ADVERTISEMENT

ಸಮಾನ ಮನಸ್ಕರ ಬಳಗದಿಂದ ಖಾದಿ ರಾಷ್ಟ್ರಧ್ವಜ ಉತ್ತೇಜನ ಅಭಿಯಾನ

​ಪ್ರಜಾವಾಣಿ ವಾರ್ತೆ
Published 13 ಜನವರಿ 2026, 5:14 IST
Last Updated 13 ಜನವರಿ 2026, 5:14 IST
ಸಂತೋಷ ನರಗುಂದ
ಸಂತೋಷ ನರಗುಂದ   

ಹುಬ್ಬಳ್ಳಿ: ‘ಸರ್ಕಾರವು ಪಾಲಿಸ್ಟರ್ ರಾಷ್ಟ್ರಧ್ವಜಗಳಿಗೆ ನೀಡಿರುವ ಅನುಮತಿ ಹಿಂಪಡೆಯಬೇಕು, ಈ ಧ್ವಜಗಳಿಗೆ ಐಎಸ್ಐ ಮಾನದಂಡ ನೀಡಲು ಮುಂದಾಗಿರುವ ನಿರ್ಧಾರ ಕೈಬಿಡಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ಸಂತೋಷ ನರಗುಂದ ಒತ್ತಾಯಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೇಂದ್ರ ಸರ್ಕಾರವು ‘ಧ್ವಜ ಸಂಹಿತೆ– 2002’ಕ್ಕೆ ತಿದ್ದುಪಡಿ ತಂದು, ಪಾಲಿಸ್ಟರ್‌ ತ್ರಿವರ್ಣ ಧ್ವಜಗಳ ಮಾರಾಟಕ್ಕೆ ಅನುಮತಿ ನೀಡಿದ್ದರಿಂದ ಖಾದಿ ಧ್ವಜಗಳ ಬೇಡಿಕೆ, ಮಾರಾಟ ಕುಸಿದಿದೆ. ಖಾದಿ ಧ್ವಜಗಳ ಖರೀದಿ ಕುರಿತು ಜನರಲ್ಲಿ ಅರಿವು ಮೂಡಿಸಲು ‘ಖಾದಿ ರಾಷ್ಟ್ರಧ್ವಜ ಉತ್ತೇಜನ ಅಭಿಯಾನ’ ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.

‘ಬೆಂಗೇರಿಯ ಖಾದಿ ಗ್ರಾಮೋದ್ಯೋಗ ಸಂಸ್ಥೆಯಲ್ಲಿ ಮಾರಾಟವಾಗದೆ ₹2 ಕೋಟಿ ಮೌಲ್ಯದ ರಾಷ್ಟ್ರಧ್ವಜಗಳು ಉಳಿದಿವೆ. ಧ್ವಜಗಳ ಮಾರಾಟಕ್ಕೆ ಮೂರು ಆಯಾಮಗಳಲ್ಲಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಭಾರತೀಯ ಮಾನಕ ಬ್ಯುರೊ (ಬಿಎಸ್‌ಐ) ಪ್ರಮಾಣೀಕೃತ ಖಾದಿ ರಾಷ್ಟ್ರಧ್ವಜದ ಕುರಿತು ಜನರಲ್ಲಿ ಅರಿವು ಮೂಡಿಸುವುದು, ಬ್ರ್ಯಾಂಡಿಂಗ್ ಮಾಡುವುದು, ಇ– ಕಾಮರ್ಸ್ ಮೂಲಕ ದೇಶದಾದ್ಯಂತ ಖಾದಿ ರಾಷ್ಟ್ರಧ್ವಜ ಪೂರೈಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ADVERTISEMENT

‘ರಾಷ್ಟ್ರಧ್ವಜ ತಯಾರಿಸುವ ನೇಕಾರರಿಗೆ ರಾಜ್ಯ ಸರ್ಕಾರದಿಂದ ಎಂಡಿಎ ಹಾಗೂ ಪ್ರೋತ್ಸಾಹಧನ ₹130 ಕೋಟಿ ಬಾಕಿ ಇದೆ. ಇದನ್ನು ಕೂಡಲೇ ಬಿಡುಗಡೆ ಮಾಡಬೇಕು. ಸರ್ಕಾರಿ ನೌಕರರು ಹಾಗೂ ವಿದ್ಯಾರ್ಥಿಗಳು ವಾರದಲ್ಲಿ ಒಂದು ದಿನ ಖಾದಿ ಬಟ್ಟೆ ಧರಿಸುವುದನ್ನು ಕಡ್ಡಾಯಗೊಳಿಸಬೇಕು’ ಎಂದು ಮನವಿ ಮಾಡಿದರು.

ಶಾಮ ನರಗುಂದ, ಲಿಂಗರಾಜ ಧಾರವಾಡಶೆಟ್ಟರ್, ಕೆ.ವಿ. ಪತ್ತಾರ, ರಮೇಶ ಸಿದ್ಧಾಂತಿ, ಶಿವಾನಂದ ಮಠಪತಿ, ಅನಿತಾ ಕಡಗಲ್,  ಲಕ್ಷ್ಮಣ ನರಸಾಪುರ, ವಿನಾಯಕ ತಪಸ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.