ADVERTISEMENT

ಖರೀದಿ ಕೇಂದ್ರಗಳು ರೈತರಿಗೆ ಉಪಯುಕ್ತವಾಗಲಿ: ಜಿಲ್ಲಾಧಿಕಾರಿ ಸ್ನೇಹಲ್

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2026, 5:51 IST
Last Updated 19 ಫೆಬ್ರುವರಿ 2026, 5:51 IST
ನವಲಗುಂದ ತಹಶೀಲ್ದಾರ್‌ ಕಚೇರಿಯಲ್ಲಿ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಸಾರ್ವಜನಿಕರ ಮನವಿ ಸ್ವೀಕರಿಸಿ ರೈತರ ಅಹವಾಲು ಆಲಿಸಿದರು
ನವಲಗುಂದ ತಹಶೀಲ್ದಾರ್‌ ಕಚೇರಿಯಲ್ಲಿ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಸಾರ್ವಜನಿಕರ ಮನವಿ ಸ್ವೀಕರಿಸಿ ರೈತರ ಅಹವಾಲು ಆಲಿಸಿದರು   

ನವಲಗುಂದ: ತಾಲ್ಲೂಕಿನಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಆರಂಭಿಸಿರುವ ಕಡಲೆ ಕಾಳು ಮತ್ತು ಗೋವಿನ ಜೋಳ ಖರೀದಿ ಕೇಂದ್ರಗಳು ರೈತರಿಗೆ ಉಪಯುಕ್ತವಾಗುವಂತೆ ಕಾರ್ಯನಿರ್ವಹಿಸಬೇಕು ಈ ನಿಟ್ಟಿನಲ್ಲಿ ತಹಶೀಲ್ದಾರ್‌ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಸೂಚನೆ ನೀಡಿದರು.

ಪಟ್ಟಣದಲ್ಲಿರುವ ತಹಶೀಲ್ದಾರ್‌ ಕಚೇರಿ ಸಭಾಂಗಣದಲ್ಲಿ ಬುಧವಾರ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಮಾತನಾಡಿದರು.

ತಹಶೀಲ್ದಾರ್‌ ಕಚೇರಿಯಿಂದ ಗ್ರಾಮ ಆಡಳಿತ ಅಧಿಕಾರಿಯನ್ನು ಖರೀದಿ ಕೇಂದ್ರಗಳಿಗೆ ನೇಮಿಸಿ, ರೈತರ ನೋಂದಣಿ, ಕಾಳು ಖರೀದಿಗೆ ಸಹಾಯ ಮಾಡಬೇಕು. ಮಧ್ಯವರ್ತಿಗಳ ಹಸ್ತಕ್ಷೇಪ ಕಡಿಮೆಯಾಗಲು ರೈತರಿಂದ ನೇರ ಖರೀದಿ ವ್ಯವಸ್ಥೆ ಆಗಬೇಕು. ಬೆಳೆ ವಿಮೆಯ ಎರಡನೇ ಕಂತಿನ ಪರಿಹಾರ ಮೊತ್ತ ರೈತರ ಖಾತೆಗೆ ಜಮಾ ಆಗುವಲ್ಲಿ ವಿಳಂಬವಾಗುತ್ತಿರುವ ಬಗ್ಗೆ ರೈತರು ಮನವಿ ಸಲ್ಲಿಸಿದ್ದಾರೆ. ಬೆಳೆ ವಿಮೆ ಪರಿಹಾರ ವಿಳಂಬವಾಗಿ, ರೈತರಿಗೆ ತೊಂದರೆ ಆಗುತ್ತಿದೆ. ತಹಶೀಲ್ದಾರ್‌ ಅಧ್ಯಕ್ಷತೆಯಲ್ಲಿ ತಾಲ್ಲೂಕು ಮಟ್ಟದ ಸಭೆ ಜರುಗಿಸಿ ಪರಿಶೀಲಿಸಬೇಕು.

ADVERTISEMENT

ಪಟ್ಟಣದ ಪ್ರಮುಖ ರಸ್ತೆಯಲ್ಲಿ ಒತ್ತುವರಿ ಮಾಡಿ, ಮನೆಗಳ ನಿರ್ಮಾಣವಾಗಿರುವ ಕುರಿತು ದೂರುಗಳು ಬಂದಿದ್ದು, ಪುರಸಭೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಒತ್ತುವರಿ, ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಬೇಕು. ಸಾರ್ವಜನಿಕ ಸಂಚಾರಕ್ಕೆ ತೊಂದರೆ ಉಂಟಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ತಿಳಿಸಿದರು.

ತಹಶೀಲ್ದಾರ್‌ ಸುಧೀರ ಸಾಹುಕಾರ, ಪುರಸಭೆ ಮುಖ್ಯಾಧಿಕಾರಿ ಎಸ್.ಪಿ ಪೂಜಾರ, ರೈತ ಹೋರಾಟಗಾರರಾದ ಸುಭಾಸಚಂದ್ರಗೌಡ ಪಾಟೀಲ, ಯಲ್ಲಪ್ಪ ದಾಡಿಭಾವಿ, ರವಿ ತೋಟದ, ರಘುನಾಥ ನಡುವಿನಮನಿ, ಶಂಕರಪ್ಪ ಅಂಬಲಿ, ಗೋವಿಂದರಡ್ಡಿ ಮೊರಬದ, ಮಲ್ಲಪ್ಪ ಬಸೆಗನ್ನಿ, ಹುಸೇನಸಾಬ ನದಾಫ್, ಶ್ರೀಕಾಂತ ತೋಟದ, ಕರಿಯಪ್ಪ ತಳವಾರ ನಿಂಗಪ್ಪ ಕೆಳಗೇರಿ, ಕೃಷ್ಣ ಮಾದರ, ರಾಘು ಪತ್ತಾರ ಸೇರಿ ನೂರಾರು ಸಾರ್ವಜನಿಕರು, ಅಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.