ಹುಬ್ಬಳ್ಳಿ: ‘ಯಡಿಯೂರಪ್ಪ ಕಾಮಧೇನು ಇದ್ದಂತೆ. ಅವರ ಜೀವ ವಿಜಯೇಂದ್ರನ ಕೈಯಲ್ಲಿ ಇದೆ. ಯಡಿಯೂರಪ್ಪ ಅವರ ಈಗಿನ ಪರಿಸ್ಥಿತಿ ನೋಡಿದರೆ ನಾಲಿಗೆ ಕಳೆದುಕೊಂಡ ನಾಯಕ, ದಾರಿ ತಪ್ಪಿದ ಮಗ’ ಎಂದು ತಲೆಬರಹ ಕೊಡಬಹುದು ಎಂದು ವಿಧಾನಪರಿಷತ್ ಸದಸ್ಯರ ಎಚ್. ವಿಶ್ವನಾಥ್ ಅವರು ವ್ಯಂಗ್ಯವಾಡಿದ್ದಾರೆ.
ಹುಬ್ಬಳ್ಳಿಯಲ್ಲಿ ಶುಕ್ರವಾರ ದಿಢೀರ್ ಪತ್ರಿಕಾಗೋಷ್ಠಿ ನಡೆಸಿದ ಅವರು, ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಬಿ.ವೈ ವಿಜಯೇಂದ್ರ, ಸಚಿವ ಸಿ.ಪಿ ಯೋಗೇಶ್ವರ್ ವಿರುದ್ಧ ಆಕ್ರೋಶ ಹೊರ ಹಾಕಿದರು.
ಇದೇ 17ರಂದು ಅಮಿತ್ ಶಾ ಅವರನ್ನು ಭೇಟಿ ಮಾಡಲು ಸಮಯಾವಕಾಶ ಕೋರಿದ್ದೇನೆ. ಆಗ ರಾಜ್ಯದ ಬೆಳವಣಿಗೆಯನ್ನು ಅವರ ಗಮನಕ್ಕೆ ತರುತ್ತೇನೆ ಎಂದರು.
ನಾನೊಬ್ಬ ಲೇಖಕ. ಬರವಣಿಗೆ ಮೂಲಕ ಎಲ್ಲವನ್ನೂ ಬಹಿರಂಗಪಡಿಸುತ್ತೇನೆ.ಬಿ.ಎಸ್. ಯಡಿಯೂರಪ್ಪ ನನಗಿಂತ ದೊಡ್ಡವರು. ಅವರಿಗೆ ಅಧಿಕಾರದ ಆಸೆ ಇರಬೇಕಾದರೆ ನನಗೆ ಇರಬಾರದಾ? ಎಂದು ಪ್ರಶ್ನಿಸಿದರು.
ನಾನುಮಂತ್ರಿ ಮಾಡಿ ಎಂದು ಯಾರನ್ನೂ ಕೇಳಿಲ್ಲ. ಆದರೆ, ಜೈಲಿಗೆ ಹೋಗಬೇಕಾದ ಯೋಗೇಶ್ವರ ಸಚಿವರಾಗಿದ್ದಾರೆ. ಕೆಲ ದಿನಗಳಲ್ಲಿ ಜೈಲಿಗೆ ಹೋಗುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಜೆಡಿಎಸ್ ಪಕ್ಷ ತೊರೆದು ಬಿಜೆಪಿಗೆ ಬರುವಾಗ ಮುಂಬೈನಲ್ಲಿ ಕೆಲ ದಿನಗಳ ಕಾಲ ಕಳೆದ ದಿನಗಳ ಬಗ್ಗೆ ‘ಬಾಂಬೆ ದಿನಗಳು’ ಪುಸ್ತಕ ಬರೆಯುತ್ತೇನೆ. ಯಡಿಯೂರಪ್ಪ ಎನು ಮಾತು ಕೊಟ್ಟಿದ್ದರು ಎನ್ನುವ ಪ್ರಶ್ನೆಗೆ ಉತ್ತರಿಸಲು ನಕಾರ. ಎಲ್ಲವನ್ನೂ ಪುಸ್ತಕದಲ್ಲಿ ಬಹಿರಂಗ ಪಡಿಸುತ್ತೇನೆ ಎಂದರು.
