ADVERTISEMENT

ಸುಳ್ಳು ಹೇಳುವುದರಲ್ಲಿ ಶೆಟ್ಟರ್‌ ನಿಸ್ಸೀಮರು: ಖಂಡ್ರೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2018, 14:09 IST
Last Updated 17 ಡಿಸೆಂಬರ್ 2018, 14:09 IST
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಸೋಮವಾರ ಅಲ್ತಾಫ್‌ ಹಳ್ಳೂರ ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಸೋಮವಾರ ಅಲ್ತಾಫ್‌ ಹಳ್ಳೂರ ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು   

ಹುಬ್ಬಳ್ಳಿ: ಬೆಳಗಾವಿ ಅಧಿವೇಶನ ಸುಸೂತ್ರವಾಗಿ ನಡೆಯುತ್ತಿರುವುದನ್ನು ಸಹಿಸದೇ ಶಾಸಕ ಜಗದೀಶ ಶೆಟ್ಟರ್‌ ವಿನಾಕಾರಣ ಟೀಕೆ ಮಾಡುತ್ತಿದ್ದಾರೆ. ಅಧಿವೇಶನ ಕಾಟಾಚಾರಕ್ಕೆ ನಡೆಯುತ್ತಿದೆ ಎಂದು ಅವರು ನೀಡಿದ ಹೇಳಿಕೆಯಲ್ಲಿ ಹುರುಳಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದರು.

ಹುಬ್ಬಳ್ಳಿ–ಧಾರವಾಡ ಮಹಾನಗರ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಅಲ್ತಾಫ್‌ ಹಳ್ಳೂರ ತಂದೆ ಇತ್ತೀಚಿಗೆ ನಿಧನರಾಗಿದ್ದರಿಂದ ಅವರ ಮನೆಗೆ ಸೋಮವಾರ ಭೇಟಿ ನೀಡಿ ಕುಟುಂಬದವರಿಗೆ ಖಂಡ್ರೆ ಸಾಂತ್ವನ ಹೇಳಿದರು.

ಬಳಿಕ ಮಾಧ್ಯಮಗಳ ಜೊತೆ ಮಾತನಾಡಿ ‘ಅಧಿಕಾರದಲ್ಲಿದ್ದಾಗ ಶೆಟ್ಟರ್‌ ಹಾಗೂ ಬಿಜೆಪಿ ಯಾವ ಅಭಿವೃದ್ಧಿ ಕೆಲಸ ಮಾಡಿಲ್ಲ. ಈಗ ಆಗುತ್ತಿರುವ ಅಭಿವೃದ್ಧಿ ಸಹಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ’ ಎಂದರು.

ADVERTISEMENT

‘ಬಿಜೆಪಿಯವರು ಹೇಳಿಕೆ ನೀಡುವುದರಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಜನರನ್ನು ಮರಳು ಮಾಡುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಇತ್ತೀಚಿಗೆ ನಡೆದ ಉಪಚುನಾವಣೆ ಮತ್ತು ಪಂಚ ರಾಜ್ಯಗಳ ಚುನಾವಣೆಯಲ್ಲಿ ಜನರೇ ಉತ್ತರ ನೀಡಿದ್ದಾರೆ’ ಎಂದರು. ಅಧಿವೇಶನ ಮುಗಿದ ಒಂದೆರೆಡು ದಿನಗಳಲ್ಲಿ ಸಚಿವ ಸಂಪುಟ ಮತ್ತು ನಿಗಮ ಮಂಡಳಿಗಳಿಗೆ ನೇಮಕ ಮಾಡಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕಾಂಗ್ರೆಸ್‌ ಪ್ರಮುಖರಾದ ಡಾ. ಮಹೇಶ ನಾಲವಾಡ, ನಾಗರಾಜ ಛಬ್ಬಿ, ಸದಾನಂದ ಡಂಗನವರ, ಅಲ್ತಾಫ್‌ ಕಿತ್ತೂರ, ಅನಿಲ ಪಾಟೀಲ, ವೀರಣ್ಣ ಮತ್ತೀಕಟ್ಟಿ, ಬಂಗಾರೇಶ ಹಿರೇಮಠ, ರಜತ್‌ ಉಳ್ಳಾಗಡ್ಡಿಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.