ಹುಬ್ಬಳ್ಳಿ: ‘ಶಿಕ್ಷಣ ವ್ಯವಸ್ಥೆ ತುಂಬಾ ಬದಲಾಗಿದೆ. ಹೊಸ ಸವಾಲುಗಳಿಗೆ ಪ್ರಾಧ್ಯಾಪಕರು ಸದಾ ಸಿದ್ಧರಾಗಬೇಕಿದೆ. ಆಧುನಿಕ ತಂತ್ರಜ್ಞಾನ ಸದ್ಬಳಕೆ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಪರಿಣಾಮಕಾರಿ ಬೋಧನೆ ಮೂಲಕ ವಿಷಯಗಳನ್ನು ಮನದಟ್ಟು ಮಾಡಬೇಕು’ ಎಂದು ಪ್ರೊ. ಎಂ.ಕೆ.ರಮೇಶ ಹೇಳಿದರು.
ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಹೊಸ ಕಾನೂನು ಶಾಲೆಯ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ಭಾರತದಲ್ಲಿ ಕಾನೂನು ಶಿಕ್ಷಣದ ಸವಾಲುಗಳು’ ಒಂದು ದಿನದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ‘ಪ್ರತಿಯೊಬ್ಬರೂ ಕಾನೂನು ಜ್ಞಾನ ಹೊಂದಬೇಕು. ಕಾನೂನು ಪಾಲಿಸಬೇಕು. ಭಾರತೀಯ ನ್ಯಾಯ ವ್ಯವಸ್ಥೆಗೆ ಕೌಟಿಲ್ಯನ ಅರ್ಥಶಾಸ್ತ್ರ ಬುನಾದಿಯಾಗಿದೆ’ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸಿ.ಬಸವರಾಜು ಮಾತನಾಡಿ, ‘ವಿಶ್ವವಿದ್ಯಾಲಯ ಹಾಗೂ ಕಾಲೇಜುಗಳಲ್ಲಿ ಸಾಕಷ್ಟು ಸಮಸ್ಯೆಗಳು ಉಲ್ಬಣಗೊಳ್ಳುತ್ತವೆ. ಅವುಗಳಿಗೆ ಸರಿಯಾದ ರೀತಿಯಲ್ಲಿ ಪರಿಹಾರ ಕಂಡುಕೊಳ್ಳಲು ಮುಂದಾಗಬೇಕು. ವಿದ್ಯಾರ್ಥಿಗಳ ಸಮಸ್ಯೆಗಳನ್ನು ಅರಿತುಕೊಂಡು ಇತ್ಯರ್ಥ ಪಡಿಸಬೇಕು. ಸಮಸ್ಯೆಗಳನ್ನು ಎದುರಿಸಿದಾಗ ಅನುಭವ ದೊರೆಯುತ್ತದೆ’ ಎಂದರು.
‘ವಿದ್ಯಾರ್ಥಿಗಳ ಉತ್ತಮ ಭವಿಷ್ಯ ರೂಪಿಸುವಲ್ಲಿ ಪ್ರಾಧ್ಯಾಪಕರ ಪಾತ್ರ ಪ್ರಮುಖವಾದುದು. ಆಡಳಿತ ಮಂಡಳಿ, ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿ ಸಮೂಹ ಪರಸ್ಪರ ಪೂರಕವಾಗಿದ್ದರೆ ಮಾತ್ರ ಸಂಸ್ಥೆ ಬೆಳವಣಿಗೆ ಹೊಂದಲಿದೆ. ಗುಣಮಟ್ಟದ ಕಾನೂನು ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡಬೇಕು. ಕಾನೂನು ಶಿಕ್ಷಣದಲ್ಲಿ ಯಾವ ಬದಲಾವಣೆಗಳನ್ನು ತರಬೇಕು ಎಬುದರ ಕುರಿತು ಚರ್ಚೆಗಳಾಗಬೇಕು. ನಾವೆಲ್ಲರೂ ಪ್ರತಿದಿನ ಹೊಸ ಹೊಸ ವಿಷಯಗಳ ಬಗ್ಗೆ ಕಲಿಯಬೇಕು. ಕಲಿಯುವಿಕೆ ಪ್ರಕ್ರಿಯೆ ಎಂದಿಗೂ ಮುಗಿಯುವುದಿಲ್ಲ’ ಎಂದು ಹೇಳಿದರು.
ಕಾನೂನು ವಿಶ್ವವಿದ್ಯಾಲಯದ ಕುಲಸಚಿವೆ ಅನುರಾಧ ವಸ್ತ್ರದ, ಮೌಲ್ಯಮಾಪನ ಕುಲಸಚಿವೆ ಪ್ರೊ. ರತ್ನಾ ಭರಮಗೌಡರ, ಸಹಾಯಕ ಪ್ರಾಧ್ಯಾಪಕರಾದ ಮೋಹನ್ ಆರ್., ಗಿರೀಶಗೌಡ ಜಿ. ಪಾಟೀಲ, ಸುನೀಲ್ ಬಾಗಡೆ, ವಿವಿಧ ಕಾಲೇಜುಗಳ ಪ್ರಾಂಶುಪಾಲರು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.