ADVERTISEMENT

ಕಾರ್ತಿಕ ಮಾಸದ ಛಟ್ಟಿ ಅಮಾವಾಸ್ಯೆ: ಹಚ್ಚೇವು ಸಿದ್ಧಾರೂಢರ ಲಕ್ಷ ದೀಪ...

ಸಂಭ್ರಮದಿಂದ ನೆರವೇರಿದ ದೀಪೋತ್ಸವ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2025, 7:39 IST
Last Updated 21 ನವೆಂಬರ್ 2025, 7:39 IST
ಕಾರ್ತಿಕ ಮಾಸದ ಛಟ್ಟಿ ಅಮಾವಾಸ್ಯೆ ಅಂಗವಾಗಿ ಹುಬ್ಬಳ್ಳಿಯ ಸಿದ್ಧಾರೂಢ ಮಠದ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಲಕ್ಷ ದೀಪೋತ್ಸವಕ್ಕೆ ಗಣ್ಯರು ಚಾಲನೆ ನೀಡಿದರು
ಕಾರ್ತಿಕ ಮಾಸದ ಛಟ್ಟಿ ಅಮಾವಾಸ್ಯೆ ಅಂಗವಾಗಿ ಹುಬ್ಬಳ್ಳಿಯ ಸಿದ್ಧಾರೂಢ ಮಠದ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಲಕ್ಷ ದೀಪೋತ್ಸವಕ್ಕೆ ಗಣ್ಯರು ಚಾಲನೆ ನೀಡಿದರು   

ಹುಬ್ಬಳ್ಳಿ: ವಾತಾವರಣವನ್ನು ಮೆಲ್ಲಗೆ ಆವರಿಸತೊಡಗಿದ್ದ ಸಂಜೆಗತ್ತಲನ್ನು ದೂರಮಾಡುವಂತೆ, ಮೈ ಸೋಕುತ್ತಿದ್ದ ಗಾಳಿಯ ತಂಪನ್ನು ಮರೆಸುವಂತೆ ನಿಧಾನವಾಗಿ ಒಂದೊಂದೇ ದೀಪ ಬೆಳಗುತ್ತಿದ್ದ ಪರಿಯನ್ನು ನೋಡಲು ಎರಡು ಕಣ್ಣುಗಳು ಸಾಲದಾಗಿತ್ತು...

ಇಂಥ ಅದ್ಭುತ ದೃಶ್ಯ ಕಾಣಿಸಿದ್ದು ಹುಬ್ಬಳ್ಳಿಯ ಆರಾಧ್ಯ ದೈವ ಸಿದ್ಧಾರೂಢರ ಸನ್ನಿಧಿಯಲ್ಲಿ. ಸಿದ್ಧಾರೂಢ ಮಠದಲ್ಲಿ ಗುರುವಾರ ಸಂಜೆ ಕಾರ್ತಿಕ ಮಾಸದ ಛಟ್ಟಿ ಅಮಾವಾಸ್ಯೆ ಅಂಗವಾಗಿ ಹಮ್ಮಿಕೊಂಡಿದ್ದ ಲಕ್ಷ ದೀಪೋತ್ಸವವು ಭಕ್ತರ ಕಂಗಳಲ್ಲಿ ಚೈತನ್ಯದ ಬೆಳಕು ಮೂಡಿದರೆ, ಮನದಲ್ಲಿ ಧನ್ಯತೆಯ ಭಾವ ಆವರಿಸಿತ್ತು.

ಮಠದ ಆವರಣ, ದಾರಿಯುದ್ದಕ್ಕೂ ಎತ್ತ ಕಣ್ಣು ಹಾಯಿಸಿದರೂ ಮಿನುಗುವ ಹತ್ತಾರು ಸಾವಿರ ಹಣತೆಗಳ ಸಾಲು, ಅವುಗಳನ್ನು ಬೆಳಗುವ ಸಾವಿರಾರು ಭಕ್ತರ ಸಂಭ್ರಮವೇ ಎದ್ದು ಕಾಣುತ್ತಿತ್ತು. ಮಕ್ಕಳಾದಿಯಾಗಿ ಮಹಿಳೆಯರು, ಯುವಜನರು, ವೃದ್ಧರೆಲ್ಲ ದೀಪ ಬೆಳಗುತ್ತ, ಸಿದ್ಧಾರೂಢರ ಹಾಗೂ ಗುರುನಾಥಾರೂಢರ ನಾಮ ಸ್ಮರಣೆ ಮಾಡುತ್ತ, ಜಗದ ಒಳಿತಿಗಾಗಿ ಬೇಡಿಕೊಂಡರು.

