ADVERTISEMENT

₹1 ಕೋಟಿಗೆ ಬೇಡಿಕೆ: ಅಪಹರಣಕಾರರ ಬಂಧನ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2022, 4:05 IST
Last Updated 10 ಆಗಸ್ಟ್ 2022, 4:05 IST

ಹುಬ್ಬಳ್ಳಿ: ಆನ್‌ಲೈನ್ ಗೇಮ್‌ನಲ್ಲಿ ಹಣ ಗೆದ್ದಿದ್ದ ಇಲ್ಲಿನ ಮಂಟೂರ ರಸ್ತೆಯ ನ್ಯಾಷನಲ್ ಟೌನ್ ನಿವಾಸಿ ಗರೀಬ್‌ನವಾಜ್ ಮುಲ್ಲಾ ಅವರನ್ನು ಅಪಹರಿಸಿ, ₹ 1 ಕೋಟಿಗೆ ಬೇಡಿಕೆ ಇಟ್ಟಿದ್ದ ಏಳು ಮಂದಿ ಆರೋಪಿಗಳನ್ನು ಹು–ಧಾ ಪೊಲೀಸ್ ಕಮಿಷನರೇಟ್ ಘಟಕದ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಸ್ಥಳೀಯ ನಿವಾಸಿಗಳಾದ ಮಹ್ಮದ್ ಆರಿಫ್, ಇಮ್ರಾನ್, ಅಬ್ದುಲ್ ಕರೀಮ್, ಹುಸೇನ್ ಸಾಬ್, ಇಮ್ರಾನ್ ಮದರಲಿ, ತೌಸಿಫ್ ಮತ್ತು ಮಹಮ್ಮದ್ ರಜಾಕ್ ಬಂಧಿತರು.

ಗರೀಬ್‌ನವಾಜ್ ಅಪಹರಣ ಆಗಿರುವ ಕುರಿತು ಆ. 6ರಂದು ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಕಲಾಗಿತ್ತು. ಕಮಿಷನರ್ ಲಾಭೂರಾಮ್ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್‌ಗಳಾದ ಶ್ಯಾಮರಾಜ್ ಸಜ್ಜನರ್, ಜಗದೀಶ ಹಂಚನಾಳ, ಜೆ.ಎಂ. ಕಾಲಿಮಿರ್ಚಿ ಮತ್ತು ರವಿಚಂದ್ರ ಬಡಾಫಕ್ಕೀರಪ್ಪನವರ ನೇತೃತ್ವದಲ್ಲಿ ಕಾರ್ಯಾಚರಣೆಗೆ ನಾಲ್ಕು ವಿಶೇಷ ತಂಡ ರಚಿಸಲಾಗಿತ್ತು. ಆರೋಪಿಗಳ ಮೊಬೈಲ್ ನೆಟ್‌ವರ್ಕ್ ಜಾಡು ಹಿಡಿದು ಬೆಳಗಾವಿಯ ಕಿತ್ತೂರು ಬಳಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಏನಿದು ಪ್ರಕರಣ: ‘ನಗರದ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಗರೀಬ್‌ನವಾಜ್ ಅವರ ಸ್ನೇಹಿತ ದಿಲ್ವಾರ್, ಆನ್‌ಲೈನ್‌ನಲ್ಲಿ ಕ್ಯಾಸಿನೋ ಗೇಮ್ ಆಡಿ, ಸುಮಾರು ₹ 10 ಕೋಟಿ ಸಂಪಾದಿಸಿದ್ದ. ಸ್ನೇಹಿತರ ಜೊತೆ ಸೇರಿ ಬೇಕಾಬಿಟ್ಟಿಯಾಗಿ ಹಣ ವೆಚ್ಚ ಮಾಡುತ್ತಿದ್ದ. ಅಲ್ಲದೆ, ಅಷ್ಟೊಂದು ಹಣ ತನ್ನಲ್ಲಿ ಇಟ್ಟುಕೊಳ್ಳಲು ಸಮಸ್ಯೆಯಾಗುತ್ತದೆ ಎಂದು ಸ್ನೇಹಿತ ಗರೀಬ್‌ನವಾಜ್ ಖಾತೆಗೆ ಒಂದಷ್ಟು ಹಣ ವರ್ಗಾಯಿಸಿರುತ್ತಾನೆ. ಈ ವಿಷಯ ತಿಳಿದ ಆರೋಪಿತರು ಅವನ ಸ್ನೇಹಿತ, ಮಹ್ಮದ್ ಆರೀಫ್ ಎಂಬುವವನ ಸಹಾಯ ಪಡೆದು, ಗರೀಬ್‌ನವಾಜ್‌ನನ್ನು ಗೋಕುಲ ರಸ್ತೆಯ ಡೆಕಥ್ಲಾನ್ ಬಳಿ ಅಪಹರಿಸುತ್ತಾರೆ. ನಂತರ ಅವರ ತಂದೆಗೆ ಕರೆ ಮಾಡಿ ₹1ಕೋಟಿಗೆ ಬೇಡಿಕೆ ಇಡುತ್ತಾರೆ. ಒಪ್ಪದಿದ್ದಾಗ ₹15 ಲಕ್ಷ ನೀಡಬೇಕು, ಇಲ್ಲದಿದ್ದರೆ ಕೊಲೆ ಮಾಡುವುದಾಗಿ ಬೆದರಿಸಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.