ADVERTISEMENT

ಸಿಎಂ ಜೊತೆ ಚರ್ಚೆಗೆ ಅವಕಾಶ: ಎಸ್ಪಿ ಭರವಸೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2025, 5:49 IST
Last Updated 5 ಡಿಸೆಂಬರ್ 2025, 5:49 IST
ನವಲಗುಂದ ಪೊಲೀಸ್ ಠಾಣೆಯಲ್ಲಿ ರೈತರೊಂದಿಗೆ ಎಸ್ಪಿ ಗುಂಜನ್‌ ಆರ್ಯ, ತಹಶೀಲ್ದಾರ್‌ ಸುಧೀರ ಸಾಹುಕಾರ ಸಭೆ ನಡೆಸಿದರು
ನವಲಗುಂದ ಪೊಲೀಸ್ ಠಾಣೆಯಲ್ಲಿ ರೈತರೊಂದಿಗೆ ಎಸ್ಪಿ ಗುಂಜನ್‌ ಆರ್ಯ, ತಹಶೀಲ್ದಾರ್‌ ಸುಧೀರ ಸಾಹುಕಾರ ಸಭೆ ನಡೆಸಿದರು   

ನವಲಗುಂದ: ಶಾಸಕ ಎನ್.ಎಚ್.ಕೋನರಡ್ಡಿ ಅವರು ಪಟ್ಟಣದಲ್ಲಿ ಡಿ.7ರಂದು ಆಯೋಜಿಸಿರುವ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌  ಅವರ ಜೊತೆ ಚರ್ಚಿಸಲು ರೈತ ಮುಖಂಡರಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಗುಂಜನ್‌ ಆರ್ಯ ಭರವಸೆ ನೀಡಿದರು.

ಹಲವು ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಸಿಎಂ ಅವರಿಗೆ ಕಪ್ಪು ಪಟ್ಟಿ ತೋರಿಸಿ, ಪ್ರತಿಭಟನೆ ನಡೆಸಲು ರೈತ ಮುಖಂಡರು ಮುಂದಾಗಿದ್ದರು. ಇದನ್ನು ಅರಿತ ಎಸ್ಪಿ ಅವರು ಬುಧವಾರ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ರೈತರ ಮುಖಂಡರೊಂದಿಗೆ ಚರ್ಚೆ ನಡೆಸಿದರು. 

‘ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಆಗಮಿಸುತ್ತಿರುವುದರಿಂದ  ಯಾವುದೇ ಕಾರಣಕ್ಕೂ ಪ್ರತಿಭಟನೆ ನಡೆಸಲು ಅವಕಾಶವಿರುವುದಿಲ್ಲ. ಹೀಗಾಗಿ ರೈತರು ತಮ್ಮ  ಸಮಸ್ಯೆಗಳನ್ನು ಸಿಎಂ ಅವರ ಗಮನಕ್ಕೆ ತರಲು ಬಯಸಿದರೆ ಅವರನ್ನು ಭೇಟಿ ಮಾಡಲು  ಅವಕಾಶ ಒದಗಿಸಲು ಪ್ರಯತ್ನಿಸುತ್ತೇನೆ’ ಎಂದು ಭರವಸೆ ನೀಡಿದರು.

ADVERTISEMENT

ರೈತ ಮುಖಂಡ ಲೋಕನಾಥ ಹೆಬಸೂರ ಅವರು ಎಸ್ಪಿ ಅವರ ಸಲಹೆಗೆ ಸಹಮತ ವ್ಯಕ್ತ ಪಡಿಸಿದರು. ರೈತರಿಗೆ ಕಳೆದ 2 ವರ್ಷಗಳಿಂದ ಬೆಳೆ ಪರಿಹಾರ ಹಾಗೂ ಬೆಳೆ ವಿಮೆ ಬಂದಿಲ್ಲ, ಕೂಡಲೇ ಬಿಡುಗಡೆಗೊಳಿಸಲು ಕ್ರಮಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಅವರನ್ನು ಆಗ್ರಹಿಸಿದರು.

ಗೋವಿನಜೋಳ ಹಾಗೂ ಹೆಸರು ಬೆಳೆಯನ್ನು ಬೆಂಬಲ ಬೆಲೆಯಡಿ ಖರೀದಿಸಲು ಸೂಚಿಸಲಾಗಿದ್ದರೂ ಇದುವರೆಗೂ ಹೆಸರು ಬೆಳೆ ಖರೀದಿಸಲು ಅಧಿಕಾರಿಗಳು ನಿರಾಕರಿಸುತ್ತಿದ್ದಾರೆ. ಕೂಡಲೇ ಹೆಸರು ಖರೀದಿಸಲು ಸೂಚಿಸಬೇಕು ಎಂದು ಒತ್ತಾಯಿಸಿದರು. 

ಹಿಂಗಾರು ಹಂಗಾಮಿನ ಪ್ರಮುಖ ಬೆಳೆಯಾದ ಕಡಲೆಗೆ ₹8ಸಾವಿರ ಬೆಂಬಲ ಬೆಲೆ ನಿಗದಿ ಪಡಿಸಬೇಕು ಎಂದು ಆಗ್ರಹಿಸಿದರು.

ಹೆಚ್ಚುವರಿ ಎಸ್‍ಪಿ ಶಿವಾನಂದ ಕಟಗಿ, ಡಿವೈಎಸ್ಪಿ ವಿನೋದ ಮುಕ್ತೇದಾರ, ತಹಶೀಲ್ದಾರ್‌ ಸುಧೀರ ಸಾಹುಕಾರ, ಸಿಪಿಐ ರವಿ ಕಪ್ಪತ್ತನವರ, ಪಿಎಸ್‍ಐ ಜನಾರ್ಧನ, ರೈತ ಮುಖಂಡರಾದ ಸುಭಾಸಚಂದ್ರಗೌಡ ಪಾಟೀಲ, ರಘುನಾಥ ನಡುವಿನಮನಿ, ಯಲ್ಲಪ್ಪ ದಾಡಿಬಾವಿ, ಶಿರಾಜ ಧಾರವಾಡ, ನಿಂಗಪ್ಪ ಕೆಳಗೇರಿ, ರೈತ ಮುಖಂಡರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.