ADVERTISEMENT

ಧಾರವಾಡ: ಬೇಂದ್ರೆ ಸಾಹಿತ್ಯದ ಜೀವಾಳ ಸಾಮರಸ್ಯ

‘ನಾಕುತಂತಿ’ ಉಪನ್ಯಾಸ ಮಾಲಿಕೆ: ಸಾಹಿತಿ ಜಿ.ಬಿ. ಹರೀಶ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2025, 5:45 IST
Last Updated 13 ಜುಲೈ 2025, 5:45 IST
ಧಾರವಾಡದಲ್ಲಿ ನಡೆದ ಉಪನ್ಯಾಸ ಮಾಲಿಕೆ ಉದ್ಘಾಟನಾ ಸಮಾರಂಭದಲ್ಲಿ ಜಿ.ಬಿ. ಹರೀಶ್‌ ಮಾತನಾಡಿದರು
ಧಾರವಾಡದಲ್ಲಿ ನಡೆದ ಉಪನ್ಯಾಸ ಮಾಲಿಕೆ ಉದ್ಘಾಟನಾ ಸಮಾರಂಭದಲ್ಲಿ ಜಿ.ಬಿ. ಹರೀಶ್‌ ಮಾತನಾಡಿದರು   

ಧಾರವಾಡ: ‘ದ.ರಾ. ಬೇಂದ್ರೆ ಅವರು ಸಾಮರಸ್ಯ ಕಂಡುಕೊಳ್ಳುವುದೇ ತತ್ವಶಾಸ್ತ್ರವೆಂದು ಕವನಗಳ ಮೂಲಕ ತಿಳಿಸಿದ್ದಾರೆ. ಸಮಷ್ಟಿ ಅವರ ಸಾಹಿತ್ಯದ ದೃಷ್ಟಿ’ ಎಂದು ಸಾಹಿತಿ ಜಿ.ಬಿ. ಹರೀಶ್‌ ಹೇಳಿದರು.

ಬೇಂದ್ರೆಯವರ ‘ನಾಕುತಂತಿ’ ಕೃತಿಗೆ ಜ್ಞಾನಪೀಠ ಸಂದ ಸುವರ್ಣ ಸಂಭ್ರಮದ ಅಂಗವಾಗಿ ದ.ರಾ.ಬೇಂದ್ರೆ ಟ್ರಸ್ಟ್‌ ವತಿಯಿಂದ ನಗರದ ಬೇಂದ್ರೆ ಭವನದಲ್ಲಿ ಶನಿವಾರ ನಡೆದ ವಿಶೇಷ ಉಪನ್ಯಾಸ ಮಾಲೆಯಲ್ಲಿ ಮಾತನಾಡಿದರು.

‘ಜಗತ್ತು, ಕುಟುಂಬ ಮತ್ತು ವ್ಯಕ್ತಿಗಳ ನಡುವಿನ ಸಾಮರಸ್ಯವೇ ತತ್ವಶಾಸ್ತ್ರವೆಂದು ಬೇಂದ್ರೆ ವಿವರಿಸಿದ್ದಾರೆ. ಪ್ರಾಚೀನ ಕನ್ನಡ, ಶಾಸನ, ಜಾನಪದ, ಜೈನ, ಬೌದ್ಧ, ವೀರಶೈವ, ತತ್ವಪದ, ಚಂಪೂ, ದಾಸ ಸಾಹಿತ್ಯ, ವಿಜ್ಞಾನ, ಸಂಖ್ಯಾಶಾಸ್ತ್ರ ಎಲ್ಲವನ್ನು ಅವರು ಬಲ್ಲವರಾಗಿದ್ದರು’ ಎಂದು ತಿಳಿಸಿದರು.

ADVERTISEMENT

‘ನಾಕುತಂತಿ ಕೃತಿಯಲ್ಲಿ 44 ಕವನಗಳಿವೆ. ‌ಇದರ ಮೂಲಕ ಜೀವನ ತತ್ವ ತಿಳಿಸಿದ್ದಾರೆ. ಗದ್ಯ ಮತ್ತು ಪದ್ಯ ರಚನೆ ಎರಡರಲ್ಲೂ ಅವರು ನಿಸ್ಸೀಮರಾಗಿದ್ದರು. ‘ಸಾಹಿತ್ಯದ ವಿರಾಟ್‌ ಸ್ವರೂಪ’ ಪುಸ್ತಕ ಓದಿದರೆ ‘ನಾಕುತಂತಿ’ ಕೃತಿಯನ್ನು ಚೆನ್ನಾಗಿ ಅರ್ಥೈಸಿಕೊಳ್ಳಬಹುದು. ಹೊಸ ಪೀಳಿಗೆಯವರು ಅವರ ಕೃತಿಗಳನ್ನು ಓದಬೇಕು’ ಎಂದು ಸಲಹೆ ನೀಡಿದರು.

‘ಬೇಂದ್ರೆ ಸಾಹಿತ್ಯ ಅಧ್ಯಯನವೆಂದರೆ ಅದು ಕನ್ನಡ ಸಾಹಿತ್ಯದ ಅವಲೋಕನ. ಸಾಹಿತ್ಯದಲ್ಲಿ ಧಾರವಾಡ ಭಾಗದ ಪ್ರದೇಶವನ್ನು ಹೆಚ್ಚು ಬಳಸಿಕೊಂಡಿದ್ದಾರೆ. ಕನ್ನಡ ಸಾಹಿತ್ಯವನ್ನು ಹೋಳು ಮಾಡಿ ನೋಡಬಾರದು, ಸಮಗ್ರವಾಗಿ ನೋಡಬೇಕು ಎಂಬುದು ಬೇಂದ್ರೆ ಅವರ ಮುಖ್ಯ ದೃಷ್ಟಿಕೋನವಾಗಿತ್ತು’ ಎಂದು ವಿಶ್ಲೇಷಿಸಿದರು.

ಕಲಬುರಗಿ‌ಯ ಕೇಂದ್ರೀಯ ವಿಶ್ವವಿದ್ಯಾಲಯದ  ನಿರ್ದೇಶಕ ಪ್ರೊ. ಬಸವರಾಜ ಡೋಣೂರ, ಸಿದ್ದರಾಮೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯೆ ಗಿರಿಜಾ ಹಿರೇಮಠ, ಬೇಂದ್ರೆ ಟ್ರಸ್ಟ್‌ ಅಧ್ಯಕ್ಷ ಡಿ.ಎಂ. ಹಿರೇಮಠ, ಸದಸ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ ಸೊಲಗಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.