ADVERTISEMENT

ಮೊದಲ ಜಯದ ನಿರೀಕ್ಷೆಯಲ್ಲಿ ಕರ್ನಾಟಕ

19 ವರ್ಷದ ಒಳಗಿನವರ ಕೂಚ್‌ ಬೆಹಾರಿ ಟ್ರೋಫಿ ಕ್ರಿಕೆಟ್‌

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2019, 9:55 IST
Last Updated 27 ಡಿಸೆಂಬರ್ 2019, 9:55 IST
ಜಾರ್ಖಂಡ್‌ ವಿರುದ್ಧದ ರಣಜಿ ಪಂದ್ಯಕ್ಕೆ ಅಭ್ಯಾಸ ನಡೆಸಿದ ಕರ್ನಾಟಕ ತಂಡದ ಆಟಗಾರರು –ಪ್ರಜಾವಾಣಿ ಚಿತ್ರ/ತಾಜುದ್ದೀನ್‌ ಆಜಾದ್‌
ಜಾರ್ಖಂಡ್‌ ವಿರುದ್ಧದ ರಣಜಿ ಪಂದ್ಯಕ್ಕೆ ಅಭ್ಯಾಸ ನಡೆಸಿದ ಕರ್ನಾಟಕ ತಂಡದ ಆಟಗಾರರು –ಪ್ರಜಾವಾಣಿ ಚಿತ್ರ/ತಾಜುದ್ದೀನ್‌ ಆಜಾದ್‌   

ಹುಬ್ಬಳ್ಳಿ: ಹಿಂದಿನ ನಾಲ್ಕೂ ಪಂದ್ಯಗಳಲ್ಲಿ ಡ್ರಾ ಸಾಧಿಸಿರುವ ಕರ್ನಾಟಕ ತಂಡ, 19 ವರ್ಷದ ಒಳಗಿನವರ ಕೂಚ್‌ ಬೆಹಾರಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಚೊಚ್ಚಲ ಗೆಲುವಿನ ನಿರೀಕ್ಷೆಯಲ್ಲಿದೆ. ಇದಕ್ಕಾಗಿ ಜಾರ್ಖಂಡ್‌ ಎದುರು ವೇದಿಕೆ ಸಿದ್ಧಗೊಂಡಿದೆ.

ಇಲ್ಲಿನ ರಾಜನಗರದ ಕೆ.ಎಸ್‌.ಸಿ.ಎ. ಕ್ರೀಡಾಂಗಣದಲ್ಲಿ ಶುಕ್ರವಾರ ನಾಲ್ಕು ದಿನಗಳ ಪಂದ್ಯ ಆರಂಭವಾಗಲಿದೆ. ಇದೇ ಕ್ರೀಡಾಂಗಣದಲ್ಲಿ ಇತ್ತೀಚಿಗಷ್ಟೇ ಕರ್ನಾಟಕ ಹಾಗೂ ಉತ್ತರ ಪ್ರದೇಶ ತಂಡಗಳು ರಣಜಿ ಪಂದ್ಯವಾಡಿದ್ದವು. ಈಗ ಮತ್ತೊಂದು ಪಂದ್ಯ ಕಣ್ತುಂಬಿಕೊಳ್ಳಲು ಸ್ಥಳೀಯರಿಗೆ ಅವಕಾಶ ಲಭಿಸಿದೆ. ತಂಡದಲ್ಲಿರುವ ಹುಬ್ಬಳ್ಳಿಯ ಚಿರಾಗ ನಾಯ್ಕ ಮತ್ತು ಎ.ಸಿ. ರೋಹಿತ್‌ ಕುಮಾರ್‌ ಅವರಿಗೆ ಅಂತಿಮ ಹನ್ನೊಂದರ ತಂಡದಲ್ಲಿ ಸ್ಥಾನ ಸಿಗುವುದೇ ಎನ್ನುವ ಕುತೂಹಲ ಗರಿಗೆದರಿದೆ.

ಆರ್‌. ಸ್ಮರಣ್ ನಾಯಕತ್ವದ ರಾಜ್ಯ ತಂಡ ಹಿಂದಿನ ಪಂದ್ಯಗಳಲ್ಲಿ ಹಿಮಾಚಲ ಪ್ರದೇಶ, ವಿದರ್ಭ, ಗುಜರಾತ್ ಮತ್ತು ಹೈದರಾಬಾದ್‌ ವಿರುದ್ಧ ಪಂದ್ಯಗಳನ್ನಾಡಿತ್ತು. ಇದರಲ್ಲಿ ಹಿಮಾಚಲ ವಿರುದ್ಧದ ಪಂದ್ಯ ಪೂರ್ಣಗೊಳ್ಳದ ಕಾರಣ ಉಭಯ ತಂಡಗಳಿಗೂ ತಲಾ ಒಂದು ಅಂಕ ಲಭಿಸಿದ್ದವು. ಗುಜರಾತ್‌ ಎದುರಿನ ಪಂದ್ಯದಲ್ಲಿ ಮಾತ್ರ ಕರ್ನಾಟಕ ತಂಡ ಇನಿಂಗ್ಸ್‌ ಮುನ್ನಡೆ ಗಳಿಸಿತ್ತು.ಈ ಬಾರಿಯ ಕೂಚ್‌ ಬೆಹಾರ್‌ ಟೂರ್ನಿಯ ಮೊದಲ ಪಂದ್ಯ ಕೂಡ ಹೈದರಾಬಾದ್‌ ವಿರುದ್ಧಹುಬ್ಬಳ್ಳಿಯಲ್ಲಿಯೇ ನಡೆದಿತ್ತು.

ADVERTISEMENT

ಎದುರಾಳಿ ಜಾರ್ಖಂಡ್‌ ತಂಡ ತನ್ನ ಹಿಂದಿನ ಪಂದ್ಯಗಳಲ್ಲಿ ಕ್ರಮವಾಗಿ ವಿದರ್ಭ, ಮಹಾರಾಷ್ಟ್ರ, ಹೈದರಾಬಾದ್‌, ಮುಂಬೈ ಮತ್ತು ಕೇರಳ ವಿರುದ್ಧ ಪಂದ್ಯಗಳನ್ನಾಡಿತ್ತು. ಕೇರಳ ತಂಡವನ್ನು ಹತ್ತು ವಿಕೆಟ್‌ಗಳಿಂದ ಮಣಿಸಿ ಆಟಗಾರರು ಆತ್ಮವಿಶ್ವಾಸದಲ್ಲಿದ್ದಾರೆ. ಆದ್ದರಿಂದ ಈ ಪಂದ್ಯದಲ್ಲಿ ರಾಜ್ಯಕ್ಕೆ ಕಠಿಣ ಸವಾಲು ಎದುರಾಗಬಹುದು. ಸ್ಥಳೀಯ ವಾತಾವರಣಕ್ಕೆ ಹೊಂದಿಕೊಳ್ಳುವ ಉದ್ದೇಶದಿಂದ ಜಾರ್ಖಂಡ್‌ ತಂಡದ ಆಟಗಾರರು ಮೂರು ದಿನಗಳ ಹಿಂದೆಯೇ ನಗರಕ್ಕೆ ಬಂದಿದ್ದಾರೆ. ಉಭಯ ತಂಡಗಳು ಆಟಗಾರರು ಬುಧವಾರ ಹಾಗೂ ಗುರುವಾರ ಕಠಿಣ ಅಭ್ಯಾಸ ನಡೆಸಿದರು.

ಪಂದ್ಯ ಆರಂಭ: ಬೆಳಿಗ್ಗೆ 9.30ಕ್ಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.