ADVERTISEMENT

ಆಸ್ತಿ ತೆರಿಗೆ ಕಡಿತಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 3 ಮೇ 2021, 16:05 IST
Last Updated 3 ಮೇ 2021, 16:05 IST

ಹುಬ್ಬಳ್ಳಿ: ಕೋವಿಡ್–19 ಎರಡನೇ ಅಲೆಯಿಂದಾಗಿ ಜನ ತತ್ತರಿಸಿದ್ದಾರೆ. ವ್ಯಾಪಾರ ಮತ್ತು ವಹಿವಾಟು ಇಳಿಕೆಯಾಗಿದೆ. ಎಲ್ಲಾ ಉದ್ಯಮಗಳೂ ಸಂಕಷ್ಟದಲ್ಲಿವೆ. ಉದ್ಯೋಗದ ಅನಿಶ್ಚಿತತೆಯಿಂದಾಗಿ ಕಾರ್ಮಿಕರೂ ತೊಂದರೆಗೆ ಸಿಲುಕಿದ್ದಾರೆ. ಹಾಗಾಗಿ, ಈ ವರ್ಷ ಆಸ್ತಿ ತೆರಿಗೆಯನ್ನು ಪರಿಷ್ಕರಿಸದೆ 2020–21ನೇ ಸಾಲಿನ ತೆರಿಗೆಯನ್ನೇ ಮುಂದುವರಿಸಬೇಕು. ಕೋವಿಡ್ ಅಬ್ಬರ ತಗ್ಗುವವರೆಗೆ ಶೇ 25ರಷ್ಟು ವಿನಾಯಿತಿ ನೀಡಬೇಕು ಎಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ (ಕೆಸಿಸಿಐ) ಸರ್ಕಾರವನ್ನು ಒತ್ತಾಯಿಸಿದೆ.

ಈ ಕುರಿತು ಸೋಮವಾರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು, ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್, ಸ್ಪೀಕರ್ ಬಸವರಾಜ ಹೊರಟ್ಟಿ, ಜಿಲ್ಲೆಯ ಶಾಸಕರಾದ ಪ್ರಸಾದ ಅಬ್ಬಯ್ಯ, ಅರವಿಂದ ಬೆಲ್ಲದ ಹಾಗೂ ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ ಅವರಿಗೆ ಕೆಸಿಸಿಐ ಪತ್ರ ಬರೆದಿದೆ.

ಶೇ 5ರಷ್ಟು ರಿಯಾಯಿತಿಯೊಂದಿಗೆ ತೆರಿಗೆ ಪಾವತಿಸುವ ಅವಧಿಯನ್ನು ಜುಲೈ 31ರವರೆಗೆ ವಿಸ್ತರಿಸಬೇಕು. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಎಲ್ಲಾ ಬಡಾವಣೆಗಳಿಗೂ ಏಕರೂಪದ ತೆರಿಗೆ ದರವನ್ನು ನಿಗದಿಪಡಿಸಬೇಕು. ಆಸ್ತಿ ಕರ ಪರಿಷ್ಕರಣೆಯನ್ನು ಮೂರು ವರ್ಷಕ್ಕೊಮ್ಮೆ ತೆರಿಗೆದಾರರು, ವ್ಯಾಪಾರಸ್ಥರು, ಉದ್ಯಮಿಗಳು ಹಾಗೂ ಸಾರ್ವಜನಿಕರೊಂದಿಗೆ ಚರ್ಚಿಸಿ ನಿರ್ಣಯಿಸಬೇಕು. ಕೋವಿಡ್‌ನಿಂದಾಗಿ ಪರಿಷ್ಕರಣೆಯನ್ನು ಒಂದು ವರ್ಷ ಮುಂದೂಡಬೇಕು ಎಂದು ಪತ್ರದಲ್ಲಿ ಆಗ್ರಹಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.