೆ ₹250–₹300 ದರವಿದೆ. ಆದರೆ, ರಾಜೂರ ಅವರು ಸ್ಥಳೀಯ ಮಾರುಕಟ್ಟೆಗೆ ಕೆ.ಜಿ ₹120ಕ್ಕೆ ನೀಡುತ್ತಿದ್ದಾರೆ. ತಮ್ಮ ತೋಟಕ್ಕೆ ಬರುವ ಕೃಷಿ ಆಸಕ್ತರು, ಕೃಷಿಕರು, ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶವನ್ನೂ ಮಾಡುತ್ತಿದ್ದಾರೆ.

ADVERTISEMENT

‘ನಮ್ಮದು ರೈತ ಕುಟುಂಬ. ನಾನು ಓದಿದ್ದು ಬಿಎಸ್‌ಸಿ ಅಗ್ರಿ. ಹೀಗಾಗಿ, ಕೃಷಿಯತ್ತ ವಿಶೇಷ ಆಸಕ್ತಿ ಮೊದಲಿನಿಂದಲೂ ಇದೆ. ಬ್ಯಾಂಕ್‌ ವ್ಯವಸ್ಥಾಪಕನಾಗಿದ್ದಾಗಲೂ ಹೆಚ್ಚು ರೈತರ ಒಡನಾಟವಿತ್ತು. ಈ ಸಂಪರ್ಕ ಹಾಗೂ ತಂತ್ರಜ್ಞಾನದ ಅರಿವು, ಹೊಸ ಮಾದರಿಯ ಕೃಷಿಗೆ ಪ್ರೇರೇಪಿಸಿತು. ಸಾಂಪ್ರದಾಯಿಕ ಬೆಳೆಗಳತ್ತ ಲಕ್ಷ್ಯ ಹರಿಸದೆ, ವಿಶೇಷ ಬೆಳೆಗಳನ್ನು ಬೆಳೆಯುವಂತಾಯಿತು’ ಎನ್ನುತ್ತಾರೆ ಸಿ.ಕೆ.ರಾಜೂರ.

‘ಪೇರಲ ಹೆಚ್ಚು ಸ್ವಾದ, ಪೌಷ್ಟಿಕಾಂಶವುಳ್ಳ ಹಣ್ಣು. ಹೆಚ್ಚು ನೀರಿದ್ದರೂ, ಕಡಿಮೆ ನೀರಿದ್ದರೂ ತಾಳಿಕೊಳ್ಳುವ ಶಕ್ತಿ ಪೇರಲ ಗಿಡಕ್ಕಿರುತ್ತದೆ. ಇದರಲ್ಲಿ ವಿಶೇಷ ತಳಿಯಾದ ಜಪಾನ್‌ ರೆಡ್‌ ಡೈಮೆಂಡ್‌ನ 1,000 ಸಸಿಗಳನ್ನು ಗುಜರಾತ್‌ನಿಂದ ತರಿಸಿ, ಇಲ್ಲಿ ಬೆಳೆಸಿದೆ. 15 ತಿಂಗಳ ನಂತರ ಉತ್ತಮ ಇಳುವರಿ ಸಿಗುತ್ತಿದೆ’ ಎಂದರು.

‘ಇಳಿಜಾರು ಮಾದರಿಯಲ್ಲಿ (ಹೈಲೆಂಡ್‌ ಸಿಟಿ ಪ್ಲಾಂಟೇಷನ್‌) ಗಿಡ ಬೆಳೆಸಿರುವೆ. ನೀರನ್ನು ಪೋಲು ಮಾಡಬಾರದೆಂಬ ಉದ್ದೇಶದಿಂದ ಹನಿ ನೀರಾವರಿ ಪದ್ಧತಿ ಅನುಸರಿಸುತ್ತಿರುವೆ. ಅದರ ಮೂಲಕವೇ ಗೊಬ್ಬರ ಪೂರೈಸುವೆ. ಬೆಳೆಯ ಬೆಳವಣಿಗೆಗೆ ಅಗತ್ಯ ಪೋಷಕಾಂಶ ಬೇಕಿರುವುದರಿಂದ ಸಾವಯವ ಗೊಬ್ಬರದೊಂದಿಗೆ ರಾಸಾಯನಿಕ ಗೊಬ್ಬರವನ್ನೂ ಬಳಸುವೆ’ ಎಂದು ವಿವರಿಸಿದರು. 

‘ಜಪಾನ್‌ ರೆಡ್‌ ಡೈಮೆಂಡ್‌’ ಪೇರಲ ಹಣ್ಣು (ಕಟೌಟ್‌ ಮಾಡಿಸಬಹುದು)
ಜಪಾನ್‌ ರೆಡ್‌ ಡೈಮೆಂಡ್‌ ಪೇರಲವು ಉತ್ತಮ ಸಿಹಿ ಹೇರಳವಾದ ಪೌಷ್ಟಿಕಾಂಶ ಹೊಂದಿದೆ. ಬಣ್ಣ ಹೊಳಪು ರುಚಿ ಹೆಚ್ಚು ಕಾಲ ಬಾಳಿಕೆಗೂ ಹೆಸರಾಗಿದೆ
ಸಿ.ಕೆ.ರಾಜೂರ ಕೃಷಿಕ

ತರಹೇವಾರಿ ಬೆಳೆ; ಯೋಜನಾಬದ್ಧ ವಿಧಾನ

ಸಿ.ಕೆ.ರಾಜೂರ ಅವರ ನಾಲ್ಕು ಎಕರೆ ತೋಟದಲ್ಲಿ ಪೇರಲದೊಂದಿಗೆ 10000 ಗುಲಾಬಿ ಗಿಡ 200 ಸಾಗುವಾನಿ 80 ಮಾವು 70 ತೆಂಗು ನೇರಳೆ ಬಾಳೆ ಹಲಸು ಚೆರಿ ಸೀತಾಫಲ ಬೆಳೆಯೂ ಇದೆ. 45x45 ಉದ್ದಗಲ 20 ಆಳದ ಕೃಷಿಹೊಂಡವಿದ್ದು ಮೀನುಗಳ ಸಾಕಣೆ ಮಾಡಿದ್ದಾರೆ. ಮಳೆ ನೀರಿನ ಸಂಗ್ರಹ ವ್ಯವಸ್ಥೆ ಮಾಡಿಕೊಂಡಿದ್ದು ಬಹುಪಾಲು ತಿಂಗಳು ಇದೇ ನೀರನ್ನು ಕೃಷಿಗೆ ಬಳಸುತ್ತಾರೆ. ಎರಡು ಬೋರ್‌ಗಳಿದ್ದರೂ ಅವು ಬಳಕೆಯಾಗುವುದು ಬೇಸಿಗೆಯಲ್ಲಿ ಮಾತ್ರ. ಯೋಜನಾಬದ್ಧ ವಿಧಾನಗಳ ಪಾಲನೆಯೇ ಅವರ ಕೃಷಿ ಸಾಧನೆಯ ಗುಟ್ಟು ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.