ಕಲಘಟಗಿ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ ಮಧ್ಯೆದಲ್ಲಿ ಕಬ್ಬಿಣದ ಸರಳುಗಳು ಹಾಗೂ ತೆಗ್ಗು ಗುಂಡಿಗಳು ಬಿದ್ದು ವಾಹನ ಸವಾರರಿಗೆ ಅಪಾಯ ತಂದೊಡ್ಡಿವೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸದೆ ನಿರ್ಲಕ್ಷ ವಹಿಸಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದು ಹುಬ್ಬಳ್ಳಿ– ಕಾರವಾರ ಸಂಪರ್ಕಿಸುವ ಹೆದ್ದಾರಿಯ ದುಸ್ಥಿತಿಯಾಗಿದೆ. ಕಲಘಟಗಿ ಪಟ್ಟಣದ ಹೊರವಲಯದ ತಡಸ ಕ್ರಾಸ್ ಹತ್ತಿರದ ಸೇತುವೆ ಮೇಲೆ ಕಬ್ಬಿಣದ ಸರಳುಗಳು ಮೇಲಕ್ಕೆದ್ದಿವೆ. ಪ್ರತಿ ವರ್ಷ ಮಳೆಗಾಲ ಬಂತೆಂದರೆ ಸಾಕು ಸೇತುವೆ ಮೇಲೆ ಹಾಕಿದ ಡಾಂಬರ್ ಕಿತ್ತು ಕಬ್ಬಿಣ ಸರಳುಗಳು ಮೇಲಕ್ಕೇಳುವುದು ಸಾಮಾನ್ಯವಾಗಿದೆ. ಈ ಸಮಸ್ಯೆಗೆ ಅಧಿಕಾರಿಗಳು ಶಾಶ್ವತ ಪರಿಹಾರ ಕೈಗೊಳ್ಳುತ್ತಿಲ್ಲ ಎಂದು ವಾಹನ ಸವಾರರು ಹರಿಹಾಯ್ದರು.
ಹಿಂದಿನ ವರ್ಷ ಇದೇ ಸ್ಥಳದಲ್ಲಿ ಕಾರು–ಲಾರಿ ಅಪಘಾತ ಸಂಭವಿಸಿದಾಗ ಪ್ರಾಧಿಕಾರದ ಅಧಿಕಾರಿಗಳು ತೆಗ್ಗು ಗುಂಡಿಗಳಿಗೆ ಡಾಂಬರ್, ಮೋರಮ್ಮ ಹಾಕಿದ್ದರು. ಈಗ ಅದು ಕಿತ್ತು ಕಬ್ಬಿಣ ಸರಳುಗಳು ಮೇಲೇದ್ದಿವೆ. ಅಧಿಕಾರಿಗಳು ಯಾವಾಗ ರಿಪೇರಿ ಕೈಗೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.
ಪಟ್ಟಣಕ್ಕೆ ಹೊಂದಿಕೊಂಡು 4 ಕೀ. ಮೀ ರಸ್ತೆ ಉದ್ದಕ್ಕೂ ಅಳವಡಿಸಿರುವ ಹಲವು ಹೈಮಾಸ್ಟ್ ದೀಪಗಳು ಬೆಳಗುತ್ತಿಲ್ಲ. ನಿರ್ವಹಣೆ ಕೊರತೆಯಿಂದಾಗಿ ಸ್ಥಗಿತಗೊಂಡಿವೆ. ಸಂಜೆಯಾದರೆ ಈ ರಸ್ತೆಯಲ್ಲಿ ಕತ್ತಲು ಆವರಿಸಿಕೊಳ್ಳುತ್ತದೆ. ದಾರಿಹೋಕರಿಗೆ ಭಯ ಸೃಷ್ಟಿಸಿದೆ.
‘ಹೆದ್ದಾರಿಯಲ್ಲಿ ತೆಗ್ಗು ಗುಂಡಿಗಳು ಬಿದ್ದು ಕಬ್ಬಿಣದ ಸರಳುಗಳು ಮೇಲೇದ್ದಿವೆ. ವಾಹನ ಸವಾರರು ಭಯದಲ್ಲಿ ಸಂಚರಿಸುತ್ತಿದ್ದಾರೆ. ಹೈಮಾಸ್ಟ್ ದೀಪಗಳು ಸರಿಯಾಗಿ ಬೆಳಗುತ್ತಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕು’ ಎಂದು ಪಟ್ಟಣದ ಮುಖಂಡರಾದ ಶಶಿಕುಮಾರ ಕಟ್ಟಿಮನಿ ಕೋರಿದರು.
‘ಸ್ಥಳ ಪರಿಶೀಲಿಸಿ ತೆಗ್ಗು ಗುಂಡಿ ಮುಚ್ಚುವ ಕಾರ್ಯ ಕೈಗೊಳ್ಳಲಾಗುವುದು’ ಎಂದು ರಾಷ್ಟ್ರಿಯ ಹೆದ್ದಾರಿ ಪ್ರಾಧಿಕಾರದ ಎಇಇ ಸತೀಶ ನಾಗನೂರ ಪ್ರತಿಕ್ರಿಯೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.