ADVERTISEMENT

ಸಿದ್ದರಾಮಯ್ಯ ಕಲಘಟಗಿಗೆ ಬಂದರೆ ಕ್ಷೇತ್ರ ಬಿಟ್ಟು ಕೊಡಲು ಸಿದ್ಧ: ಸಂತೋಷ್ ಲಾಡ್

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2022, 8:24 IST
Last Updated 4 ಡಿಸೆಂಬರ್ 2022, 8:24 IST
ಸಂತೋಷ್ ಲಾಡ್
ಸಂತೋಷ್ ಲಾಡ್   

ಹುಬ್ಬಳ್ಳಿ: ‘ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಕಲಘಟಗಿಗೆ ಬರುವುದಾದರೆ, ಕ್ಷೇತ್ರ ಬಿಟ್ಟು ಕೊಡಲು ಸಿದ್ಧನಿದ್ದೇನೆ’ ಎಂದು ಮಾಜಿ ಶಾಸಕ ಹಾಗೂ ಕಲಘಟಗಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಸಂತೋಷ್ ಲಾಡ್ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ದರಾಮಯ್ಯ ಅವರಿಗೆ ಕ್ಷೇತ್ರವೇ ಸಿಗುತ್ತಿಲ್ಲ ಎಂಬುದು ಬಿಜೆಪಿಯವರು ಹೇಳುತ್ತಿದ್ದಾರೆ. ಪಕ್ಷದ ದೊಡ್ಡ ನಾಯಕರಾದ ಅವರನ್ನು ಹಲವು ಕ್ಷೇತ್ರಗಳ ಜನರು ತಮ್ಮಲ್ಲಿ ಬಂದು ಸ್ಪರ್ಧಿಸಿ ಎಂದು ಕರೆಯುತ್ತಿದ್ದಾರೆ. ಅಂತಿಮವಾಗಿ ಎಲ್ಲಿ ಸ್ಪರ್ಧಿಸಬೇಕೆಂಬ ನಿರ್ಧಾರವನ್ನು ಅವರೇ ಕೈಗೊಳ್ಳಲಿದ್ದಾರೆ’ ಎಂದರು.

‘ಬೆಳಗಾವಿ ಗಡಿ ವಿವಾದವು ಸುಪ್ರೀಂ ಕೋರ್ಟ್‌ನಲ್ಲಿದೆ. ಆದರೂ, ಮಹಾರಾಷ್ಟ್ರ ಸಚಿವರು ಅನಗತ್ಯವಾಗಿ ವಿವಾದ ಸೃಷ್ಟಿಸುತ್ತಿದ್ದಾರೆ. ಗಡಿ ವಿಷಯದಲ್ಲಿ ನಾವೆಲ್ಲರೂ ರಾಜ್ಯದ ಪರ ದೃಢವಾಗಿ ನಿಲ್ಲುತ್ತೇವೆ. ಗಡಿಗೆ ಸಂಬಂಧಿಸಿದಂತೆ ಎಲ್ಲರೂ ಒಗ್ಗಟ್ಟು ಪ್ರದರ್ಶಿಸಬೇಕು’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ADVERTISEMENT

‘ಕಲಘಟಗಿಯಲ್ಲಿ ನಾಲ್ಕು ಸಾವಿರ ಮಂದಿಯ ಸಾಮೂಹಿಕ ವಿವಾಹ ಕಾರ್ಯಕ್ರಮದ ಹಿಂದೆ ರಾಜಕೀಯದ ಉದ್ದೇಶವಿಲ್ಲ. ಹಿಂದಿನಿಂದಲೂ ಇಂತಹ ಕಾರ್ಯ ಮಾಡಿಕೊಂಡು ಬಂದಿದ್ದೇನೆ. ಕೋವಿಡ್‌ನಿಂದಾಗಿ ಎರಡು ವರ್ಷ ನಿಂತಿದ್ದರಿಂದ, ಈ ಸಲ ಹೆಚ್ಚು ಮಂದಿ ಸಾಮೂಹಿಕ ವಿವಾಹಕ್ಕೆ ಮುಂದಾಗಿದ್ದೇನೆ. ಎಷ್ಟು ಮಂದಿ ಬರುತ್ತಾರೆ ಎಂದು ಕಾದು ನೋಡಬೇಕು. ಅಂದುಕೊಂಡಂತೆ ನಾಲ್ಕು ಸಾವಿರ ಮಂದಿ ಬಂದರೆ, ವಿಶ್ವ ದಾಖಲೆಯಾಗಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.