ADVERTISEMENT

ಮಠವನ್ನು ಬೆಳಗುತ್ತಿದ್ದ ಸರಮಾಲೆ ವಿದ್ಯುದ್ದೀಪಗಳಿಗೆ ಪೈಪೋಟಿ ಕೊಡುವಂತಿತ್ತು ಎಣ್ಣೆ– ಬತ್ತಿಯ ಬೆಳಕು. ಓಂ, ಸ್ವಸ್ತಿಕ್, ಲಕ್ಷ ದೀಪೋತ್ಸವ ಹೀಗೆ ವಿವಿಧ ಅಕ್ಷರಗಳ ಮಾದರಿಯಲ್ಲಿ ಬಣ್ಣಬಣ್ಣದ ರಂಗೋಲಿ ಹಾಕಿ, ಅದರ ಗುಂಟ ಹಚ್ಚಲಾಗಿದ್ದ ಸಾಲು ಹಣತೆಗಳ ಬೆಳಕಲ್ಲಿ ಸಿದ್ಧಾರೂಢ ಮಠ ಕಂಗೊಳಿಸಿತು.

ಹಣತೆ ವ್ಯಾಪಾರ ಜೋರು: ಸಿದ್ಧಾರೂಢರ ಸನ್ನಿಧಿಯಲ್ಲಿ ಹಣತೆ ಬೆಳಗಿ, ಕೋರಿಕೆ ಸಲ್ಲಿಸಲು ರಾಜ್ಯದ ವಿವಿಧ ಭಾಗಗಳಿಂದಷ್ಟೇ ಅಲ್ಲದೆ ಗೋವಾ, ಮಹಾರಾಷ್ಟ್ರ, ಆಂಧ್ರಪ್ರದೇಶಗಳಿಂದಲೂ ಸಾಕಷ್ಟು ಸಂಖ್ಯೆಯಲ್ಲಿ ಜನರು ಬಂದಿದ್ದರು.

ಕೆಲವರು ಮನೆಯಿಂದಲೇ ದೀಪಗಳನ್ನು ಸಿದ್ಧಪಡಿಸಿಕೊಂಡು ಬಂದಿದ್ದರೆ, ಇನ್ನೂ ಕೆಲವು ಜನರು ಮಠದ ಆವರಣದಲ್ಲೇ ಮಾರಾಟಕ್ಕೆ ಇಟ್ಟಿದ್ದ ಹಣತೆಗಳನ್ನು ಖರೀದಿಸಿ ದೀಪೋತ್ಸವದ ಸಂಭ್ರಮದಲ್ಲಿ ಪಾಲ್ಗೊಂಡರು. ತಡರಾತ್ರಿವರೆಗೂ ದೀಪ ಬೆಳಗುವ ಕಾರ್ಯ ನಡೆಯಿತು. ಜನರು ತಾವು ಹಚ್ಚಿದ ದೀಪಗಳ ಎದುರು ನಿಂತು ಸೆಲ್ಫಿ ತೆಗೆದುಕೊಂಡು ಖುಷಿಪಟ್ಟರು. ಬಾನಂಗಳಕ್ಕೆ ಹಾರಿ ಬೆಳಕಿನ ಚಿತ್ತಾರ ಮೂಡಿಸಿದ ಸಿಡಿಮದ್ದುಗಳು ಮೆರುಗು ನೀಡಿದವು.

