ADVERTISEMENT

ಕಲಘಟಗಿ | ಬಿಡಾಡಿ ದನ, ನಾಯಿಗಳ ಹಾವಳಿ ಹೆಚ್ಚಳ

ಕಲಘಟಗಿ; ಪಟ್ಟಣ ಪಂಚಾಯಿತಿ ನಿರ್ಲಕ್ಷ್ಯಕ್ಕೆ ನಿವಾಸಿಗಳ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2024, 5:22 IST
Last Updated 1 ಆಗಸ್ಟ್ 2024, 5:22 IST
ಕಲಘಟಗಿ ಪಟ್ಟಣದ ಜೋಳದ ಓಣಿಯಲ್ಲಿ ಬಿಡಾಡಿ ದನಗಳು 
ಕಲಘಟಗಿ ಪಟ್ಟಣದ ಜೋಳದ ಓಣಿಯಲ್ಲಿ ಬಿಡಾಡಿ ದನಗಳು    

ಕಲಘಟಗಿ: ಇಲ್ಲಿನ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀದಿ ನಾಯಿಗಳು ಹಾಗೂ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರಿಗೆ ತೊದರೆಯಾಗುತ್ತಿದೆ.

ಪಟ್ಟಣದ ವ್ಯಾಪ್ತಿಯಲ್ಲಿ 17 ವಾರ್ಡ್‌ಗಳಿವೆ. ಗಾಂಧಿನಗರ, ಮಾರುಕಟ್ಟೆ, ಬಸ್ ನಿಲ್ದಾಣ, ಎಪಿಎಂಸಿ, ಆಂಜನೇಯ ವೃತ್ತ, ಜೋಳದ ಓಣಿ, ಯುವ ಶಕ್ತಿ ವೃತ್ತ ಸೇರಿದಂತೆ ಕೆಲವು ಸರ್ಕಾರಿ ಕಚೇರಿ ಆವರಣದಲ್ಲಿ ಬೀದಿ ನಾಯಿಗಳು ಹಾಗೂ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದೆ.

ರಸ್ತೆ ಮಧ್ಯೆ ದನಗಳು ಸದಾ ಮಲಗಿರುತ್ತವೆ. ಹೀಗಾಗಿ ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಇನ್ನೊಂದೆಡೆ ಕೆಲವು ದನಗಳು ಅಂಗಡಿಗಳ ಹೊರಗೆ ಇಟ್ಟಿದ್ದ ವಸ್ತುಗಳನ್ನು ತಿಂದು ಹಾನಿ ಮಾಡುತ್ತಿವೆ.

ADVERTISEMENT

ಬೀದಿ ನಾಯಿಗಳ ಹಾವಳಿ: ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿಯಿಂದಾಗಿ ಜನರು ಸಂಚರಿಸಲು ಭಯ ಪಡುವ ಸ್ಥಿತಿ ನಿರ್ಮಾಣವಾಗಿದೆ.

‘ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಅವುಗಳನ್ನು ಹಿಡಿದು ಬೇರೆಡೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು’ ಎಂದು ಪಟ್ಟಣದ ಮುಖಂಡ ಆಜಾದ್ ಮಲ್ಲಿಕನವರ ಒತ್ತಾಯಿಸಿದರು.

‘ಬಿಡಾಡಿ ದನಗಳ ಹಾವಳಿ ತಡೆಗಟ್ಟುವಂತೆ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಅಧಿಕಾರಿಗಳು ನಿರ್ಲಲ್ಷ್ಯ ವಹಿಸುತ್ತಿದ್ದಾರೆ’ ಎಂಬುದು ಜೋಳದ ಓಣಿ ನಿವಾಸಿ ಮಂಜುನಾಥ ವಾಲಿಶೆಟ್ಟರ ಅವರ ಆರೋಪ.

‘ಬಿಡಾಡಿ ದನಗಳ ಮಾಲೀಕರು ಅವುಗಳನ್ನು ಎಲ್ಲೆಂದರಲ್ಲಿ ಬಿಡಬಾರದು ಎಂದು ಜಾಗೃತಿ ಮೂಡಿಸಲಾಗುತ್ತಿದೆ. ಇನ್ನು ಮುಂದೆ ರಸ್ತೆಗಳಲ್ಲಿ ಬಿಡಾಡಿ ದನಗಳು ಕಂಡು ಬಂದರೆ ಅವುಗಳನ್ನು ಗೋಶಾಲೆಗೆ ಬಿಟ್ಟು ಬರಲಾಗುವುದು ಹಾಗೂ ಬೀದಿ ನಾಯಿಗಳ ಹಾವಳಿ ತಪ್ಪಿಸಲು ಶೀಘ್ರದಲ್ಲೇ ಸಭೆ ಕರೆದು ಕ್ರಮ ಕೈಗೊಳ್ಳಲಾಗುವುದು’ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ವಿ.ಜಿ.ಅಂಗಡಿ ತಿಳಿಸಿದರು.

ಕಲಘಟಗಿಯ ಗಾಂಧಿನಗರದದಲ್ಲಿ ಬೀದಿ ನಾಯಿಗಳ ಹಾವಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.