ಹುಬ್ಬಳ್ಳಿ: 'ನಾಲ್ಕು ಸಾರಿಗೆ ನಿಗಮಗಳ ನೌಕರರ ವೇತನ ಪರಿಷ್ಕರಣೆ ಹಾಗೂ ಪರಿಷ್ಕರಣೆ ವೇತನ ಬಾಕಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಗಸ್ಟ್ 5ರಿಂದ ರಾಜ್ಯದಾದ್ಯಂತ ಬಸ್ ಸಂಚಾರ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಲಾಗಿದೆ' ಎಂದು ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯ ಸದಸ್ಯ ಆರ್.ಎಫ್. ಕವಳಿಕಾಯಿ ಹೇಳಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಆಗಸ್ಟ್ 4ರ ಒಳಗೆ ಸರ್ಕಾರ ಸಂಘಟನೆಗಳ ಜೊತೆ ಚರ್ಚಿಸಿ ಬೇಡಿಕೆ ಈಡೇರಿಸಲು ಒಪ್ಪಿಗೆ ನೀಡಿದರೆ, ಮುಷ್ಕರ ಹಿಂಪಡೆಯಲು ಸಿದ್ಧರಿದ್ದೇವೆ. ಹಠಕ್ಕೆ ಬಿದ್ದರಂತೂ ನಾವಂತೂ ಹಿಂದೆ ಸರಿಯುವುದಿಲ್ಲ. ನಾಲ್ಕು ಸಾರಿಗೆ ನಿಗಮದ ಎಲ್ಲ ಸಂಘಟನೆಗಳು ಹಾಗೂ ಎಐಟಿಸಿ ಸೇರಿದಂತೆ ಇತರೆ ಸಂಘಟನೆಗಳು ನಮಗೆ ಬೆಂಬಲ ವ್ಯಕ್ತಪಡಿಸಿವೆ. ಬೇಡಿಕೆ ಈಡೇರುವವರೆಗೂ ಮುಷ್ಕರ ಕೈ ಬಿಡುವುದಿಲ್ಲ' ಎಂದು ಎಚ್ಚರಿಸಿದರು.
'ಒಂದೇ ಒಂದು ಬಸ್ ಸಹ ರಸ್ತೆಗೆ ಇಳಿಯುವುದಿಲ್ಲ. ಎಸ್ಮಾ ಜಾರಿ ಮಾಡಿದರೂ ನಾವು ಎದುರಿಸುತ್ತೇವೆ. ಅದು ಸರ್ಕಾರಕ್ಕೆ ತಿರುಗು ಬಾಣವಾಗಲಿದೆ. ಖಾಸಗಿ ಬಸ್‌ಗಳ ಮಾಲೀಕರನ್ನು ಸಹ ವಿಶ್ವಾಸಕ್ಕೆ ಪಡೆದು, ಬೆಂಬಲಿಸುವಂತೆ ವಿನಂತಿಸುತ್ತಿದ್ದೇವೆ. ಸಾರ್ವಜನಿಕರು ಸಹ ಸಹಕರಿಸಬೇಕು' ಎಂದು ವಿನಂತಿಸಿದರು.
'2020ರಿಂದ ಶೇ 15ರ ವೇತನ ಪರಿಷ್ಕರಣೆಯ 38 ತಿಂಗಳ ಬಾಕಿ ಹಣವನ್ನು ಕೂಡಲೇ ಪಾವತಿಸಬೇಕು. 2023ರಲ್ಲಿದ್ದ ನೌಕರರ ಮೂಲ ವೇತನಕ್ಕೆ ಶೇ 31ರಷ್ಟು ತುಟ್ಟಿ ಭತ್ಯೆ ವಿಲೀನಗೊಳಿಸಿ, 2024ರಿಂದ ಶೇ 25ರಷ್ಟು ವೇತನ ಹೆಚ್ಚಿಸಬೇಕು' ಎಂದು ಆಗ್ರಹಿಸಿದರು.
ಸಾರಿಗೆ ಸಂಘಟನೆ ಪದಾಧಿಕಾರಿಗಳಾದ ಹನುಮಂತ ಭೋಜಗಾರ, ರಂಗಪ್ಪ ತಳವಾರ, ಜಿ.ಎಚ್. ಯಾವಗಲ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.