ADVERTISEMENT

ಉತ್ತಮ ತಲಾದಾಯ; ರಾಜ್ಯದ ಹೆಗ್ಗಳಿಕೆ: ಸಚಿವ ಸಂತೋಷ ಲಾಡ್‌

ಕಾಮಗಾರಿಗಳಿಗೆ ಭೂಮಿಪೂಜೆ: ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2025, 4:43 IST
Last Updated 6 ಅಕ್ಟೋಬರ್ 2025, 4:43 IST
ಹುಬ್ಬಳ್ಳಿಯ 34ನೇ ವಾರ್ಡ್‌ನಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಸಚಿವ ಸಂತೋಷ ಲಾಡ್‌ ಅವರು ಫಲಾನುಭವಿಗಳಿಗೆ ಹೊಲಿಗೆಯಂತ್ರ ವಿತರಿಸಿದರು
ಹುಬ್ಬಳ್ಳಿಯ 34ನೇ ವಾರ್ಡ್‌ನಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಸಚಿವ ಸಂತೋಷ ಲಾಡ್‌ ಅವರು ಫಲಾನುಭವಿಗಳಿಗೆ ಹೊಲಿಗೆಯಂತ್ರ ವಿತರಿಸಿದರು   

ಹುಬ್ಬಳ್ಳಿ: ‘ತಲಾದಾಯದಲ್ಲಿ ಕರ್ನಾಟಕವು ದೇಶದಲ್ಲೇ ಮೊದಲ ಸ್ಥಾನದಲ್ಲಿದ್ದು, ವ್ಯಕ್ತಿಯ ವಾರ್ಷಿಕ ಸರಾಸರಿ ಆದಾಯ ₹2.02 ಲಕ್ಷ ಆಗಿದೆ. ಆದರೆ, ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಈ ಪ್ರಮಾಣ ಕಡಿಮೆ ಇದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಹೇಳಿದರು.

ನಗರದ 34ನೇ ವಾರ್ಡ್‌ನಲ್ಲಿ ಹು–ಧಾ ಮಹಾನಗರ ಪಾಲಿಕೆ, ಲೋಕೋಪಯೋಗಿ ಇಲಾಖೆ ಹಾಗೂ ಹೆಸ್ಕಾಂ ವತಿಯಿಂದ ಭಾನುವಾರ ಆಯೋಜಿಸಿದ್ದ ₹10 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳ ಭೂಮಿಪೂಜೆ ಹಾಗೂ ಫಲಾನುಭವಿಗಳಿಗೆ ಉಚಿತವಾಗಿ‌ ಹೊಲಿಗೆಯಂತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ವರ್ಷಕ್ಕೆ ₹60 ಸಾವಿರ ಕೋಟಿಯನ್ನು ಗ್ಯಾರಂಟಿ ಯೋಜನೆಗಳ ಮೂಲಕ ಜನರಿಗೆ ನೀಡುತ್ತಿದೆ. ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಬೊಕ್ಕಸ ಖಾಲಿಯಾಗಲಿದೆ ಎಂದು ಟೀಕಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರೇ ಬಿಹಾರ ಚುನಾವಣೆ ಹಿನ್ನೆಲೆಯಲ್ಲಿ ಮಹಿಳೆಯರಿಗಾಗಿ ₹7,500 ಕೋಟಿ ಮೊತ್ತದ ಯೋಜನೆ ಘೋಷಿಸಿದ್ದಾರೆ. ಸೋಲಿನ ಭಯ ಅವರನ್ನು ಕಾಡುತ್ತಿದ್ದು, ‘ಮತ ಕಳವು’ ಪ್ರಕರಣ ಮುಚ್ಚಿಹಾಕಲೂ ಯತ್ನಿಸುತ್ತಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

‘ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದ ಕಾಲದಲ್ಲೇ ದೇಶದ ಜಿಡಿಪಿ ಶೇ 8.5ರಷ್ಟಿತ್ತು. ಸದ್ಯ ದೇಶದ ಜನಸಂಖ್ಯೆ 145 ಕೋಟಿ ಇದ್ದು, ಅವರ ವಹಿವಾಟು ಪ್ರಮಾಣ ಆಧರಿಸಿ 4 ಟ್ರಿಲಿಯನ್ ಡಾಲರ್‌ ಆರ್ಥಿಕತೆ ಸಾಧ್ಯವಾಗಿದೆ. ಇದರಲ್ಲಿ ಬಿಜೆಪಿ ಸಾಧನೆ ಏನೂ ಇಲ್ಲ. ಜಿಡಿಪಿ ಮಾನದಂಡ ತಿದ್ದುಪಡಿ ಮಾಡಿದರೂ ಪ್ರಗತಿ ಕಾಣಲಿಲ್ಲ’ ಎಂದು ಟೀಕಿಸಿದರು.

