ADVERTISEMENT

ಹುಬ್ಬಳ್ಳಿ: ಎಲ್ಲೆಡೆ ಕನ್ನಡ ಗೀತೆಗಳ ಕಂಪು

ಹು–ಧಾ ಮಹಾನಗರ ಪಾಲಿಕೆಯಿಂದ ಭುವನೇಶ್ವರಿ ಚಿತ್ರದ ಅದ್ಧೂರಿ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2023, 6:26 IST
Last Updated 2 ನವೆಂಬರ್ 2023, 6:26 IST

ಹುಬ್ಬಳ್ಳಿ: ಎಲ್ಲೆಲ್ಲೂ ಹಾರಾಡಿದ ಕನ್ನಡ ಧ್ವಜಗಳು, ಮುಗಿಲುಮುಟ್ಟಿದ ಜೈ ಕನ್ನಡಾಂಬೆ– ಸಿರಿಗನ್ನಡಂ ಗೆಲ್ಗೆ ಉದ್ಘೋಷಗಳು...ಜತೆಗೆ ಕನ್ನಡ ಗೀತೆಗಳ ಕಂಪು....

–ಇವು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಏರ್ಪಡಿಸಿದ್ದ ಭುವನೇಶ್ವರಿದೇವಿ ಭಾವಚಿತ್ರದ ಮೆರವಣಿಗೆಯಲ್ಲಿ ಕಂಡ ದೃಶ್ಯಗಳು.

ನಗರದ ಸಿದ್ಧಾರೂಢಮಠದಲ್ಲಿ ಮೆರವಣಿಗೆಗೆ ಅದ್ಧೂರಿ ಚಾಲನೆ ನೀಡಲಾಯಿತು. ಟ್ರ್ಯಾಕ್ಟರ್‌ಗಳು, ಸಾರೋಟಗಳು ಮೆರವಣಿಗೆಯಲ್ಲಿ ಸಾಗಿದವು. ವಿವಿಧ ಸ್ತಬ್ದಚಿತ್ರಗಳು ಮೆರವಣಿಗೆಗೆ ಮೆರುಗು ತಂದವು. ಡೊಳ್ಳು ಕುಣಿತ, ಹುಲಿ ಕುಣಿತ, ಮಹಿಳೆಯರ ಕೋಲಾಟ, ಗೊಂಬೆ ಕುಣಿತ ಕಲಾ ತಂಡಗಳು ಕಳೆ ಹೆಚ್ಚಿಸಿದವು. ಸಾರ್ವಜನಿಕರು ರಸ್ತೆಗಳಲ್ಲಿ ರಂಗೋಲಿ ಬಿಡಿಸಿ ಕನ್ನಡಾಭಿಮಾನ ಮೆರೆದರು.

ADVERTISEMENT

ಮಕ್ಕಳು ಗೌತಮಬುದ್ಧ, ಅಂಬೇಡ್ಕರ್, ಕನ್ನಡಾಂಬೆ ಸೇರಿದಂತೆ ವಿವಿಧ ಮಹನೀಯರ ವೇಷದಲ್ಲಿ ಕಂಗೊಳಿಸಿದರು. ಯುವಕರು, ಕನ್ನಡಪರ ಸಂಘಟನೆಗಳ ಸದಸ್ಯರು ಕೆಂಪು–ಹಳದಿ ಬಣ್ಣದ ಶಾಲು, ಪೇಟ ಧರಿಸಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಯುವಕರು ರಾಜ್ಯೋತ್ಸವದ ಅಂಗವಾಗಿ ಬೈಕ್‌ ರ‍್ಯಾಲಿ ನಡೆಸಿದರು. ಉತ್ತರ ಕರ್ನಾಟಕ ಆಟೊ ರಿಕ್ಷಾ ಚಾಲಕರ ಸಂಘ, ಹುಬ್ಬಳ್ಳಿ ಆಟೊ ರಿಕ್ಷಾ ಮಾಲೀಕರ ಮತ್ತು ಚಾಲಕರ ಸಂಘದ ಸದಸ್ಯರು ಮತ್ತು ಆಟೊ ಚಾಲಕರು ಆಟೊಗಳಿಗೆ ಕನ್ನಡ ಭಾವುಟ ಕಟ್ಟಿ, ಪುನೀತ್‌ರಾಜ್‌ಕುಮಾರ್‌, ವಿಷ್ಣುವರ್ಧನ್‌ ಸಂಚರಿಸಿದ್ದು ವಿಶೇಷವಾಗಿತ್ತು.

ವಿವಿಧ ವೃತ್ತಗಳಲ್ಲಿ ಧ್ವನಿವರ್ಧಕ ಅಳವಡಿಸಿ, ಕನ್ನಡಾಂಬೆಯ ಭಾವಚಿತ್ರವಿದ್ದ ಫ್ಲೆಕ್ಸ್ ಅಳವಡಿಸಿ ಧ್ವನಿವರ್ಧಕರಲ್ಲಿ ಕನ್ನಡ ಚಲನಚಿತ್ರ ಗೀತೆಗಳನ್ನು ಹಾಕಲಾಗಿತ್ತು. ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕಿ ಸುವರ್ಣಾ ಕಲ್ಲಕುಂಟ್ಲಾ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿ ಗಮನ ಸೆಳೆದರು.