ಸಚಿವ ಸ್ಥಾನ ಕೊಡಿ ಎಂದು ಯಾರನ್ನೂ ಕೇಳಿಲ್ಲ. ಆದರೆ ಮುಖ್ಯಮಂತ್ರಿ ಜೊತೆ ನಡೆಸಿದ ಸುದೀರ್ಘ ಚರ್ಚೆ, ಅಂದು ಅವರು ಕೊಟ್ಟ ಮಾತು ಈಡೇರಿಸಬೇಕಿತ್ತು ಎಂದು ಯಡಿಯೂರಪ್ಪ ವಿರುದ್ಧ ಅಸಮಾಧಾನ ಹೊರಹಾಕಿದರು.
ನಾನು ಸಚಿವ ಸ್ಥಾನಕ್ಕಾಗಿ ಪಟ್ಟು ಹಿಡಿದಿಲ್ಲ. ಮಾತಿನ ಮೇಲೆ, ನಡುವಳಿಕೆ ಮೇಲೆ ಯಾವುದೇ ಪಕ್ಷ ಉಳಿದಿಲ್ಲ. ಯಾವುದೇ ನಾಯಕರು ಮಾತು ಉಳಿಸಿಕೊಳ್ಳುತ್ತಿಲ್ಲ. ಯಡಿಯೂರಪ್ಪನವರು ನನಗೆ ಯಾಕೆ ಸಚಿವ ಸ್ಥಾನ ಕೊಟ್ಟಿಲ್ಲಾ ಎಂಬುದು ಅವರೇ ಹೇಳಬೇಕು. ನಮಗೆ ಮಾತು ಕೊಟ್ಟಿದ್ದರು. ಅದು ಎನು ಎಂಬುದು ಅವರೇ ಬಹಿರಂಗ ಪಡಿಸಲಿ ಎಂದರು ಸವಾಲು ಹಾಕಿದರು.
ಇದನ್ನೂ ಓದಿ... ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಗೆ ಸಿ.ಡಿ ‘ಗುಮ್ಮ’
ನಾನು ಯಾವುದೇ ರೀತಿ ಬಂಡಾಯ ಎಳುವ ಮಾತು ಇಲ್ಲ. ಸಿಡಿ ವಿಚಾರವಾಗಿ ಯತ್ನಾಳ ಅವರು ಹೇಳಬೇಕು. ನಾನು ಸಿಡಿ ಇದೆ ಎಂದು ಹೇಳಿದ್ದೆ ಅಷ್ಟೇ ಎಂದು ಸ್ಪಷ್ಟಪಡಿಸಿದರು.
ಬಿಜೆಪಿಯಲ್ಲಿ ಕುಟುಂಬ ರಾಜಕಾರಣದ ಹಾವಳಿ ಹೆಚ್ಚಾಗಿದೆ. ಯಡಿಯೂರಪ್ಪ ಹಾಗೂ ಈಶ್ವರಪ್ಪ ಕುಟುಂಬ ರಾಜಕಾರಣದಲ್ಲಿ ತೊಡಗಿದ್ದಾರೆ. ಇದರಿಂದ ನರೇಂದ್ರ ಮೋದಿ ಬೇಸರಗೊಂಡಿದ್ದಾರೆ ಎಂದು ತಿಳಿಸಿದರು.
‘ಭ್ರಷ್ಟಾಚಾರದ ಬಗ್ಗೆ ನಾವು ಮಾತನಾಡಿದರೆ, ನಾವೇ ನಗೆಪಾಟಿಲಿಗೆ ಒಳಗಾಗಬೇಕಾಗುತ್ತದೆ. ಎಲ್ಲ ಪಕ್ಷಗಳ ನಾಯಕರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ನನ್ನ ಹೋರಾಟ ಪಕ್ಷಗಳ ವಿರುದ್ಧ ಅಲ್ಲ. ನಾಯಕರ ದುರಂಹಕಾರದ ವಿರುದ್ದ ಅಷ್ಟೇ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.