ಬೆಳಿಗ್ಗೆಯಿಂದಲೇ ಮಠಕ್ಕೆ ಭಕ್ತರು ಬಂದು ದರ್ಶನ ಪಡೆದರು. ಎಲ್ಲ ಭಕ್ತರಿಗೆ ಮಠದಲ್ಲಿ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಕುಡಿಯುವ ನೀರು, ಭದ್ರತೆ ಹಾಗೂ ವೈದ್ಯಕೀಯ ಸೌಲಭ್ಯವನ್ನು ಒದಗಿಸಲಾಗಿತ್ತು. ವಾಹನಗಳ ನಿರ್ವಹಣೆಗೆ ಪೊಲೀಸರನ್ನು ನಿಯೋಜಿಸಲಾಗಿದ್ದರೂ ಮಠಕ್ಕೆ ಸಂಪರ್ಕಿಸುವ ಯಾವ ಮಾರ್ಗವೂ ಸಂಚಾರ ದಟ್ಟಣೆಯಿಂದ ಮುಕ್ತವಾಗಿರಲಿಲ್ಲ.

ಕಾರ್ತಿಕ ಮಾಸದ ಛಟ್ಟಿ ಅಮಾವಾಸ್ಯೆ ಅಂಗವಾಗಿ ಹುಬ್ಬಳ್ಳಿಯ ಸಿದ್ಧಾರೂಢ ಮಠದ ಆವರಣದಲ್ಲಿ ಗುರುವಾರ ನಡೆದ ಲಕ್ಷ ದೀಪೋತ್ಸವದಲ್ಲಿ ಸಾವಿರಾರು ಜನರು ಹಣತೆ ಬೆಳಗಿದರು ಪ್ರಜಾವಾಣಿ ಚಿತ್ರ: ಗುರು ಹಬೀಬ

‘ಅಂಧಕಾರ ದೂರ ಮಾಡುವುದೇ ದೀಪೋತ್ಸವದ ಆಶಯ’

ಮಠದ ಮುಖ್ಯ ಆಡಳಿತಾಧಿಕಾರಿ ಬಿ.ಎಸ್. ಭಾರತಿ ಧಾರವಾಡ ಜಿಲ್ಲಾ ನ್ಯಾಯಾಧೀಶೆ ವೀಣಾ ನಾಯಕ ಅವರು ಸಾಂಕೇತಿಕವಾಗಿ ದೀಪ ಬೆಳಗಿ 32ನೇ ವರ್ಷದ ದೀಪೋತ್ಸವಕ್ಕೆ ಚಾಲನೆ ನೀಡಿದರು.

ಮಠದ ಧರ್ಮದರ್ಶಿ ಶಾಮಾನಂದ ಪೂಜೇರಿ ಮಾತನಾಡಿ ‘ಜಾತಿ ಮತ ವರ್ಣ ಮೀರಿ ಮನುಕುಲವು ಆತ್ಮಜ್ಞಾನದೆಡೆಗೆ ಸಾಗಬೇಕೆಂಬುದೇ ಸಿದ್ಧಾರೂಢರ ಬೋಧನೆ. ಅವರ ಸನ್ನಿಧಿಯಲ್ಲಿ ದೀಪ ಬೆಳಗಿ ಅಂಧಕಾರವನ್ನು ದೂರ ಮಾಡುವುದೇ ದೀಪೋತ್ಸವದ ಆಶಯ’ ಎಂದರು.

ಮಠದ ಟ್ರಸ್ಟ್ ಕಮಿಟಿ ಅಧ್ಯಕ್ಷ ಚನ್ನವೀರ ಮುಂಗುರವಾಡಿ ಅಧ್ಯಕ್ಷತೆ ವಹಿಸಿದ್ದರು. ಶಾಂತಾನಂದ ಸ್ವಾಮೀಜಿ ಧರ್ಮದರ್ಶಿಗಳಾದ ಗೀತಾ ಕಲಬುರ್ಗಿ ವಿನಾಯಕ ಘೋಡ್ಕೆ ರಮೇಶ ಬೆಳಗಾವಿ ಮಂಜುನಾಥ ಮುನವಳ್ಳಿ ವಿ.ವಿ. ಮಲ್ಲಾಪುರ ಗೋವಿಂದ ಮಣ್ಣೂರ ಬಾಳು ಮಗಜಿಕೊಂಡಿ ಸರ್ಮಮಂಗಳಾ ಪಾಠಕ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.