ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದ ಸಂಜೀವಿನಿ ಎಂದೇ ಹೆಸರಾಗಿರುವ ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ಆಸ್ಪತ್ರೆಯಲ್ಲಿ ನವಜಾತ ಶಿಶುಗಳ ಸಾವಿನ ಪ್ರಮಾಣ ಇಳಿಕೆಯಾಗಿದೆ.
ಆಸ್ಪತ್ರೆಯಲ್ಲಿನ ನವಜಾತ ಶಿಶುಗಳ ತೀವ್ರ ನಿಗಾ ಘಟಕವನ್ನು (ಎನ್‌ಐಸಿಯು) ಅಗತ್ಯ ಸೌಲಭ್ಯಗಳೊಂದಿಗೆ ಮೇಲ್ದರ್ಜೆಗೇರಿಸಲಾಗಿದೆ. ಆಸ್ಪತ್ರೆಯಲ್ಲಿ ಜನಿಸುವ ಶಿಶುಗಳ ಆರೈಕೆಗೆ 65 ಬೆಡ್ ಮತ್ತು ಹೊರಗಡೆಯಿಂದ ಕರೆತರುವ ಶಿಶುಗಳಿಗಾಗಿ 45 ಸೇರಿದಂತೆ 110 ಬೆಡ್ ಸೌಲಭ್ಯ ಇಲ್ಲಿ ಇದೆ.
ಆಸ್ಪತ್ರೆಯಲ್ಲಿ ಪ್ರತಿ ದಿನ 30ರಿಂದ 40 ಶಿಶುಗಳು ಜನಿಸುತ್ತವೆ. ಅದರಲ್ಲಿ ಶೇ 10–15ರಷ್ಟು ಶಿಶುಗಳಿಗೆ ಎನ್‌ಐಸಿಯುದಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಅಲ್ಲದೆ, ಪ್ರತಿ ತಿಂಗಳು ಬೇರೆ ಬೇರೆ ಜಿಲ್ಲೆಗಳಿಂದ 100ರಿಂದ 130 ಶಿಶುಗಳನ್ನು ಚಿಕಿತ್ಸೆಗಾಗಿ ಇಲ್ಲಿಗೆ ಕರೆತರಲಾಗಿದೆ.
2022ರಲ್ಲಿ ಆಸ್ಪತ್ರೆಯಲ್ಲಿ 11,561 ಶಿಶುಗಳು ಜನಿಸಿದ್ದು, ಅದರಲ್ಲಿ 336 ಮಕ್ಕಳು ಮೃತಪಟ್ಟಿದ್ದವು. 2023ರಲ್ಲಿ 11,807 ಮಕ್ಕಳು ಜನಿಸಿದ್ದು, 297 ಶಿಶುಗಳು ಸಾವನ್ನಪ್ಪಿದ್ದವು. ಮರಣ ಪ್ರಮಾಣ ಶೇ 2.51ರಷ್ಟಿತ್ತು. 2024ರಲ್ಲಿ ಜನಿಸಿದ 10,753 ಶಿಶುಗಳ ಪೈಕಿ 261 (ಶೇ 2.42) ಮೃತಪಟ್ಟಿವೆ.
ಬೇರೆ ಜಿಲ್ಲೆಗಳಿಂದ ಚಿಕಿತ್ಸೆಗೆ ಕರೆತಂದ ಶಿಶುಗಳ ಪೈಕಿ 2022ರಲ್ಲಿ 123 ಮೃತಪಟ್ಟರೆ, 2023ರಲ್ಲಿ 128 ಮತ್ತು 2024ರಲ್ಲಿ 193 ಶಿಶುಗಳು ಸಾವನ್ನಪ್ಪಿವೆ. ಪ್ರಸಕ್ತ ವರ್ಷ ಜನವರಿಯಿಂದ ಏಪ್ರಿಲ್‌ವರೆಗೆ ಆಸ್ಪತ್ರೆಯಲ್ಲಿ ಜನಿಸಿದ 1,268 ಶಿಶುಗಳ ಪೈಕಿ 114 ಮೃತಪಟ್ಟಿವೆ. ಇದೇ ಅವಧಿಯಲ್ಲಿ ಹೊರಗಡೆಯಿಂದ ಕರೆತಂದ 462 ಶಿಶುಗಳಲ್ಲಿ 61 ಶಿಶುಗಳು ಸಾವನ್ನಪ್ಪಿವೆ.
