ADVERTISEMENT

ರಾಜ್ಯ ಸರ್ಕಾರದ ಸಾಧನೆಗಳ ಬಗ್ಗೆ ಶ್ವೇತ ಪತ್ರ ಹೊರಡಿಸಿ: ಉಗ್ರಪ್ಪ ಒತ್ತಾಯ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2022, 6:45 IST
Last Updated 27 ನವೆಂಬರ್ 2022, 6:45 IST
ವಿ.ಎಸ್. ಉಗ್ರಪ್ಪ
ವಿ.ಎಸ್. ಉಗ್ರಪ್ಪ   

ಹುಬ್ಬಳ್ಳಿ: ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಚುನಾವಣೆ ಬರುತ್ತಿದ್ದಂತೆ ವಿಧಾನಸೌಧ ಬಿಟ್ಟು, ಸಂಕಲ್ಪ ಯಾತ್ರೆ ಹೆಸರಿನಲ್ಲಿ ರಾಜ್ಯ ಸಂಚಾರ ಮಾಡುತ್ತಿರುವ ಅವರ ಸಾಧನೆ ಶೂನ್ಯ. ಅವರೇನಾದರೂ ಸಾಧನೆ ಮಾಡಿದ್ದರೆ ಶ್ವೇತಪತ್ರ ಹೊರಡಿಸಲಿ ಎಂದು ಕೆಪಿಸಿಸಿ ವಕ್ತಾರ ವಿ.ಎಸ್. ಉಗ್ರಪ್ಪ ಒತ್ತಾಯಿಸಿದರು.

ಎಲ್ಲಾ ಇಲಾಖೆಗಳಲ್ಲಿ ಶೇ 40ರಷ್ಟು ಭ್ರಷ್ಟಾಚಾರ, 540 ಸಬ್ ಇನ್ಸ್ಪೆಕ್ಟರ್ ನೇಮಕಾತಿ ಹಗರಣ, ಮತದಾರರ ಪಟ್ಟಿಯಲ್ಲಿ ಗೋಲ್ ಮಾಲ್, ಪರೀಕ್ಷೆಗಳಲ್ಲಿ ಅಕ್ರಮ, ಕೋವಿಡ್-19 ನಿರ್ವಹಣೆಯಲ್ಲಿ ವಿಫಲ, ಜಾತಿ ಮತ್ತು ಧರ್ಮದಂತಹ ಭಾವನಾತ್ಮಕ ವಿಷಯಗಳಲ್ಲಿ ಸಮಾಜದ ವಿಭಜನೆಯೇ ಬೊಮ್ಮಾಯಿ‌ ಅವರ ಸಾಧನೆ ಎಂದು ನಗರದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಬಿಜೆಪಿ ಹೈಕಮಾಂಡ್ ಮುಖ್ಯಮಂತ್ರಿಗೆ 150 ಸೀಟು ಗೆಲ್ಲಬೇಕೆಂಬ ಟಾರ್ಗೆಟ್ ಕೊಟ್ಟಿದ್ದಾರೆ. ಅದಕ್ಕಾಗಿ ಬೊಮ್ಮಾಯಿ ಹುಮ್ಮಸ್ಸಿನಿಂದ ಪ್ರಯತ್ನ ಮಾಡುತ್ತಿದ್ದಾರೆ. ರಾಜ್ಯದಲ್ಲಿಯೂ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವುದಾಗಿ ಹೇಳಿರುವ ಅವರು, ರಾಜ್ಯದಲ್ಲಿ ತಾಂಡವಾಡುತ್ತಿರುವ ಭ್ರಷ್ಟಾಚಾರ ತಡೆಗೆ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರು.

ADVERTISEMENT

ದೇಶ ಮತ್ತು ರಾಜ್ಯದಲ್ಲಿ ಡಬಲ್ ಎಂಜಿನ್ ಸರ್ಕಾರ ಇದ್ದರೂ ವಿಫಲವಾಗಿದೆ. ಅಧಿಕಾರಕ್ಕೆ ಬರುವ ಮುಂಚೆ ಪ್ರಧಾನಿ ಮೋದಿ ಅವರು, ಪ್ರತಿ ವರ್ಷ 2 ಕೋಟಿಗೂ ಅಧಿಕ ಉದ್ಯೋಗ ಸೃಷ್ಟಿ ಭರವಸೆ ಹುಸಿಯಾಗಿದೆ. ಅಗತ್ಯ ವಸ್ತುಗಳ ಬೆಲೆ ಗಗಕಕ್ಕೇರಿದೆ. ಹೊಸ ನೀರಾವರಿ ಯೋಜನೆಗಳಿಲ್ಲ. ಎರಡೂ ಸರ್ಕಾರಗಳು ತಮ್ಮ ಜವಾಬ್ದಾರಿ ನಿಭಾಯಿಸುವಲ್ಲಿ ವಿಫಲವಾಗಿವೆ. ಭಾವನಾತ್ಮಕ ವಿಷಯಗಳನ್ನು ಇಟ್ಟುಕೊಂಡು ಜನರನ್ನು ದಾರಿ ತಪ್ಪಿಸುತ್ತಿವೆ ಎಂದು ಹರಿಹಾಯ್ದರು.

