ADVERTISEMENT

ಕಾರ್ಗಿಲ್‌ ವಿಜಯೋತ್ಸವ ಸಂಭ್ರಮ

ವಿದ್ಯಾರ್ಥಿಗಳ ಮೆರವಣಿಗೆ, ಹುತಾತ್ಮ ಯೋಧರ ಸ್ಮರಣೆ

​ಪ್ರಜಾವಾಣಿ ವಾರ್ತೆ
Published 26 ಜುಲೈ 2019, 14:30 IST
Last Updated 26 ಜುಲೈ 2019, 14:30 IST
ಹುಬ್ಬಳ್ಳಿಯ ಚನ್ನಮ್ಮ ವೃತ್ತದಲ್ಲಿ ಶುಕ್ರವಾರ ಕಾರ್ಗಿಲ್‌ ವಿಜಯೋತ್ಸವ ಆಚರಿಸಲಾಯಿತು
ಹುಬ್ಬಳ್ಳಿಯ ಚನ್ನಮ್ಮ ವೃತ್ತದಲ್ಲಿ ಶುಕ್ರವಾರ ಕಾರ್ಗಿಲ್‌ ವಿಜಯೋತ್ಸವ ಆಚರಿಸಲಾಯಿತು   

ಹುಬ್ಬಳ್ಳಿ:ಕಾರ್ಗಿಲ್‌ ವಿಜಯೋತ್ಸವದ 20ನೇ ವರ್ಷಾಚರಣೆಮತ್ತು ಬಾಲಾಕೋಟ್‌ ಸರ್ಜಿಕಲ್‌ ಸ್ಟ್ರೈಕ್‌ ಮಾಡಿದ ಯೋಧರ ಗೌರವಾರ್ಥ ಗಜಾನನ ಮಂಡಳ ಮತ್ತು ಕನ್ನಡ ಪರ ಮಹಾಮಂಡಳ ವತಿಯಿಂದ ನಗರದಲ್ಲಿ ಶುಕ್ರವಾರ ವಿದ್ಯಾರ್ಥಿಗಳಿಂದ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.

ಲ್ಯಾಮಿಂಗ್ಟನ್‌ ಶಾಲೆಯ ಆವರಣದಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ ರವೀಂದ್ರ ಕವಲಿ,ಎಸಿಪಿ ಎಚ್‌.ಕೆ. ಪಠಾಣ್, ಮಹಾಮಂಡಳದ ಅಧ್ಯಕ್ಷ ಡಿ. ಗೋವಿಂದರಾವ್‌ ಮತ್ತು ಮಹಿಳಾ ಕಾಲೇಜಿನ ಎನ್‌ಎಸ್‌ಎಸ್‌ ಅಧಿಕಾರಿ ಲಿಂಗರಾಜ ಅಂಗಡಿ ರಾಷ್ಟ್ರಧ್ವಜ ಬೀಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.

ಮೂರುಸಾವಿರ ಮಠದ ಮಹಿಳಾ ಕಾಲೇಜಿನ ಕಲಾ, ವಾಣಿಜ್ಯ ಮತ್ತು ಲ್ಯಾಮಿಂಗ್ಟನ್‌ ಶಾಲೆಯ ಎನ್‌ಎಸ್‌ಎಸ್‌ ಘಟಕದ ವಿದ್ಯಾರ್ಥಿಗಳು, ಅಕ್ಕನ ಬಳಗದ ಸದಸ್ಯರು ಪಾಲ್ಗೊಂಡಿದ್ದ ಮೆರವಣಿಗೆ ಲ್ಯಾಮಿಂಗ್ಟನ್‌ ಶಾಲೆಯಿಂದ ಆರಂಭವಾಗಿ ರಾಣಿ ಚನ್ನಮ್ಮ ವೃತ್ತದ ತನಕ ತೆರಳಿತು. ಈ ವೇಳೆ ವಿದ್ಯಾರ್ಥಿಗಳು ಹುತಾತ್ಮ ಯೋಧರಿಗೆ ಜೈಕಾರ ಹಾಕಿದರು. ದೇಶಭಕ್ತಿಗೆ ಪ್ರೇರಣೆಯಾಗುವ ಘೋಷಣೆಗಳನ್ನು ಕೂಗಿದರು.

ADVERTISEMENT

ಬಳಿಕ ಮಾತನಾಡಿದ ರವೀಂದ್ರ ‘ದೇಶದ ರಕ್ಷಣೆಗಾಗಿ ಸಾಕಷ್ಟು ಯೋಧರು ಪ್ರಾಣ ಬಲಿದಾನ ಮಾಡಿದ್ದಾರೆ. ಅವರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ’ ಎಂದರು.

ಲಿಂಗರಾಜ ಅಂಗಡಿ ‘ಆಚರಣೆ ಒಂದೇ ದಿನಕ್ಕೆ ಸೀಮಿತವಾಗದೆ ಸೈನಿಕರ ಸಾಧನೆಗಾಥೆಯನ್ನು ನಿತ್ಯ ನೆನಪಿಸಿಕೊಳ್ಳಬೇಕು. ಮಕ್ಕಳಲ್ಲಿ ಈ ಬಗ್ಗೆ ಸ್ಫೂರ್ತಿ ತುಂಬಬೇಕು. ಕೇಂದ್ರ ಸರ್ಕಾರ ಯೋಧರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು’ ಎಂದರು.

