ADVERTISEMENT

ಹುಬ್ಬಳ್ಳಿ: ಕವಿಗೆ ಭಾವತೀವ್ರತೆ ಗುಣ ಅಗತ್ಯ: ಬಸು ಬೇವಿನಗಿಡದ

‘ಜೇನ್ಗೊಡ’ ಕವನ ಸಂಕಲನ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 28 ಜನವರಿ 2023, 6:30 IST
Last Updated 28 ಜನವರಿ 2023, 6:30 IST
ಹುಬ್ಬಳ್ಳಿಯ ಪತ್ರಕರ್ತರ ಭವನದಲ್ಲಿ ವೆಂಕಟೇಶ ಮರೇಗುದ್ದಿ ಅವರ ‘ಜೇನ್ಗೊಡ’ ಕವನ ಸಂಕಲನವನ್ನು ಗಣ್ಯರು ಇತ್ತೀಚೆಗೆ ಬಿಡುಗಡೆ ಮಾಡಿದರು
ಹುಬ್ಬಳ್ಳಿಯ ಪತ್ರಕರ್ತರ ಭವನದಲ್ಲಿ ವೆಂಕಟೇಶ ಮರೇಗುದ್ದಿ ಅವರ ‘ಜೇನ್ಗೊಡ’ ಕವನ ಸಂಕಲನವನ್ನು ಗಣ್ಯರು ಇತ್ತೀಚೆಗೆ ಬಿಡುಗಡೆ ಮಾಡಿದರು   

ಹುಬ್ಬಳ್ಳಿ: ‘ಕವಿಗಳು ಕಾವ್ಯದ ಗತಿ ಕಂಡುಕೊಳ್ಳಬೇಕು. ಉತ್ತಮ ಕಾವ್ಯ ರಚನೆಯಾಗಬೇಕಾದರೆ ಕವಿಯಲ್ಲಿ ಭಾವತೀವ್ರತೆ ಅಗತ್ಯ’ ಎಂದು ಸಾಹಿತಿ ಬಸು ಬೇವಿನಗಿಡದ ಅಭಿಪ್ರಾಯಪಟ್ಟರು.

ಕಸಾಪ ಹುಬ್ಬಳ್ಳಿ ನಗರ ತಾಲ್ಲೂಕು ಘಟಕದಿಂದ ಪತ್ರಕರ್ತರ ಭವನದಲ್ಲಿ ಗುರುವಾರ ಏರ್ಪಡಿಸಿದ್ದ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ವೆಂಕಟೇಶ ಮರೇಗುದ್ದಿ ಅವರ ‘ಜೇನ್ಗೊಡ’ ಕವನ ಸಂಕಲನ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಸಾಂಪ್ರದಾಯಿಕ ಸರಕುಗಳಿಗೆ ಮೊರೆಹೋಗದೇ ತನ್ನ ಕೋಮಲ, ಸಹೃದಯ, ಭಾವನಾತ್ಮಕ ಅನುಭವಗಳನ್ನೇ ಕವಿತೆಗಳಲ್ಲಿ ಹಿಡಿದಿಟ್ಟು ತಾವೊಬ್ಬ ನವೋದಯದ ಕವಿ ಎಂದು ನಿರೂಪಿಸುವಲ್ಲಿ ಮರೇಗುದ್ದಿ ಅವರು ಜೇನ್ಗೊಡ ಸಂಕಲನದ ಮೂಲಕ ಯಶಸ್ವಿಯಾಗಿದ್ದಾರೆ’ ಎಂದರು.

ADVERTISEMENT

ಕೃತಿ ಪರಿಚಯಿಸಿದ ಪತ್ರಕರ್ತ ಸುಶೀಲೇಂದ್ರ ಕುಂದರಗಿ, ‘ಇರವಿನ ಅರಿವನ್ನು ಮರೆತಾಗ ಸಂವೇದನೆಯ ಅಭಿವ್ಯಕ್ತಿ ಕಾವ್ಯಕ್ಕೆ ಪ್ರೇರಣೆಯಾಗುತ್ತದೆ. ಕಾವ್ಯ ರಚಿಸುವುದಲ್ಲ, ಕಟ್ಟುವುದೂ ಅಲ್ಲ, ಅದು ಹುಟ್ಟುವುದೂ ಇಲ್ಲ, ಅದು ಆವಿರ್ಭವಿಸುತ್ತದೆ. ಪದಗಳ ಜೋಡಣೆ ಕಾವ್ಯವಲ್ಲ. ಅದಕ್ಕೆ ಋಷಿತ್ವ ಬೇಕು. ಅದನ್ನು ಜೇನ್ಗೊಡ ಸಂಕಲನದ ಕವಿತೆಗಳಲ್ಲಿ ಆಗಾಗ್ಗೆ ಕಾಣಬಹುದು’ ಎಂದರು.

ಮುಖ್ಯಅತಿಥಿಗಳಾಗಿದ್ದ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಲಿಂಗರಾಜ ಅಂಗಡಿ, ಪತ್ರಕರ್ತ ಗಣಪತಿ ಗಂಗೊಳ್ಳಿ, ರೂಪಾ ಜೋಶಿ ಹಾಗೂ ರಂಗನಿರ್ದೇಶಕ ಗದಗಯ್ಯ ಹಿರೇಮಠ, ಕೃತಿಕಾರ ವೆಂಕಟೇಶ ಮರೇಗುದ್ದಿ ಮಾತನಾಡಿದರು.

ಗುರುಸಿದ್ದಪ್ಪ ಬಡಿಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿವೃತ್ತ ಪ್ರಾಧ್ಯಾಪಕ ಕೆ.ಎಸ್.ಕೌಜಲಗಿ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.