
ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ
ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯ ಬಸವೇಶ್ವರ ಅಧ್ಯಯನ ಪೀಠದ ಸಂಯೋಜಕ ಹುದ್ದೆಗೆ (ತಾತ್ಕಾಲಿಕ ನೇಮಕಾತಿ) ಸಾಯಿ ಪಿಯು ಕಾಲೇಜಿನ ಅಧ್ಯಕ್ಷೆ ವೀಣಾ ಬಿರಾದಾರ ನೇಮಕ ಆದೇಶವನ್ನು ತಡೆಹಿಡಿಯಲಾಗಿದೆ.
‘ವೀಣಾ ಬಿರಾದಾರ ಅವರ ನೇಮಕ ಆದೇಶವನ್ನು ತಾಂತ್ರಿಕ ಕಾರಣಗಳಿಂದ ತಡೆ ಹಿಡಿಯಲಾಗಿದೆ. ಸಂಯೋಜಕ ಹುದ್ದೆಗೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕರನ್ನೇ ನೇಮಕ ಮಾಡುವಂತೆ ಕೆಲವರು ಮನವಿ ಸಲ್ಲಿಸಿದ್ದಾರೆ’ ಎಂದು ವಿಶ್ವವಿದ್ಯಾಲಯದ ಕುಲಪತಿ ಎ.ಎಂ.ಖಾನ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಬಸವೇಶ್ವರ ಅಧ್ಯಯನ ಪೀಠದ ಸಂಯೋಜಕ ಹುದ್ದೆ ತಾತ್ಕಾಲಿಕ ನೇಮಕಾತಿ ಆದೇಶವನ್ನು ವೀಣಾ ಬಿರಾದಾರ ಅವರಿಗೆ ನೀಡಲಾಗಿತ್ತು. ಕಾರ್ಯಭಾರ ಸ್ವೀಕರಿಸಿಲು ಅವರು ಜನವರಿ 20ರಂದು ವಿಶ್ವವಿದ್ಯಾಲಯಕ್ಕೆ ತೆರಳಿದ್ದರು. ನೇಮಕಾತಿ ಆದೇಶವನ್ನು ತಡೆಹಿಡಿಯಲಾಗಿದೆ’ ಎಂದು ವಿಶ್ವವಿದ್ಯಾಲಯದವರು ಅವರಿಗೆ ತಿಳಿಸಿದ್ದಾರೆ.
ಕರ್ನಾಟಕ ವಿಶ್ವವಿದ್ಯಾಲಯದ ಅಧ್ಯಯನ ಪೀಠಗಳ ಸಂಯೋಜಕ, ನಿರ್ದೇಶಕ ಹುದ್ದೆಗಳಿಗೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕರನ್ನೇ ನೇಮಿಸಬೇಕು ಎಂದು ಕರ್ನಾಟಕ ವಿಶ್ವವಿದ್ಯಾಲಯ ಸ್ನಾತಕೋತ್ತರ ಶಿಕ್ಷಕರ ಸಂಘ ಮತ್ತು ಕರ್ನಾಟಕ ವಿಶ್ವವಿದ್ಯಾಲಯ ಎಸ್‌ಸಿ, ಎಸ್‌ಟಿ ಸ್ನಾತಕೋತ್ತರ ಶಿಕ್ಷಕರ ಸಂಘದ ಅಧ್ಯಕ್ಷರುಗಳು ಕುಲಸಚಿವರಿಗೆ ಈಚೆಗೆ ಮನವಿ ಸಲ್ಲಿಸಿದ್ದಾರೆ.
‘ವಿಶ್ವವಿದ್ಯಾಲಯ ಬಸವೇಶ್ವರ ಅಧ್ಯಯನ ಪೀಠದ ಸಂಯೋಜಕ ಹುದ್ದೆಗೆ ಅರ್ಜಿ ಆಹ್ವಾನಿಸಿತ್ತು. ಸಂದರ್ಶನ ನಡೆಸಿ ಆಯ್ಕೆ ಮಾಡಲಾಗಿತ್ತು’ ಎಂದು ಪ್ರಾಧ್ಯಾಪಕರೊಬ್ಬರು ತಿಳಿಸಿದರು. ಪ್ರೊ.ಸಿ.ಎಂ.ಕುಂದಗೋಳ ಅವರು ಬಸವೇಶ್ವರ ಅಧ್ಯಯನ ಪೀಠದ ಸಂಯೋಜಕ ಹುದ್ದೆಗೆ ಈಚೆಗೆ ರಾಜೀನಾಮೆ ಸಲ್ಲಿಸಿದ್ದಾರೆ.
ಬಸವೇಶ್ವರ ಅಧ್ಯಯನ ಪೀಠದ ಸಂಯೋಜಕ ಹುದ್ದೆಗೆ ನೇಮಕಾತಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುವಂತೆ ಪೀಠದ ಸಲಹಾ ಸಮಿತಿ ಸದಸ್ಯರೂ ಆಗಿರುವ ಶಾಸಕ ಅರವಿಂದ ಬೆಲ್ಲದ ಅವರು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿಗೆ ಪತ್ರ ಬರೆದಿದ್ದಾರೆ.
ಪೀಠಕ್ಕೆ ಸಂಯೋಜಕರ ನೇಮಕಾತಿಗೆ ಮಾರ್ಗಸೂಚಿ ನಿಗದಿಪಡಿಸಬೇಕು. ಅರ್ಹತೆ, ಮಾನದಂಡ ನಿಗದಿ ಪಡಿಸುವವರೆಗೆ ಡೀನ್ ಅಥವಾ ಕುಲಸಚಿವರಿಗೆ ಆ ಹೊಣೆ ವಹಿಸಬಹುದು. ಅದನ್ನು ಬಿಟ್ಟು ಮಾನದಂಡ ನಿಗದಿಪಡಿಸದೆ ಬಸವ ಪೀಠ ಅಥವಾ ವಿಶ್ವವಿದ್ಯಾಲಯದ ಯಾವುದೇ ಪೀಠಕ್ಕೆ ಯಾರನ್ನಾದರೂ ನೇಮಿಸಿದರೆ ಅಪವಾದಕ್ಕೆ ಕಾರಣವಾಗುತ್ತದೆ. ಮಾನದಂಡ ಸಿದ್ಧಪಡಿಸಿದ ನಂತರ ನೇಮಕಾತಿ ಪ್ರಕ್ರಿಯೆ ನಡೆಸಬೇಕು ಎಂದು ಪತ್ರದಲ್ಲಿ ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.