ADVERTISEMENT

ಪಶ್ಚಿಮ ಪದವೀಧರ ಕ್ಷೇತ್ರ: ಜೆಡಿಎಸ್‌ ಅಭ್ಯರ್ಥಿ ಹೆಸರು ಶಿಫಾರಸ್ಸು

ಧಾರವಾಡ ಜಿಲ್ಲಾ ಜೆಡಿಎಸ್‌ ಮುಖಂಡರ ಸಭೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2026, 5:46 IST
Last Updated 17 ಜನವರಿ 2026, 5:46 IST
ಹುಬ್ಬಳ್ಳಿಯ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಜೆಡಿಎಸ್‌ ಮುಖಂಡರು ಮತ್ತು ಕಾರ್ಯಕರ್ತರು ಸಭೆ ನಡೆಸಿದರು
ಹುಬ್ಬಳ್ಳಿಯ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಜೆಡಿಎಸ್‌ ಮುಖಂಡರು ಮತ್ತು ಕಾರ್ಯಕರ್ತರು ಸಭೆ ನಡೆಸಿದರು   

ಹುಬ್ಬಳ್ಳಿ: ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಲು ಶಿವಶಂಕರ ಕಲ್ಲೂರ್‌ ಅಥವಾ ವೆಂಕನಗೌಡ್ರ ಗೋವಿಂದಗೌಡರ ಅವರಿಗೆ ಟಿಕೆಟ್‌ ನೀಡುವ ಕುರಿತು ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಹಾಗೂ ಧಾರವಾಡ ಜಿಲ್ಲಾ ಜೆಡಿಎಸ್‌ ಘಟಕ ಜಂಟಿ ನಿರ್ಣಯ ಕೈಗೊಂಡಿವೆ.

ಶುಕ್ರವಾರ ನಗರದ ಪ್ರವಾಸಿ ಮಂದಿರದಲ್ಲಿ ಮಹಾನಗರ ಹಾಗೂ ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರುಈ ಕುರಿತು ಸಭೆ ನಡೆಸಿದರು. 

ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಪಕ್ಷ ಸಂಘಟನೆ ಮತ್ತು ಧಾರವಾಡ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪಕ್ಷದಿಂದ ಬಿಎಲ್‌ಎ ನೇಮಕ ಮಾಡುವ ಕುರಿತು ಸಹ ನಿರ್ಣಯ ಕೈಗೊಂಡು, ರಾಜ್ಯ ಸಮಿತಿಗೆ ಕಳುಹಿಸಲು ನಿರ್ಧರಿಸಿದರು.

ADVERTISEMENT

ಧಾರವಾಡ, ಉತ್ತರ ಕನ್ನಡ, ಹಾವೇರಿ ಮತ್ತು ಗದಗ ವ್ಯಾಪ್ತಿಯ ಪಶ್ಚಿಮ ಪದವೀಧರ ಕ್ಷೇತ್ರವನ್ನು ಜೆಡಿಎಸ್‌ ಅಭ್ಯರ್ಥಿಗೆ ಬಿಟ್ಟುಕೊಡಬೇಕು. ಈ ಭಾಗದಲ್ಲಿ ಪ್ರಾದೇಶಿಕ ಪಕ್ಷ ಗಟ್ಟಿಯಾಗಿ ನೆಲೆಯೂರಬೇಕೆಂದರೆ, ಅಸ್ತಿತ್ವ ಕಾಪಾಡಿಕೊಳ್ಳಲು ನಮ್ಮದೇ ಪಕ್ಷದ ಅಭ್ಯರ್ಥಿಯನ್ನು ಚುನಾವಣೆಯಲ್ಲಿ ಕಣಕ್ಕಿಳಿಸಬೇಕು. ಈಗಾಗಲೇ ಈ ಭಾಗದಲ್ಲಿ ಜೆಡಿಎಸ್‌ ಅಸ್ತಿತ್ವ ಕ್ಷೀಣಿಸುತ್ತಿರುವುದು ಎಲ್ಲರ ಗಮನಕ್ಕೂ ಬಂದಿದೆ. ಶಾಸಕಾಂಗದಲ್ಲಿ ಪಕ್ಷದ ಪ್ರತಿನಿಧಿಯಿದ್ದಾಗ ಮಾತ್ರ ವರ್ಚಸ್ಸು ಹೆಚ್ಚಿಸಿಕೊಳ್ಳಲು ಸಾಧ್ಯ ಎನ್ನುವ ಅಭಿಪ್ರಾಯಗಳು ಕಾರ್ಯಕರ್ತರಿಂದ ಕೇಳಿ ಬಂದವು.

ವಿಧಾನಸಭಾ ಕ್ಷೇತ್ರದಲ್ಲಿನ ಪಕ್ಷದ ಅಧ್ಯಕ್ಷರು ತಕ್ಷಣ ಬಿಎಲ್‌ಎ ಅವರನ್ನು ನೇಮಕ ಮಾಡಿದರೆ, ಮತದಾರರ ಪಟ್ಟಿ ವಿಶೇಷ ಪರೀಕ್ಷಣೆ ಸಮೀಕ್ಷೆಗೆ ಅನುಕೂಲವಾಗುತ್ತವೆ. ಪಕ್ಷದ ವತಿಯಿಂದ ನೇಮಕವಾಗುವ ಬಿಎಲ್‌ಎ ಅಭ್ಯರ್ಥಿಗೆ ಜನರ ಪರಿಚಯ ಹಾಗೂ ರಾಜಕೀಯ ವಸ್ತುಸ್ಥಿತಿ ತಿಳಿದು ಸಂಘಟನೆಗೆ ಪ್ರಯೋಜನವಾಗಲಿದೆ ಎಂದು ಕಾರ್ಯಕರ್ತರು ತಿಳಿಸಿದರು.

ಕಾಂಗ್ರೆಸ್‌ ಮುಖಂಡರಾದ ಸಾಧಿಕ್‌  ಧಾರವಾಡ, ನಾಗರಾಜ ರಾಯಣ್ಣವರ, ಶ್ರೀಕಾಂತ ಪಾಟೀಲ ಅವರು ಇದೇ ಸಂದರ್ಭದಲ್ಲಿ ಜೆಡಿಎಸ್ ಸೇರ್ಪಡೆಯಾದರು.

ಸಭೆಯ ಅಧ್ಯಕ್ಷತೆಯನ್ನು ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ಗುರುರಾಜ ಹುಣಸಿಮರದ ಹಾಗೂ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಬಿ. ಗಂಗಾಧರಮಠ ವಹಿಸಿದ್ದರು.

ಮುಖಂಡರಾದ ನವೀನಕುಮಾರ, ಶಿವಶಂಕರ ಕಲ್ಲೂರ್, ಜಿ.ಎನ್. ತೋಟದ, ಪ್ರಕಾಶ ಅಂಗಡಿ, ಪೂರ್ಣಿಮಾ ಸವದತ್ತಿ, ರೇಖಾ ನಾಯಕರ್, ಮಾರುತಿ ಹಿಂಡಸಗೇರಿ, ಸಿದ್ಧಲಿಂಗೇಶ್ವರಗೌಡ, ಬಸವರಾಜ ಧನಿಗೊಂಡ, ಬೀಮರಾಯ ಗುಡೆನಕಟ್ಟಿ, ಶಂಕರಗೌಡ ದೊಡ್ಡಮನಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.