ಮೆರವಣಿಗೆ ಇಂಡಿ ಪಂಪ್‌ ವೃತ್ತ, ಹಳೆ ಹುಬ್ಬಳ್ಳಿ, ಸಿದ್ಧಾರ್ಥ ಸರ್ಕಲ್,  ಬಮ್ಮಾಪುರ ಓಣಿ, ಹಿರೇಪೇಟ, ಜವಳಿ ಸಾಲ, ಮೈಸೂರ್‌ ಸ್ಟೋರ್ಸ್, ದುರ್ಗದಬೈಲ್‌, ಮರಾಠಗಲ್ಲಿ, ಮ್ಯಾದಾರ ಓಣಿ, ತುಳಜಾಭವಾನಿ ದೇವಸ್ಥಾನ, ದಾಜಿಬಾನಪೇಟೆ, ಸಂಗೊಳ್ಳಿ ರಾಯಣ್ಣ ವೃತ್ತ, ಚನ್ನಮ್ಮ ವೃತ್ತ, ಸರ್‌ ಸಿದ್ಧಪ್ಪ ಕಂಬಳಿ ಮಾರ್ಗದ ಮೂಲಕ ನೆಹರೂ ಮೈದಾನ ತಲುಪಿತು.

ಮೆರವಣಿಗೆಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಪ್ರಸಾದ ಅಬ್ಬಯ್ಯ, ಎಲ್ಲರೂ ಪ್ರತಿನಿತ್ಯ ಮತ್ತು ವ್ಯವಹಾರದಲ್ಲಿ ಕನ್ನಡ ಬಳಸುವ ಜತೆಗೆ ಅನ್ಯ ಭಾಷಿಕರಿಗೆ ಕನ್ನಡ ಕಲಿಸುವ ಕೆಲಸವನ್ನೂ ಮಾಡಬೇಕಿದೆ. ಪ್ರಸ್ತುತ ಕನ್ನಡ ಭಾಷೆ ಮೇಲೆ ದಬ್ಬಾಳಿಕೆ ನಡೆಯುತ್ತಿದ್ದು, ಬೇರೆ ಭಾಷೆಗಳಿಂದಲೂ ಸವಾಲು ಎದುರಿಸಬೇಕಾಗಿದೆ. ವಾಣಿಜ್ಯ ಮಳಿಗೆಗಳು, ಅಂಗಡಿಗಳ ಮೇಲೆ ಕನ್ನಡ ನಾಮಫಲಕಗಳು ಕಣ್ಮರೆಯಾಗಿವೆ ಎಂದರು.

ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಗಂಗೂಬಾಯಿ ಹಾನಗಲ್‌ ಅವರು ನಮ್ಮ ಹೆಮ್ಮೆ. ಕನ್ನಡಕ್ಕೆ ಅವರ ಕೊಡುಗೆ ಅಪಾರ. ಅವರ ಹೆಸರಿನಲ್ಲಿ ತೆರೆಯಲಾಗಿರುವ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯವ  ಮುಚ್ಚುವ ಹಂತದಲ್ಲಿದ್ದು, ಅದರ ಉಳಿವಿಗೆ ಪಕ್ಷಭೇದ ಮರೆತು ಎಲ್ಲರೂ ಹೋರಾಡಬೇಕಿದೆ ಎಂದು ಹೇಳಿದರು.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ ಮಾತನಾಡಿ, ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲ ವಾಣಿಜ್ಯ ಮಳಿಗೆಗಳು ಹಾಗೂ ಅಂಗಡಿಗಳ ನಾಮಫಲಕವನ್ನು ಕಡ್ಡಾಯವಾಗಿ ಕನ್ನಡದಲ್ಲಿ ಬರೆಸಬೇಕು ಎಂದು  ಆದೇಶಿಸಲಾಗಿದೆ.  ಭಾಷೆಯ ಬೆಳವಣಿಗೆಗೆ ಎಲ್ಲರೂ ಶ್ರಮಿಸಬೇಕು ಎಂದು ಹೇಳಿದರು.

 ಮೇಯರ್ ವೀಣಾ ಬರದ್ವಾಡ, ಉಪಮೇಯರ್ ಸತೀಶ ಹಾನಗಲ್, ಸಭಾ ನಾಯಕ ಶಿವು ನಾಯಕ, ಸದಸ್ಯರಾದ ತಿಪ್ಪಣ್ಣ ಮಜ್ಜಗಿ, ರಾಧಾಬಾಯಿ ಸಫಾರೆ, ಚಂದ್ರಿಕಾ ಮೇಸ್ತ್ರಿ, ರಾಜಣ್ಣ ಕೊರವಿ, ಶಿವು ಮೆಣಸಿನಕಾಯಿ, ಸಂದೀಲ ಕುಮಾರ, ಅಮೃತ ಇಜಾರೆ, ಗುರುನಾಥ ಉಳ್ಳಿಕಾಶಿ, ಪ್ರೇಮನಾಥ ಚಿಕ್ಕತುಂಬಳ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.