ಪ್ರಧಾನಿ ಮೋದಿ ಅವರು ನಾನು ತಿನ್ನೋದಿಲ್ಲ, ತಿನ್ನೋರಿಗೆ ಬಿಡೋದಿಲ್ಲ ಎಂದು ಹೇಳುತ್ತಾರೆ. ಆದರೆ ಬಿಜೆಪಿಯ ಸಚಿವರಾದ ಡಾ. ಸುಧಾಕರ, ಆನಂದ ಸಿಂಗ್ ವಿರುದ್ಧ ಭ್ರಷ್ಟಾಚಾರದಡಿ ಪ್ರಕರಣ ದಾಖಲಾಗಿವೆ. ಇನ್ನೊಬ್ಬ ಸಾರಿಗೆ ಸಚಿವ ಶ್ರೀರಾಮುಲು ಮೇಲೆ, ಜಮೀನು‌ ಕಬಳಿಕೆ ಆರೋಪದಡಿ ಆರು ಸಾವಿರ ಪುಟಗಳ ಆರೋಪ ಪಟ್ಟಿ ಸಲ್ಲಿಕೆಯಾಗಿದೆ. ಈ ಬಗ್ಗೆ ಬಿಜೆಪಿ ಮುಖಂಡರು ಮಾತನಾಡಲಿ ಎಂದು ಕುಟುಕಿದರು.

ರಾಜ್ಯ ಬಿಜೆಪಿ ಸರ್ಕಾರ ಪರಿಶಿಷ್ಟ ವರ್ಗ, ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಹೆಚ್ಚಿಸಿದ್ದನ್ನೇ ದೊಡ್ಡ ಸಾಧನೆ ಎಂದುಕೊಂಡು ಬಳ್ಳಾರಿಯಲ್ಲಿ ಸಮಾವೇಶ ಮಾಡಿದ್ದಾರೆ. ಬಿಜೆಪಿಗೆ ಸಾಮಾಜಿಕ ನ್ಯಾಯಕ್ಕೆ ಏನೂ ಸಂಬಂಧ? ಇದೇ ಬಿಜೆಪಿ ಮುಖಂಡರು ಈ ಹಿಂದೆ ಸಂವಿಧಾನ ಕಿತ್ತು ಎಸೆಯುವಂತೆ ಮಾತನಾಡಿದ್ದರು. ಮೀಸಲಾತಿ ಕಿತ್ತು ಹಾಕಬೇಕೆಂದು ಆರ್.ಎಸ್.ಎಸ್ ನ ಪ್ರಮುಖರು ಹೇಳಿದ್ದರು. ಆದರೆ ಕಾಂಗ್ರೆಸ್ ಹಿಂದೂ ವಿರೋಧ ಅಲ್ಲ ಎಲ್ಲರನ್ನೂ ಸಮಾನವಾಗಿ ನೋಡುವ ಪಕ್ಷ ಎಂದರು.

ಇನ್ನು ಸಚಿವ ಬಿ.ಶ್ರೀರಾಮುಲು ಬಾಯಿಗೆ ಬಂದಂತೆ ಕಾಂಗ್ರೆಸ್ ಹೈಕಮಾಂಡ್, ರಾಜ್ಯದ ಮುಖಂಡರ ಬಗ್ಗೆ ಮಾತನಾಡಿ, ತಾವು ಬಹುದೊಡ್ಡ ಸಾಧನೆ ಮಾಡಿದ ಹಾಗೇ ಬಿಂಬಿಸಿಕೊಳ್ಳತ್ತಾರೆ. ಶ್ರೀರಾಮುಲು ಕೂಡ ಸೋತವರೇ. ಹಿಂದೆ ಬಳ್ಳಾರಿ ಬಿಟ್ಟು, ಬಾದಾಮಿ ಮತ್ತು ಮೊಳಕಾಲ್ಮೂರಿಗೆ ಹೋಗಿದ್ದಾರೆ. ಹೀಗಿರುವಾಗ ಇನ್ನೊಬ್ಬರ ಸೋಲಿನ ಬಗ್ಗೆ ಮಾತನಾಡುವುದು ತಪ್ಪು. ಶ್ರೀರಾಮುಲು ಅವರೇ ನೀವು ಏನಾದರೂ ಸಾಧನೆ ಮಾಡಿದ್ದರೆ ಮೊಳಕಾಲ್ಮೂರಿನಲ್ಲೇ ಜನಾದೇಶ ಪಡೆಯಿರಿ. ನಮ್ಮ ಪಕ್ಷದ ಮುಖಂಡರು ತಿಳಿಸಿದರೆ, ನಾನೇ ನಿಮ್ಮ ವಿರುದ್ಧ ಸ್ಪರ್ಧೆ ಮಾಡುತ್ತೇನೆ ಎಂದು ಸವಾಲು ಹಾಕಿದರು.

ಪಕ್ಷದ ಮುಖಂಡರಾದ ಪುಟ್ಟಸ್ವಾಮಿ, ಅನಿಲಕುಮಾರ ಪಾಟೀಲ, ಪಿ.ಎಚ್.ನೀರಲಕೇರಿ, ಸದಾನಂದ ಡಂಗನವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.