
ಹುಬ್ಬಳ್ಳಿ: ‘ಎರಡನೇ ಹಂತದ ನಗರಗಳತ್ತ ಉದ್ಯಮಗಳು ಮುಖ ಮಾಡುತ್ತಿದ್ದು, ಭವಿಷ್ಯದಲ್ಲಿ ಹುಬ್ಬಳ್ಳಿ ದೊಡ್ಡ ಕೈಗಾರಿಕಾ ನಗರಿಯಾಗಿ ಹೊರಹೊಮ್ಮಲಿದೆ’ ಎಂದು ನಿರಾಣಿ ಗ್ರೂಪ್ನ ಸಂಗಮೇಶ ನಿರಾಣಿ ಹೇಳಿದರು.
ಇಲ್ಲಿನ ಅಮರಗೋಳ ಎಪಿಎಂಸಿ ಆವರಣದಲ್ಲಿನ ಹುಬ್ಬಳ್ಳಿ–ಧಾರವಾಡ ವಿವಿಧೋದ್ದೇಶ ವಸ್ತುಪ್ರದರ್ಶನ ಕೇಂದ್ರದಲ್ಲಿ ಕರ್ನಾಟಕ ವಾಲ್ವ್ ತಯಾರಕರ ಸಂಘದ ವತಿಯಿಂದ ಬುಧವಾರ ಆಯೋಜಿಸಿದ್ದ ಮೂರು ದಿನಗಳ ‘ವಾಲ್ಸ್ ಎಕ್ಸ್ –2026’ ವಾಲ್ವ್ ಮತ್ತು ಪಂಪ್ ಪ್ರದರ್ಶನದಲ್ಲಿ ಅವರು ಮಾತನಾಡಿದರು.
‘ಇಲ್ಲಿಯೇ ಓದಿ ವಿಶ್ವದ ಶ್ರೇಷ್ಠ ಎಂಜಿನಿಯರ್ ಎನಿಸಿಕೊಂಡವರು ಹುಬ್ಬಳ್ಳಿಯಲ್ಲೇ ಉಳಿದಿದ್ದರೆ ಇದು ಐಟಿ ಸಿಟಿ ಆಗುತ್ತಿತ್ತು. ವಾಲ್ವ್ ಹಾಗೂ ಪಂಪ್ ಉತ್ಪಾದನೆಗೆ ನಗರ ಪ್ರಖ್ಯಾತಿ ಪಡೆದಿದ್ದು, ಯುವಜನರು ಸ್ವಂತ ಉದ್ಯಮ ಆರಂಭಿಸಿ ಯಶಸ್ಸು ಸಾಧಿಸಬೇಕು’ ಎಂದು ಸಲಹೆ ನೀಡಿದರು.
ಶಿವಮೊಗ್ಗದ ಶಾಂತಲಾ ಗ್ರೂಪ್ನ ರುದ್ರೇಗೌಡ ಮಾತನಾಡಿ, ‘ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಇಂತಹ ವಸ್ತುಪ್ರದರ್ಶನಗಳು ನಿರಂತರವಾಗಿ ನಡೆಯುತ್ತವೆ. ಇಲ್ಲಿ ಪರಸ್ಪರ ಸಂವಾದ, ಉಪನ್ಯಾಸಗಳ ಮೂಲಕ ಗೊಂದಲ ಪರಿಹರಿಸಿಕೊಂಡು, ಉದ್ಯಮದಲ್ಲಿ ಸಾಧನೆ ಮಾಡಬಹುದು’ ಎಂದು ಅಭಿಪ್ರಾಯಪಟ್ಟರು.
ಉದ್ಯಮಿ ವಿಜಯ ಸಂಕೇಶ್ವರ ಮಾತನಾಡಿ, ‘ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ವಸ್ತುಗಳನ್ನು ತಯಾರಿಸಬೇಕು. ಈ ಮೂಲಕ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಿಕೊಳ್ಳಬೇಕು. ವಿಶ್ವ ಮಟ್ಟದಲ್ಲಿ ಗುರುತಿಸಿಕೊಳ್ಳಲು ಇದು ರಹದಾರಿ’ ಎಂದರು.
ಮೈಕ್ರೊಫಿನಿಷ್ ವಾಲ್ವ್ ಕಂಪನಿಯ ಸಂಸ್ಥಾಪಕ ತಿಲಕ ವಿಕಂಶಿ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಶಿವಾನಂದ ಆವಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ ಇಲಾಖೆ ಜಂಟಿ ನಿರ್ದೇಶಕ ಶಶಿಕುಮಾರ ಎಂ., ಅವರು ಇಲಾಖೆಯ ಸೌಲಭ್ಯಗಳ ಬಗ್ಗೆ ವಿವರಿಸಿದರು.
ಮಹದೇವ ಕರಮರಿ, ನಾಗರಾಜ ದಿವಟೆ, ಅನಿಶ ಅಹ್ಮದ, ಮಹಾಂತೇಶ ದಳವಾಯಿ, ಮಹೇಂದ್ರ ವಿಕಂಶಿ, ವಿ.ಜಿ. ಚಿಲ್ಲಾಳ, ಸಂಗಮೇಶ ದೇಸಾಯಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.