ADVERTISEMENT

ಕಿಕ್ ಬಾಕ್ಸಿಂಗ್; ಯಶ್ವಂತಗೌಡ ಮಿಂಚು

ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ವಿದ್ಯಾರ್ಥಿ

ಸತೀಶ ಬಿ.
Published 19 ಜುಲೈ 2025, 5:09 IST
Last Updated 19 ಜುಲೈ 2025, 5:09 IST
ಯಶ್ವಂತಗೌಡ ಎಚ್.ಎಸ್.
ಯಶ್ವಂತಗೌಡ ಎಚ್.ಎಸ್.   

ಹುಬ್ಬಳ್ಳಿ: ಇಲ್ಲಿನ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ವಿದ್ಯಾರ್ಥಿ ಯಶ್ವಂತಗೌಡ ಎಚ್‌.ಎಸ್ ಅವರು ಕಿಕ್‌ ಬಾಕ್ಸ್ ಸ್ಪರ್ಧೆಯಲ್ಲಿ ಛಾಪು ಮೂಡಿಸಿದ್ದಾರೆ.

ಮೈಸೂರು ಜಿಲ್ಲೆ ಎಚ್‌.ಡಿ.ಕೋಟೆ ತಾಲ್ಲೂಕಿನ ಹೈರಿಗೆ ಗ್ರಾಮದ ಅವರು, ಸದ್ಯ ಹುಬ್ಬಳ್ಳಿಯ ಜಿ.ಕೆ.ಕಾನೂನು ವಿಶ್ವವಿದ್ಯಾಲಯದ ವಿದ್ಯಾರ್ಥಿ. ವಿಶ್ವವಿದ್ಯಾಲಯದ ಇತಿಹಾಸದಲ್ಲಿ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಪದಕ ಗೆದ್ದ ಮೊದಲ ಕ್ರೀಡಾಪಟು ಅವರು. 

2023ರಲ್ಲಿ ಉತ್ತರ ಪ್ರದೇಶದ ಜೌನ್‌ಪುರದಲ್ಲಿ ನಡೆದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ 63 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಅವರು ಬೆಳ್ಳಿ ಪದಕ ಜಯಿಸಿದ್ದರು. ಇದಕ್ಕಾಗಿ ವಿಶ್ವವಿದ್ಯಾಲಯದಿಂದ ₹80 ಸಾವಿರ ನಗದು ಬಹುಮಾನ ಸಹ ಪಡೆದಿದ್ದಾರೆ.

ADVERTISEMENT

ಅಲ್ಲದೆ, ಪ್ರಸಕ್ತ ವರ್ಷ ಉತ್ತರ ಪ್ರದೇಶದಲ್ಲಿ ನಡೆದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯದ ಕ್ರೀಡಾಕೂಟದ ಕಿಕ್‌ ಬಾಕ್ಸಿಂಗ್, ಯೋಗ ಸ್ಪರ್ಧೆಯಲ್ಲಿ ಕಾನೂನು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿ, ಉತ್ತಮ ಪ್ರದರ್ಶನ ನೀಡಿದ್ದಾರೆ.

ಒಂದನೇ ತರಗತಿಯಲ್ಲಿದ್ದಾಗಲೇ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಲು ಆರಂಭಿಸಿದ ಅವರು  ರಾಜ್ಯ, ರಾಷ್ಟ್ರಮಟ್ಟದ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದಾರೆ.

‘ಮೈಸೂರು ವಿ.ವಿಯಲ್ಲಿ ಬಿ.ಎಸ್ಸಿ ಓದುವಾಗ ಮೊದಲ ಬಾರಿಗೆ ಕಿಕ್ ಬಾಕ್ಸಿಂಗ್ ತರಬೇತಿ ಪಡೆದೆ. 2019ರಲ್ಲಿ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಕ್ರೀಡಾಕೂಟದಲ್ಲಿ ಭಾಗವಹಿಸಿದರೂ ಪದಕ ಗೆಲ್ಲಲು ಸಾಧ್ಯವಾಗಲಿಲ್ಲ. ಆ ನಂತರ ಛಲ ಬಿಡದೆ ಪ್ರಯತ್ನ ಮುಂದುವರಿಸಿದೆ’ ಎಂದು ಯಶ್ವಂತಗೌಡ ತಿಳಿಸಿದರು.  

‘ಯಾವುದೇ ಸ್ಪರ್ಧೆಯಿದ್ದರೂ ಸ್ವತಃ ನಾನೇ ಅಭ್ಯಾಸ ಮಾಡುವೆ. ಜಿ.ಕೆ.ಕಾನೂನು ಕಾಲೇಜಿನ ಕ್ರೀಡಾ ವಿಭಾಗದ ನಿರ್ದೇಶಕ ಬಾಹುಬಲಿ, ಕಾನೂನು ವಿಶ್ವವಿದ್ಯಾಲಯದ ಕ್ರೀಡಾ ವಿಭಾಗದ ನಿರ್ದೇಶಕ ಖಾಲಿದ್ ಖಾನ್ ಅವರೂ  ಪ್ರೋತ್ಸಾಹಿಸಿದ್ದಾರೆ’ ಎಂದರು.

ಓದಿನಲ್ಲೂ ಮುಂದೆ ಇರುವ ಅವರು, ವರ್ಲ್ಡ್‌ ಅಸೋಸಿಯೇಷನ್‌ ಆಫ್ ಕಿಕ್‌ ಬಾಕ್ಸಿಂಗ್‌ ಆರ್ಗನೈಸೇಷನ್ಸ್‌ನಿಂದ ಕೋಚ್‌ ಆಗಿಯೂ ಅರ್ಹತೆ ಗಳಿಸಿದ್ದಾರೆ. 

ಯಶವಂತಗೌಡ ಬಹುಮುಖ ಪ್ರತಿಭೆ. ಯೋಗ ಕರಾಟೆ ಕಿಕ್‌ ಬಾಕ್ಸಿಂಗ್‌ನಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಕಾನೂನು ವಿಶ್ವವಿದ್ಯಾಲಯಕ್ಕೆ ಕೀರ್ತಿ ತಂದಿದ್ದಾರೆ
ಖಾಲಿದ್ ಖಾನ್‌ ನಿರ್ದೇಶಕ ಕ್ರೀಡಾ ವಿಭಾಗದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ
ಸ್ವಂತ ಕಿಕ್‌ ಬಾಕ್ಸಿಂಗ್ ತರಬೇತಿ ಅಕಾಡೆಮಿ ತೆರೆದು ಮಕ್ಕಳು ಯುವಕರಿಗೆ ಉತ್ತಮ ತರಬೇತಿ ನೀಡುವ ಚಿಂತನೆ ಇದೆ. 
ಯಶವಂತಗೌಡ ಎಚ್‌.ಎಸ್. ಕಿಕ್ ಬಾಕ್ಸರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.