ಅಕ್ಕನ ಬಳಗದ ಸದಸ್ಯೆ ಸುಲೋಚನಾ ಭೂಸನೂರ ‘ಗಡಿಯಲ್ಲಿ ನಿಂತು ಹೋರಾಡಲು ಎಲ್ಲರಿಗೂ ಆಗುವುದಿಲ್ಲ; ಎಲ್ಲರಿಗೂ ಅವಕಾಶ ಕೂಡ ಸಿಗುವುದಿಲ್ಲ. ಆದ್ದರಿಂದ ಸೈನ್ಯದಲ್ಲಿ ಇರುವವರಿಗೆ ಇಲ್ಲಿದ್ದುಕೊಂಡೇ ನಾವು ಕೈಲಾದಷ್ಟು ಸಹಾಯ ಮಾಡಬೇಕು’ ಎಂದರು.

ಎನ್‌ಎಸ್‌ಎಸ್ ಅಧಿಕಾರಿ ಎನ್‌.ಎಸ್‌. ಗುಡಾರ, ಲ್ಯಾಮಿಂಗ್ಟನ್‌ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಜಿ.ಆರ್‌. ಶಿವಪ್ರಸಾದ, ಜಿ.ಬಿ. ಬೂದನೂರ, ಎಂ.ಜಿ. ಶಿಂಗೆ, ಜಿ.ಬಿ. ಮಹಾಳಂಕ, ಎನ್‌.ಬಿ. ಚಿಂಚಲಿ, ಕೆ.ಪಿ. ಫುಲಾನೇಕರ, ರೇಣುಕಾ, ಅಕ್ಕನ ಬಳಗದ ಸದಸ್ಯರಾದ ಉಮಾ ಪಂಚಾಂಗಮಠ, ಗೀತಾ ಹೊನ್ನೊಳ್ಳಿ, ನಿರ್ಮಲಾ ಅಂಗಡಿ, ಗಣಪತಸಾ ಹನಮಸಾಗರ, ಶಿವಯೋಗಿ ವನಹಳ್ಳಿಮಠ, ಸಿದ್ಧರಾಜ, ಚನ್ನಪ್ಪ ಪಾಲ್ಗೊಂಡಿದ್ದರು.

ಮೂರುಸಾವಿರ ಮಠ:ಮೂರುಸಾವಿರ ಮಠದ ಮಹಿಳಾ ಕಾಲೇಜಿನಲ್ಲಿ ನಡೆದ ಪ್ರತ್ಯೇಕ ಕಾರ್ಯಕ್ರಮದಲ್ಲಿ ಕಾರ್ಗಿಲ್‌ ವಿಜಯೋತ್ಸವ ಆಚರಿಸಲಾಯಿತು.

ಭಾರತೀಯ ಸೇನೆಯಲ್ಲಿ 20 ವರ್ಷ ಕೆಲಸ ಮಾಡಿದ ಹವಾಲ್ದಾರ್‌ ಬಸವರಾಜ ಸೂಳಿಬಾವಿ ತಮ್ಮ ಅನುಭವಗಳನ್ನು ವಿದ್ಯಾರ್ಥಿಗಳ ಜೊತೆ ಹಂಚಿಕೊಂಡು ‘ಈಗಿನ ಯುವಕರು ಭಾರತೀಯ ಭೂ, ವಾಯು ಮತ್ತು ಜಲ ಸೈನ್ಯದಲ್ಲಿ ಕಾರ್ಯ ನಿರ್ವಹಿಸಬೇಕು. ಸೈನ್ಯದಲ್ಲಿ ಮಹಿಳೆಯರಿಗೂ ಅವಕಾಶ ಕೊಟ್ಟಿದ್ದರಿಂದ ಅವರಿಗೂ ಅವಕಾಶಗಳಿವೆ’ ಎಂದರು.

ಪ್ರಾಚಾರ್ಯ ಎ.ಎಲ್‌. ಪೊಲೀಸ್‌ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಎನ್‌ಎಸ್‌ಎಸ್‌ ಕಾರ್ಯಕ್ರಮದ ಅಧಿಕಾರಿ ಎಸ್‌.ವಿ. ಹಿರೇಮಠ, ವಿದ್ಯಾರ್ಥಿ ಪ್ರತಿನಿಧಿಗಳಾದ ಜಗದೀಶ ಸಾವಂತ, ಜ್ಯೋತಿ ಚಿಗಳಂಪಳ್ಳಿ, ನಾಗರಾಜ, ಕುಮಾರ, ಭೂನೇಶ, ರವಿಕಿರಣ ಇದ್ದರು. ನೇತಾ ರಾಜೇಶ್ವರಿ ಪ್ರಾರ್ಥಿಸಿದರು. ವಿಜಯಲಕ್ಷ್ಮಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.