ADVERTISEMENT

ಕಾವ್ಯ ರಚನಾಕಾರರಿಗೆ ಬದ್ದತೆ ಆವಶ್ಯ

ಸತ್ತಿ ಉಪನ್ಯಾಸ ಕಾರ್ಯಕ್ರಮ: ಪ್ರಾಧ್ಯಾಪಕ ಜಾಜಿ ದೇವೆಂದ್ರಪ್ಪ ಅಭಿಮತ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2026, 4:39 IST
Last Updated 1 ಫೆಬ್ರುವರಿ 2026, 4:39 IST
ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಈಚೆಗೆ ಏರ್ಪಡಿಸಿದ್ದ ದತ್ತಿ ಕಾರ್ಯಕ್ರಮದಲ್ಲಿ ಎಸ್.ಎಂ. ವೇಷಭೇಂದ್ರಸ್ವಾಮಿ ಅವರ ಭಾವಚಿತ್ರಕ್ಕೆ ಗಣ್ಯರು ನಮನ ಸಲ್ಲಿಸಿದರು 
ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಈಚೆಗೆ ಏರ್ಪಡಿಸಿದ್ದ ದತ್ತಿ ಕಾರ್ಯಕ್ರಮದಲ್ಲಿ ಎಸ್.ಎಂ. ವೇಷಭೇಂದ್ರಸ್ವಾಮಿ ಅವರ ಭಾವಚಿತ್ರಕ್ಕೆ ಗಣ್ಯರು ನಮನ ಸಲ್ಲಿಸಿದರು    

ಧಾರವಾಡ: ‘ಕಾವ್ಯ ರಚನಾಕಾರರಲ್ಲಿ ಮೊದಲು ಬದ್ದತೆ ಇರಬೇಕು. ಯುವ ಬರಹಗಾರರ ಅಭಿವ್ಯಕ್ತಿಗೆ ಮುಕ್ತ ಅವಕಾಶ ಸಿಗಬೇಕು. ಆಗ ಮಾತ್ರ ಕಾವ್ಯಕ್ಕೆ ಶಕ್ತಿ ತುಂಬಿದಂತಾಗುತ್ತದೆ’ ಎಂದು ಸಿಂಧನೂರಿನ ಪ್ರಾಧ್ಯಾಪಕ ಜಾಜಿ ದೇವೆಂದ್ರಪ್ಪ ಅಭಿಪ್ರಾಯಪಟ್ಟರು.

ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ರಾ.ಹ.ದೇಶಪಾಂಡೆ ಸಭಾಭವನದಲ್ಲಿ ದಿ. ಎಸ್.ಎಂ. ವೃಷಭೇಂದ್ರಸ್ವಾಮಿ ಸಂಸ್ಮರಣ ದತ್ತಿ ಅಂಗವಾಗಿ ಈಚೆಗೆ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಈ ಕಾಲದ ಕನ್ನಡ ಕಾವ್ಯದ ಆಶಯ ಅಭಿವ್ಯಕ್ತಿ’ ಕುರಿತು ಮಾತನಾಡಿದರು.

‘ಬೇಂದ್ರೆ, ಕುವೆಂಪು, ಗೋಕಾಕ, ಯಕ್ಕುಂಡಿ ಅವರಂತಹ ಕವಿಗಳಲ್ಲಿ ಅದ್ಭುತವಾದ ಕಾವ್ಯ ಶಕ್ತಿ ಇತ್ತು. ಈಗ ಉತ್ತಮ ಬರಹಗಾರರಿದ್ದರೂ, ಅವರ ಕಾವ್ಯ ಓದುವವರ ಸಂಖ್ಯೆ ಇಲ್ಲದಿರುವುದು ಆತಂಕಕಾರಿಯಾಗಿದೆ’ ಎಂದರು.

ADVERTISEMENT

‘ಶರಣರು, ತತ್ವಪದಕಾರರು, ದಾರ್ಶನಿಕರು ಸಹ ಕಾವ್ಯ ಶಕ್ತಿ ಮೂಲಕ ಒಡೆದ ಮನಸ್ಸುಗಳನ್ನು ಬೆಸೆದು, ಒಂದಾಗಿ ಬಾಳುವುದ ಕಲಿಸಿದರು. ಇಂದಿನ ಬರಹಗಾರರು ಸಮಕಾಲೀನ ಸಾಮಾಜಿಕ ತಲ್ಲಣಗಳು, ಬಿಕ್ಕಟ್ಟು ಕುರಿತು ತಮ್ಮ ಬರಹದ ಮೂಲಕ ಸಮುದಾಯಕ್ಕೆ ತಿಳಿಸಬೇಕಿದೆ. ಕಾವ್ಯ ಪರಂಪರೆಯನ್ನು ಅರಿತು ಮುನ್ನಡೆಯಬೇಕಿದೆ’ ಎಂದು ಹೇಳಿದರು.

ಪ್ರಾಧ್ಯಾಪಕ ಶ್ರೀಪಾದ ಶೆಟ್ಟಿ ಮಾತನಾಡಿ, ‘ಎಸ್.ಎಂ. ವೇಷಭೇಂದ್ರಸ್ವಾಮಿ ಅವರದ್ದು ವರ್ಣರಂಜಿತ ವ್ಯಕ್ತಿತ್ವ. ಅಪಾರ ಜೀವನೋತ್ಸಾಹ ಅವರಲ್ಲಿತ್ತು. ಜೀವನವನ್ನು ಹಬ್ಬದಂತೆ ಕಂಡ ಅವರು ತೋರಿದ ಪ್ರೀತಿ ಅನನ್ಯವಾದುದು’ ಎಂದು ತಿಳಿಸಿದರು.

ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಸಂಜೀವ ಕುಲಕರ್ಣಿ, ದತ್ತಿದಾನಿ ಎಸ್.ಎಂ. ಶಿವಪ್ರಸಾದ, ಮಹೇಶ ಹೊರಕೇರಿ, ಜಿನದತ್ತ ಹಡಗಲಿ, ಶಿವಾನಂದ ಭಾವಿಕಟ್ಟಿ, ವೀರಣ್ಣ ಒಡ್ಡೀನ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.