ADVERTISEMENT

ಬೀದಿ ದಾಸಯ್ಯನನ್ನು ಸಿ.ಎಂ ಮಾಡಿದರೂ ಒಪ್ಪುತ್ತೇವೆ: ವಸತಿ ಸಚಿವ ಜಮೀರ್

​ಪ್ರಜಾವಾಣಿ ವಾರ್ತೆ
Published 17 ಜನವರಿ 2026, 8:38 IST
Last Updated 17 ಜನವರಿ 2026, 8:38 IST
ಜಮೀರ್ ಅಹಮದ್ ಖಾನ್
ಜಮೀರ್ ಅಹಮದ್ ಖಾನ್   

ಹುಬ್ಬಳ್ಳಿ: ‘ರಾಜ್ಯದಲ್ಲಿ 2028ರವರೆಗೆ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ. ಮುಖ್ಯಮಂತ್ರಿ ಬದಲಾವಣೆ ಮಾಡಲು ಹೈಕಮಾಂಡ್‌ನಿಂದ ಮಾತ್ರ ಸಾಧ್ಯ. ಹೈಕಮಾಂಡ್‌, ಬೀದಿ ದಾಸಯ್ಯನನ್ನು ಮುಖ್ಯಮಂತ್ರಿ ಮಾಡಿದರೂ ನಾವು ಒಪ್ಪುತ್ತೇವೆ’ ಎಂದು ಸಚಿವ ಜಮೀರ್ ಅಹ್ಮದ್ ಹೇಳಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈ ವಿಷಯದಲ್ಲಿ ನಾವು ನಮ್ಮ ಅಭಿಪ್ರಾಯ ಹೇಳಿದ್ದೇವೆ. ಅಂತಿಮವಾಗಿ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತದೆ. ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಿದರೂ ಸ್ವಾಗತ’ ಎಂದರು.

‘ನವೆಂಬರ್ ಕ್ರಾಂತಿ ಆಗುತ್ತದೆ ಬಿಜೆಪಿಯವರು ಹೇಳಿದ್ದರು. ಈಗ ಸಂಕ್ರಾಂತಿ ಹಬ್ಬವೂ ಮುಗಿದಿದೆ. ಅವರು ಯುಗಾದಿ ಹಬ್ಬಕ್ಕೆ ಕಾಯುತ್ತಿದ್ದಾರೆ. ಆದರೆ, ಏನೂ ಆಗುವುದಿಲ್ಲ’ ಎಂದು ಹೇಳಿದರು.

ADVERTISEMENT

ರಾಜಕೀಯ ನಿವೃತ್ತಿ ಪಡೆಯುವೆ; ಸವಾಲು: ‘ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ (2019ರಿಂದ 2023) ಕೊಳೆಗೇರಿ ಅಭಿವೃದ್ಧಿ ಮಂಡಳಿಯಿಂದ ಒಂದೇ ಒಂದು ಮನೆ ನಿರ್ಮಿಸಿ ಕೊಟ್ಟಿರುವುದನ್ನು ಸಾಬೀತುಪಡಿಸಿದರೆ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ರಾಜಕೀಯ ನಿವೃತ್ತಿ ಪಡೆಯುತ್ತೇನೆ’ ಎಂದು ಜಮೀರ್ ಅಹ್ಮದ್‌ ಖಾನ್‌ ಸವಾಲು ಹಾಕಿದರು.

‘ನಮ್ಮ ಸರ್ಕಾರ ಯಾವ ಜಿಲ್ಲೆಗಳಲ್ಲಿ ಎಷ್ಟು ಮನೆಗಳನ್ನು ನಿರ್ಮಿಸಿದೆ ಎಂಬುದನ್ನು ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಅವರು ಹೋಗಿ ಪರಿಶೀಲಿಸಲಿ’ ಎಂದರು.

‘ನಮಗೆ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡುವ ಒತ್ತಡವಿದೆ. ಆದರೆ, ಬಿಜೆಪಿ ಸರ್ಕಾರ ಇದ್ದಾಗ ಯಾವುದೇ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿರಲಿಲ್ಲ. ಆದರೂ ಮನೆಗಳನ್ನು ನಿರ್ಮಿಸಲು ಅವರಿಗೆ ಏಕೆ ಸಾಧ್ಯವಾಗಲಿಲ್ಲ’ ಎಂದು ಪ್ರಶ್ನಿಸಿದರು.

‘ಬಳ್ಳಾರಿಯಲ್ಲಿ ಸಣ್ಣ ಬ್ಯಾನರ್ ಕಟ್ಟುವ ವಿಚಾರಕ್ಕೆ ಗಲಾಟೆ ನಡೆಯಿತು. ಜನಾರ್ದನ ರೆಡ್ಡಿ ಅವರು ದೊಡ್ಡ ಮನಸ್ಸು ಮಾಡಿ ಬ್ಯಾನರ್‌ ಕಟ್ಟಲು ಅವಕಾಶ ಮಾಡಿಕೊಟ್ಟಿದ್ದರೆ ಗಲಾಟೆ ಆಗುತ್ತಿರಲಿಲ್ಲ. ಬಳ್ಳಾರಿಯಲ್ಲಿ ವಾಲ್ಮೀಕಿ ಪ್ರತಿಮೆ ನಿರ್ಮಿಸಬೇಕು ಎಂಬುದು ಬಹು ದಿನಗಳ ಬೇಡಿಕೆಯಾಗಿತ್ತು. ಅದನ್ನು ಬಿಜೆಪಿಯವರಿಗೆ ಮಾಡಲು ಸಾಧ್ಯವಾಗಿರಲಿಲ್ಲ. ಶಾಸಕ ಭರತ್‌ ರೆಡ್ಡಿ ಅವರು ಪ್ರತಿಮೆ ನಿರ್ಮಿಸಿದರು. ಅದನ್ನು ಅವರಿಗೆ ಸಹಿಲು ಸಾಧ್ಯವಾಗಲಿಲ್ಲ’ ಎಂದರು.

‘ಬಳ್ಳಾರಿಯಲ್ಲಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆ ವಿರುದ್ಧ ನಾವು ಪಾದಯಾತ್ರೆ ಮಾಡಿದ್ದೆವು. ಈಗ ಬಿಜೆಪಿಯವರು ಯಾವ ಉದ್ದೇಶಕ್ಕೆ ಪಾದಯಾತ್ರೆ ಮಾಡುತ್ತಾರೆ’ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.