‘ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಕೋಮುಗಲಭೆ ಬಿಟ್ಟರೆ ಅಭಿವೃದ್ಧಿ ಆಗುತ್ತಿಲ್ಲ. ಬಿಹಾರದಲ್ಲಿ ತಲಾದಾಯ ₹43 ಸಾವಿರ ಇದೆ. ಸಿಎಜಿ ವರದಿಯಂತೆ ₹70 ಸಾವಿರ ಕೋಟಿಯ ಲೆಕ್ಕವೇ ಸಿಗುತ್ತಿಲ್ಲ. ದೇಶದ‌ ಸಾಲ ₹200 ಲಕ್ಷ ಕೋಟಿಗೂ ಹೆಚ್ಚಿದೆ. ಚಿನ್ನ, ಇಂಧನ ದರ ಏರಿಕೆಯಾಗಿದ್ದು, ಡಾಲರ್‌ ಎದುರು ರೂಪಾಯಿ ಮೌಲ್ಯ ಕುಸಿತವಾಗಿದೆ’ ಎಂದರು.

ಕಾಂಗ್ರೆಸ್‌ ಮುಖಂಡ ನಾಗರಾಜ ಗೌರಿ ಪ್ರಾಸ್ತಾವಿಕ ಮಾತನಾಡಿ, ‘1.2 ಕಿ.ಮೀ. ಉದ್ದದ ದೇವರಗುಡಿಹಾಳ ರಸ್ತೆ ಅಭಿವೃದ್ಧಿ, ಸುರಕ್ಷಿತ ಹೈಟೆನ್ಷನ್ ವೈರ್ ಅಳವಡಿಕೆ, ಒಳಚರಂಡಿ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ ಘಾಳಿ, ಸಿದ್ಧಾರೂಢ ಮಠ ಟ್ರಸ್ಟ್ ಅಧ್ಯಕ್ಷ ಚನ್ನವೀರ ಮುಂಗರವಾಡಿ, ಕಾಂಗ್ರೆಸ್ ಮಹಾನಗರ ಘಟಕದ ಅಧ್ಯಕ್ಷ ಅಲ್ತಾಫ್ ಹಳ್ಳೂರ, ಗ್ರಾಮೀಣ ಘಟಕದ ಅಧ್ಯಕ್ಷ ಅನಿಲಕುಮಾರ ಪಾಟೀಲ, ಪಾಲಿಕೆ ಸದಸ್ಯೆ ಮಂಗಳಮ್ಮ‌ಗೌರಿ, ಮುಸ್ತಾಕ್ ಸುನಕೆ, ಅಬ್ದುಲ್‌ ಮುಲ್ಲ, ಅಲಾಭಕ್ಷ್ ಶಿರೂರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತ ಕರೂರ, ದೀಪಾ ಗೌರಿ ಇದ್ದರು.

ರಾಜಕಾರಣಿಗಳ ಜೀವನ ಸುಲಭವಲ್ಲ. ಸಂಘಟನೆ ಜನರ ಕಷ್ಟ– ಸುಖದಲ್ಲಿ ಭಾಗಿಯಾಗುವುದರ ಜತೆಗೆ ಕ್ಷೇತ್ರಕ್ಕೆ ಬೇಕಾದ ಅನುದಾನ ತರುವುದು ಸವಾಲಿನ ಕೆಲಸ. ಅದಕ್ಕಾಗಿ ಹೋರಾಡಬೇಕಾಗುತ್ತದೆ
ಸಂತೋಷ ಲಾಡ್‌ ಜಿಲ್ಲಾ ಉಸ್ತುವಾರಿ ಸಚಿವ

‘ಜಿಎಸ್‌ಟಿ ಇಳಿಕೆ; ಇನ್ನೂ ಅಸ್ಪಷ್ಟ’ ‘ರಾಹುಲ್ ಗಾಂಧಿ ಅವರು ಶೇ 18ಕ್ಕಿಂತ ಹೆಚ್ಚು ಜಿಎಸ್‌ಟಿ ಬೇಡವೆಂದು ಮೊದಲೇ ಆಕ್ಷೇಪ ವ್ಯಕ್ತಪಡಿಸಿದ್ದರು. ಹೆಚ್ಚಿಗೆ ಇದ್ದ ಜಿಎಸ್‌ಟಿ ಪ್ರಮಾಣವನ್ನು ಕಡಿಮೆ ಮಾಡಿ ಅದಕ್ಕೆ ಪೂರಕವಾಗಿ ಬಚತ್‌ ಉತ್ಸವ ಯೋಜನೆಯನ್ನೂ ಜಾರಿ ಮಾಡಲಾಗಿದೆ. ಜಿಎಸ್‌ಟಿ ಕಡಿಮೆ ಮಾಡಿದರೂ ಬಹಳಷ್ಟು ವಸ್ತುಗಳಿಗೆ ಇನ್‌ಪುಟ್‌ ಸಬ್ಸಿಡಿ ನೀಡಿಲ್ಲ. ಕಚ್ಚಾ ವಸ್ತುಗಳ ದರ ಹೆಚ್ಚಳವಾಗಿದೆ. ಹೀಗಾಗಿ ಜಿಎಸ್‌ಟಿ ವಿಚಾರದಲ್ಲಿ ಇನ್ನೂ ಸ್ಪಷ್ಟತೆ ಇಲ್ಲ’ ಎಂದು ಸಚಿವ ಸಂತೋಷ ಲಾಡ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.