ಈ ಬಗ್ಗೆ ಮಾಹಿತಿ ನೀಡಿದ ಕೆಎಂಸಿಆರ್‌ಐ ಮಕ್ಕಳ ವಿಭಾಗದ ಮುಖ್ಯಸ್ಥ ಡಾ.ವಿನೋದ ರಟಗೇರಿ, ‘ಹುಬ್ಬಳ್ಳಿ–ಧಾರವಾಡ ಸೇರಿದಂತೆ ಸುತ್ತಮುತ್ತಲಿನ ಎಳೆಂಟು ಜಿಲ್ಲೆಗಳಿಂದ ನವಜಾತ ಶಿಶುಗಳನ್ನು ಇಲ್ಲಿಗೆ ಕರೆತರುತ್ತಾರೆ. ಕೆಲವು ಶಿಶುಗಳ ಸ್ಥಿತಿ ತರುವಾಗಲೇ ಗಂಭೀರವಾಗಿರುತ್ತದೆ. ಹೀಗಾಗಿ ಆಸ್ಪತ್ರೆಯಲ್ಲಿ ಜನಿಸಿದ ಶಿಶುಗಳಿಗಿಂತ ಹೊರಗಡೆಯಿಂದ ತರುವ ಶಿಶುಗಳ ಮರಣ ಪ್ರಮಾಣ ಅಧಿಕವಾಗಿದೆ’ ಎಂದರು.
‘ನಂಜು, ಅವಧಿಪೂರ್ವ ಜನಿಸುವುದು, ತೂಕ ಕಡಿಮೆ ಇರುವುದು, ಉಸಿರುಗಟ್ಟುವಿಕೆ ಸಮಸ್ಯೆ, ಅಂಗಾಂಗಗಳು ಸರಿಯಾಗಿ ಬೆಳವಣಿಗೆಯಾಗದಿರುವ ಕಾರಣಕ್ಕೆ ನವಜಾತ ಶಿಶುಗಳು ಸಾವನ್ನಪ್ಪುತ್ತವೆ. ಗರ್ಭಿಣಿಯರು ನಿಯಮಿತವಾಗಿ ಅರೋಗ್ಯ ತಪಾಸಣೆಗೆ ಒಳಗಾಗಬೇಕು. ಪೌಷ್ಟಿಕ ಆಹಾರ ಸೇವಿಸಬೇಕು. ಶಿಶುವನ್ನು ಮುಟ್ಟುವಾಗ ಕೈಗಳು ಸ್ವಚ್ಛವಾಗಿರಬೇಕು’ ಎಂದು ಸಲಹೆ ನೀಡಿದರು.
‘ಹೆರಿಗೆ ನಂತರ ತಾಯಿಗೆ ಆರೋಗ್ಯ ಸಮಸ್ಯೆ ಇದ್ದರೆ ಶಿಶುವಿಗೆ ಎದೆಹಾಲು ಕುಡಿಸಲು ಸಾಧ್ಯವಾಗುವುದಿಲ್ಲ. ಆ ಸಮಯದಲ್ಲಿ ಪೌಡರ್ ಹಾಲು ಕೊಡಲಾಗುತ್ತಿತ್ತು. ಇದನ್ನು ತಪ್ಪಿಸಲು ಕೆಎಂಸಿಆರ್‌ಐನಲ್ಲಿ ‘ಜೀವಾಮೃತ’ ತಾಯಿಯ ಎದೆಹಾಲು ಸಂಗ್ರಹ ಕೇಂದ್ರ ಸ್ಥಾಪಿಸಲಾಗಿದ್ದು, ಇದರಿಂದ ಸಾಕಷ್ಟು ಅನುಕೂಲವಾಗಿದೆ’ ಎಂದರು.
‘ಆಸ್ಪತ್ರೆಯಲ್ಲಿ ನವಜಾತ ಶಿಶುಗಳ ಮರಣ ಪ್ರಮಾಣ ಕಡಿಮೆಯಾಗಿದೆ. ಎನ್‌ಐಸಿಯು ಬೆಡ್‌ಗಳ ಸಂಖ್ಯೆಯನ್ನು ಹೆಚ್ಚಿಸಿದರೆ ಮರಣ ಪ್ರಮಾಣವನ್ನು ಇನ್ನೂ ಕಡಿಮೆ ಮಾಡಬಹುದು. ಆ ನಿಟ್ಟಿನಲ್ಲಿ ಬೆಡ್‌ಗಳ ಸಂಖ್ಯೆಯನ್ನು 250ಕ್ಕೆ ಹೆಚ್ಚಿಸಲು ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಕೆಎಂಸಿ–ಆರ್‌ಐ ವೈದ್ಯಕೀಯ ಅಧೀಕ್ಷಕ ಡಾ.ಈಶ್ವರ ಹಸಬಿ ಹೇಳಿದರು. ‘ಮಕ್ಕಳ ವಿಭಾಗದಲ್ಲಿ ಸದ್ಯ 14 ಸಿಬ್ಬಂದಿ ಇದ್ದಾರೆ. ಬೆಡ್‌ಗಳಿಗೆ ಅನುಗುಣವಾಗಿ ವೈದ್ಯರು ಶುಶ್ರೂಷಕರು ಗ್ರೂ ‘ಡಿ’ ಸಿಬ್ಬಂದಿ ಸಂಖ್ಯೆಯನ್ನು ಹೆಚ್ಚಿಸಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.